ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ತಪ್ಪದ ಸಂಕಷ್ಟ; ಜೈಲಿನಲ್ಲೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ತಪ್ಪದ ಸಂಕಷ್ಟ; ಜೈಲಿನಲ್ಲೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ

ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ತಪ್ಪದ ಸಂಕಷ್ಟ; ಜೈಲಿನಲ್ಲೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ

ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್‌ಗೆ ಸಂಕಷ್ಟ ತಪ್ಪಿಲ್ಲ. ಜೈಲಿನಲ್ಲಿಯೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ ನೀಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ನಟಿ ರನ್ಯಾ ರಾವ್‌ ಅವರನ್ನು ಜೈಲಿನಲ್ಲಿಯೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ ನೀಡಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ನಟಿ ರನ್ಯಾ ರಾವ್‌ ಅವರನ್ನು ಜೈಲಿನಲ್ಲಿಯೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್‌ ಅನುಮತಿ ನೀಡಿದೆ.

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿತ್ರನಟಿ ರನ್ಯಾ ರಾವ್‌ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದೀಗ ಆದಾಯ ತೆರಿಗೆ ಇಲಾಖೆ ಅವರ ಬೆನ್ನ ಹಿಂದೆ ಬಿದ್ದಿದೆ. ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದಿರುವ ಆದಾಯ ತೆರಿಗೆ ಇಲಾಖೆ ಜೈಲಿನಲ್ಲೇ ರನ್ಯಾ ರಾವ್‌ ಅವರ ವಿಚಾರಣೆ ನಡೆಸಲು ಮುಂದಾಗಿದೆ.

ಜೂನ್‌ 11 ರಿಂದ 13 ರವರೆಗೆ ಬೆಳಗ್ಗೆ 10ರಿಂದ 5 ಗಂಟೆಯವರೆಗೆ ಪ್ರಶ್ನಿಸಲು ಅನುಮತಿ ನೀಡಲಾಗಿದೆ. ಐಟಿ ಇಲಾಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ರನ್ಯಾ ರಾವ್‌ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಐಟಿ ಇಲಾಖೆ ಸಹಾಯಕ ನಿರ್ದೇಶಕರು ಕಳೆದ ವಾರ ಚಿನ್ನ ಕಳ್ಳ ಸಾಗಣೆಯಲ್ಲಿ ಗಳಿಸಿದ ಆದಾಯ ಕುರಿತು ರನ್ಯಾ ರಾವ್‌ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. 33 ವರ್ಷದ ರನ್ಯಾ ರಾವ್‌ ಅವರನ್ನು ಮಾರ್ಚ್‌ 3 ರಂದು 12.56 ಕೋಟಿ ರೂ. ಮೌಲ್ಯದ 14.2 ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ಬಂಧಿಸಲಾಗಿತ್ತು. ಈ ಕೃತ್ಯಕ್ಕೆ ವಿರಣೆ ನೀಡಲಾಗದ ಮೂಲಗಳ ನಗದನ್ನು ಬಳಸಲಾಗಿದ್ದು, ಮೂರು ದಿನಗಳ ಕಾಲ ಆಕೆಯ ವಿಚಾರಣೆ ಮಾಡಲು ನಿರ್ಧರಿಸಲಾಗಿದೆ.

ಕಸ್ಟಮ್ಸ್‌ ಕಾಯಿದೆ ಮತ್ತು ಆದಾಯ ತೆರಿಗೆ ಕಾಯಿದೆ ಎರಡೂ ಬೇರೆ ಬೇರೆಯಾಗಿದ್ದು, ಐಟಿ ಕಾಯಿದೆ ಅಡಿಯಲ್ಲಿ ಹೇಳಿಕೆ ನೀಡಲು ಅಸಾಧ್ಯ. ಅಲ್ಲದೆ ಸಂವಿಧಾನದ 22 ನೇ ಕಾಯಿದೆಗೂ ವಿರುದ್ಧವಾಗಿದೆ ಎಂದು ರನ್ಯಾ ಪರ ವಕೀಲ ಬಿಎಸ್‌ ಗಿರೀಶ್‌ ವಾದಿಸಿದ್ದರು. ಐಟಿ ಇಲಾಖೆಯ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌, ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿಕೊಂಡು ಬಂದು ಭಾರಿ ಮೊತ್ತದ ನಗದು ಚಲಾವಣೆಯಾಗಿದೆ. ಆದ್ದರಿಂದ ಅವರನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ವಾದಿಸಿದ್ದರು.

