ಚಿನ್ನ ಕಳ್ಳಸಾಗಣೆ ಕೇಸ್: ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಅನ್ವಯ; ಒಂದು ವರ್ಷ ಬಂಧನ ಸಾಧ್ಯತೆ, ಏನಿದು ಕಾಫಿಪೋಸಾ? ಇಲ್ಲಿದೆ ಸಮಗ್ರ ಮಾಹಿತಿ
ರನ್ಯಾ ರಾವ್ ವಿರುದ್ಧ ಕಾಫಿಫೋಸಾ: ದೊಡ್ಡ ಪ್ರಮಾಣದ ಚಿನ್ನ ಕಳ್ಳಸಾಗಣೆ ಮಾಡಿ ಚಿನ್ನದ ಮಾಲಿನ ಸಹಿತ ವಿಮಾನ ನಿಲ್ಧಾಣದಲ್ಲಿ ಸಿಕ್ಕಿ ಬಿದ್ದ ನಟಿ ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಪ್ರಕಾರ ಬಂಧನ ಆದೇಶ ಜಾರಿಯಾಗಿದೆ. ಏನಿದು ಕಾಫಿಪೋಸಾ? ಸಮಗ್ರ ಮಾಹಿತಿ ಇಲ್ಲಿದೆ.

ರನ್ಯಾ ರಾವ್ ವಿರುದ್ಧ ಕಾಫಿಫೋಸಾ: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರನ್ಯಾ ರಾವ್ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿದೆ. ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್ ಅಡಿಯಲ್ಲಿ ರನ್ಯಾ ವಿರುದ್ಧ ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್ ಏಪ್ರಿಲ್ 22ರಂದು ಬಂಧನ ಆದೇಶ ಹೊರಡಿಸಿದ್ದಾರೆ.
ಏನಿದು ಕಾಫಿಪೋಸಾ?
ಚಿನ್ನ ಕಳ್ಳಸಾಗಣೆ ಮತ್ತು ಇತರ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿ ಕೊಂಡ ಆರೋಪ ಎದುರಿಸುತ್ತಿರುವ ವ್ಯಕ್ತಿಗಳನ್ನು ಕಾಫಿಪೋಸಾ ಕಾಯ್ದೆ ಪ್ರಕಾರ ಬಂಧಿಸಲಾಗುತ್ತದೆ. ಈ ರೀತಿ ಬಂಧಿತರಾದವರನ್ನು ಕನಿಷ್ಠ 3 ತಿಂಗಳಿಂದ 1 ವರ್ಷದವರೆಗೂ ಸೆರೆವಾಸದಲ್ಲಿ ಇರಿಸಬಹುದು. ತೀರಾ ಗಂಭೀರ ಪ್ರಕರಣ ಎಂದು ದೃಢೀಕರಿಸಲ್ಪಟ್ಟರೆ ಬಂಧಿತರ ಸೆರೆವಾಸವನ್ನು 2 ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.
ಕಾಫಿಪೋಸಾ ಎಂದರೇನು
ಕಾಫಿಪೋಸಾ ಕಾಯ್ದೆ (COFEPOSA Act) ಎಂಬುದು ಕನ್ಸರ್ವೇಶನ್ ಆಫ್ ಪಾರಿನ್ ಎಕ್ಸ್‌ಚೇಂಜ್ ಆಂಡ್ ಪ್ರಿವೆನ್ಶನ್ ಆಫ್ ಸ್ಮಗ್ಲಿಂಗ್ ಆಕ್ಟಿವಿಟೀಸ್ ಆಕ್ಟ್ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, 1974ರಲ್ಲಿ ಜಾರಿಗೆ ಬಂತು.
