ಕನ್ನಡ ಸುದ್ದಿ  /  Karnataka  /  Goddess Of Karnataka: Committee Submits Perfect Uniform Image Of Nadadevata Bhuavneshwari To Karnataka Govt; Official Order Expected Soon

Goddess of Karnataka: ನಾಡದೇವತೆಯ ಪರಿಪೂರ್ಣ ಏಕರೂಪದ ಚಿತ್ರ ಸರ್ಕಾರಕ್ಕೆ ಸಲ್ಲಿಸಿದ ಸಮಿತಿ;‌ ಶೀಘ್ರವೇ ಅಧಿಕೃತ ಆದೇಶದ ನಿರೀಕ್ಷೆ

Goddess of Karnataka: ಕರ್ನಾಟಕದ ನಾಡದೇವತೆಯ ಪರಿಪೂರ್ಣ ಏಕರೂಪದ ಭಾವಚಿತ್ರವನ್ನು ಅಧಿಕೃತಗೊಳಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಲು ಸರ್ಕಾರ ಶೀಘ್ರವೇ ಅಧಿಸೂಚನೆ ಪ್ರಕಟಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌

ಬೆಂಗಳೂರು: ರಾಜ್ಯದ ನಾಡದೇವತೆ ʻಭುವನೇಶ್ವರಿʼಯ ಏಕರೂಪದ ಭಾವಚಿತ್ರವನ್ನು ಅಧಿಕೃತಗೊಳಿಸಲು ರಚಿಸಿದ್ದ ಸಮಿತಿಯು, ನಾಡದೇವತೆಯ ಪರಿಪೂರ್ಣ ಚಿತ್ರವನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕರ್ನಾಟಕದ ನಾಡದೇವತೆಯ ಪರಿಪೂರ್ಣ ಏಕರೂಪದ ಭಾವಚಿತ್ರವನ್ನು ಅಧಿಕೃತಗೊಳಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಲು ಸರ್ಕಾರ ಶೀಘ್ರವೇ ಅಧಿಸೂಚನೆ ಪ್ರಕಟಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಅವರು ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತ ಈ ವಿಚಾರ ತಿಳಿಸಿದರು. ರಾಜ್ಯದಲ್ಲಿ ನಾಡದೇವತೆ ತಾಯಿ ಭುವನೇಶ್ವರಿಯ ಭಾವಚಿತ್ರ ಬಳಸುವ ಸಂದರ್ಭ ಬಂದಾಗ ಅನೇಕರು ದುರ್ಗಾದೇವಿ, ಸರಸ್ವತಿ ಮುಂತಾದ ದೇವಿಯರ ಚಿತ್ರವನ್ನು ಬಳಸುತ್ತಿದ್ದಾರೆ. ಹೀಗಾಗಿ ಸರ್ಕಾರವೇ ನಾಡದೇವತೆಯ ಅಧಿಕೃತ ಚಿತ್ರವನ್ನು ಅಂತಿಮಗೊಳಿಸಿ ಅಧಿಸೂಚನೆ ಪ್ರಕಟಿಸಲಿದೆ ಎಂದು ಅವರು ವಿವರಿಸಿದರು.

ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ.ಮಹೇಂದ್ರ ನೇತೃತ್ವದ ಸಮಿತಿಯನ್ನು ಇದಕ್ಕಾಗಿ ನೇಮಕ ಮಾಡಲಾಗಿತ್ತು. ಸಮಿತಿಯು ನಾಡಗೀತೆಯಿಂದ ಹಿಡಿದು ಕರ್ನಾಟಕದ ವೈಶಿಷ್ಟ್ಯಗಳನ್ನು ಗಮನಿಸಿ ಕಲಾವಿದ ಕೆ.ಸೋಮಶೇಖರ್‌ ಅವರಿಂದ ತಾಯಿ ಭುವನೇಶ್ವರಿಯ ಚಿತ್ರವನ್ನು ಬರೆಯಿಸಿದೆ. ಅದೇ ಚಿತ್ರವನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸಿ ಶಿಫಾರಸು ಮಾಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದನ್ನು ಅಂಗೀಕರಿಸಿದೆ. ಮುಖ್ಯಮಂತ್ರಿಯವರ ಗಮನಕ್ಕೆ ಈ ಪ್ರಸ್ತಾವನೆಯನ್ನು ಸಲ್ಲಿಸಿ ಅವರಿಂದ ಒಪ್ಪಿಗೆ ಪಡೆದ ಬಳಿಕ ಭುವನೇಶ್ವರಿಯ ಭಾವಚಿತ್ರವನ್ನು ಸರ್ಕಾರವೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಈಗ ಸಲ್ಲಿಕೆಯಾಗಿರುವ ತಾಯಿ ಭುವನೇಶ್ವರಿಯ ಚಿತ್ರದಲ್ಲಿ ನಾಡಿನ ಹಲವು ವಿಶೇಷಗಳು ಒಳಗೊಂಡಿವೆ. ಆ ಚಿತ್ರವೇ ಇನ್ನು ಮುಂದೆ ರಾಜ್ಯದ ಎಲ್ಲ ಕಡೆ ಪ್ರದರ್ಶಿಸಲ್ಪಡಬೇಕು. ಹೊಯ್ಸಳರು, ಕದಂಬರು, ಮೈಸೂರು ಅರಸರು ಸೇರಿ ರಾಜ್ಯವನ್ನು ಆಳಿದ ಹಲವು ಪ್ರಮುಖ ರಾಜಮನೆತನಗಳ ವೈಶಿಷ್ಟ್ಯಗಳು ಭುವನೇಶ್ವ ರಿಯ ಚಿತ್ರದಲ್ಲಿ ಅಡಕವಾಗಿದೆ. ಇನ್ನು ಮುಂದೆ ಅದೇ ಅಧಿಕೃತ ನಾಡದೇವತೆ ಚಿತ್ರವಾಗಲಿದೆ ಎಂದು ಸಚಿವ ವಿ.ಸುನಿಲ್‌ ಕುಮಾರ್‌ ಸ್ಪಷ್ಟಪಡಿಸಿದರು.

ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸಿನ ಅನುಸಾರ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಮಾಡಲಾಗಿದೆ. ಹೊಸದಾಗಿ ಶುರುವಾಗುತ್ತಿರುವ ಕೈಗಾರಿಕೆಗಳಲ್ಲಿ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡಬೇಕು. ಅನುಸರಿಸದ ಕೈಗಾರಿಕೆಗಳಿಗೆ, ಕಂಪನಿಗಳಿಗೆ ಸರಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಉದ್ದೇ ಶಿಸಲಾಗಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಇದೇ ವೇಳೆ ಹೇಳಿದರು.

ಸಚಿವರು ಪ್ರಸ್ತಾಪಿಸಿದ ಇತರೆ ವಿಚಾರಗಳು

  • ಕನ್ನಡವೇ ಆಡಳಿತ ಭಾಷೆಯಾಗಬೇಕೆಂಬ ಸಂಬಂಧ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
  • ಕನ್ನಡ ನಾಮಫಲಕಗಳು ಕಡಿಮೆಯಾಗುತ್ತಿದ್ದು, ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲಾಗುವುದು.
  • ನಶಿಸುತ್ತಿರುವ ಕಲೆಗಳ ಪುನರುಜೀವನಕ್ಕೆ ಡಿಸೆಂಬರ್ 6 ರಿಂದ ಎರಡು ತಿಂಗಳ ಕಾಲ ಸಂಸ್ಕೃತಿ ಇಲಾಖೆಯಿಂದ ಶಿಬಿರಗಳನ್ನು ನಡೆಸುವ ಯೋಜನೆ ಇದೆ. ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಈ ಕಲೆಗಳನ್ನು ಪುನರುಜೀವಗೊಳಿಸುವ ಕೆಲಸ ಮಾಡಿದರೆ ಮತ್ತು ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರೆ ಕನ್ನಡ ನಾಡಿನ ಆಸ್ಮಿತೆಯನ್ನು ಉಳಿಸಿದಂತಾಗುತ್ತದೆ.
  • ಹಾವೇರಿಯಲ್ಲಿ 2023ರ ಜನವರಿ 6ರಿಂದ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಭುವನೇಶ್ವರಿ ರಥ 20 ಜಿಲ್ಲೆಗಳಿಂದ ಹೊರಟು ಹಾವೇರಿ ತಲುಪಲಿದೆ.

IPL_Entry_Point