ರನ್ಯಾ ಅವರನ್ನು ಕಂದಾಯ ಗುಪ್ತಚರ ಇಲಾಖೆ ಮಾರ್ಚ್‌ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಕೆಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ರನ್ಯಾ ನಿವಾಸದಿಂದ 2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ.ನಗದು ಜಪ್ತಿ ಮಾಡಲಾಗಿತ್ತು. ರನ್ಯಾ ರಾವ್‌ ಗೆ ಸಹಕಾರ ನೀಡಿದ ಆರೋಪದಡಿಯಲ್ಲಿ ತೆಲುಗು ನಟ ತರುಣ್‌ ಕೊಂಡೂರು ಎಂಬಾತನನ್ನು ಬಂಧಿಸಲಾಗಿತ್ತು. ಮಾರ್ಚ್‌ 9ರಂದು ಬಂಧಿಸಲಾಗಿತ್ತು.

ರನ್ಯಾ ರಾವ್ ಮಲತಂದೆ ಹಿರಿಯ ಐಪಿಎಸ್‌ ಅಧಿಕಾರಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾಗಿದ್ದ ರಾಮಚಂದ್ರ ರಾವ್ ಅವರನ್ನು ಮಾರ್ಚ್ 15ರಂದು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಇವರ ನೆರವಿನಿಂದ ರನ್ಯಾ ಅವರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೆ ಹೊರಬರುತ್ತಿದ್ದರು.

ಮಾರ್ಚ್‌ 26ರಂದು ಡಿಆರ್‌ ಐ ಅಧಿಕಾರಿಗಳು ರನ್ಯಾ ಅವರ ಮತ್ತೊಬ್ಬ ಸಹಚರ ಹವಾಲಾ ಡೀಲರ್‌ ಸಾಹಿಲ್‌ ಜೈನ್‌ ಎಂಬಾತನನ್ನು ಬಂಧಿಸಿದ್ದರು. ನವಂಬರ್‌ 2024 ರಿಂದ ಫೆಬ್ರವರಿ 2025ರವರೆಗೆ ರನ್ಯಾ ರಾವ್‌ ಕಳ್ಳ ಸಾಗಣೆ ಮಾಡಿದ್ದ 40.13 ಕೋಟಿ ರೂ. ಮೌಲ್ಯದ 49.6 ಕೆಜಿ ಚಿನ್ನವನ್ನು ಸಾಹಿಲ್‌ ವಿಲೇವಾರಿ ಮಾಡಿದ್ದ. 2024-25ರ ಅವಧಿಯಲ್ಲಿ ರನ್ಯಾ ಮತ್ತು ಆಕೆಯ ಸಹಚರರು ಸುಮಾರು 100 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದಾರೆ ಎಂದು ಡಿಆರ್‌ ಐ ಆಪಾದಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯವೂ ಚಿನ್ನ ಕಳ್ಳ ಸಾಗಣೆ ಕುರಿತು ತನಿಖೆ ನಡೆಸುತ್ತಿವೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಒಡೆತನದ ಕಾಲೇಜು ಖಾತೆಯಿಂದ ರನ್ಯಾ ರಾವ್‌ ಖಾತೆಗೆ 40 ಲಕ್ಷ ರೂ. ಹಣ ವರ್ಗಾವಣೆ ಆಗಿರುವ ಸಂಬಂಧ ಪರಮೇಶ್ವರ್‌ ಅವರ ಟ್ರಸ್ಟ್‌ ಮೇಲೆ ಇಡಿ ದಾಳಿ ನಡೆಸಿತ್ತು.

(ವರದಿ- ಎಚ್.ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.