ಕಾಫಿಪೋಸಾ ಅನ್ವಯಿಸಲ್ಪಡುವ 3 ಚಟುವಟಿಕೆಗಳು
ಕಾಫಿಪೋಸಾ ಎಂಬುದು ಮುಂಜಾಗ್ರತಾ ಬಂಧನಕ್ಕೆ ಅವಕಾಶ ನೀಡುವ ಕಾಯ್ದೆ. ಇದು ಮೂರು ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸುತ್ತಿದ್ದು, ಅಂತಹ ಶಂಕೆ ಯಾವುದೇ ವ್ಯಕ್ತಿಯ ಮೇಲೆ ಉಂಟಾದರೆ ಅಂಥವರನ್ನು ಯಾವುದೇ ವಿಚಾರಣೆ ಇಲ್ಲದೇ ಭಾರತ ಸರ್ಕಾರ ಬಂಧಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅಂತಹ ಆಯ್ದ 3 ಚಟುವಟಿಕೆಗಳಿವು
1) ಕಳ್ಳಸಾಗಣೆ - ವಿಶೇಷವಾಗಿ ಚಿನ್ನ, ಮಾದಕವಸ್ತು ಮತ್ತು ಇತರೆ
2) ವಿದೇಶ ವಿನಿಮಯ ಕಾನೂನು ಉಲ್ಲಂಘನೆ
3) ಭಾರತದ ಅರ್ಥ ವ್ಯವಸ್ಥೆಗೆ ಬೆದರಿಕೆ ಉಂಟುಮಾಡುವಂತಹ ಯಾವುದೇ ಕೃತ್ಯ
ಕಾಫಿಪೋಸಾದ 4 ಮುಖ್ಯ ಅಂಶಗಳು
ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಫೋಸಾ) ರನ್ಯಾ ರಾವ್ ಕೇಸ್ ಮೂಲಕ ಮತ್ತೆ ಜನರ ಗಮನ ಸೆಳೆದಿದೆ. ಈ ಕಾಯ್ದೆಯ 4 ಮುಖ್ಯ ಅಂಶಗಳಿವು
1) ವಿಚಾರಣೆ ರಹಿತ ಬಂಧನ: ಒಂದೊಮ್ಮೆ ಆರೋಪಿ ಬೇರೆ ಕೇಸ್‌ಗಳಲ್ಲಿ ಜಾಮೀನು ಪಡೆದುಕೊಂಡಿದ್ದರೂ, ಕಾಫಿಪೋಸಾ ಪ್ರಕಾರ ಬಂಧನದ ಆದೇಶವಾಯಿತು ಎಂದರೆ ಅಂತಹ ಸಂದರ್ಭದಲ್ಲಿ ಒಂದು ವರ್ಷ ತನಕ ವಿಚಾರಣೆ ಇಲ್ಲದೇ ಬಂಧನದಲ್ಲಿರಿಸುವ ಅವಕಾಶವಿರುತ್ತದೆ.
2) ದೊಡ್ಡ ಮೊತ್ತ ಕಳ್ಳಸಾಗಣೆದಾರರ ಮೇಲೆ ಅನ್ವಯ: ಪದೇಪದೆ ದೊಡ್ಡ ಮೊತ್ತದ ಚಿನ್ನ ಮತ್ತು ಇತರೆ ವಸ್ತುಗಳ ಕಳ್ಳಸಾಗಣೆ ಮತ್ತು ವಿದೇಶ ವಿನಿಮಯ ಉಲ್ಲಂಘನೆ ನಡೆಸುವವರ ವಿರುದ್ಧ ಕಾಫಿಫೋಸಾ ಅನ್ವಯವಾಗುತ್ತದೆ.
3) ಬಂಧನ ಆದೇಶ: ಗುಪ್ತಚರ ಮಾಹಿತಿ ಆಧರಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಇಂತಹ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಾಫಿಪೋಸಾ ಪ್ರಕಾರ ಬಂಧನದ ಆದೇಶ ಹೊರಡಿಸಬಹುದು.
4) ಉಳಿದ ಕಾನೂನುಗಳಿಗಿಂತ ಭಿನ್ನ: ಕಾಫಿಪೋಸಾ ಅನ್ವಯವಾದರೆ, ಅಂತಹ ಪ್ರಕರಣಗಳ ವಿಚಾರಣೆ ಇತರೆ ಅಪರಾಧ ಪ್ರಕರಣಗಳ ವಿಚಾರಣೆಗಿಂತ ಭಿನ್ನವಾಗಿರುತ್ತದೆ. ಅಂದರೆ ಈ ಕಾನೂನು ಹಳೆಯ ಅಪರಾಧ ಕೃತ್ಯಗಳಿಗೆ ಶಿಕ್ಷೆ ನೀಡುವುದಕ್ಕೆ ಇರುವಂಥದ್ದಲ್ಲ. ಬದಲಾಗಿ ಅಂತಹ ಅಪರಾಧಗಳನ್ನು ಪುನಃ ಮಾಡದಂತೆ ತಡೆಯುವುದಕ್ಕಾಗಿ ಬಳಸಲಾಗುತ್ತದೆ.
ರನ್ಯಾ ರಾವ್ ಜಾಮೀನು ಪ್ರಯತ್ನಕ್ಕೆ ಕಾಫಿಪೋಸಾ ಕಂಟಕ
ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್ ಪ್ರಕಾರ ಬಂಧನದ ಆದೇಶ ಇರುವ ಕಾರಣ ನಟಿ ರನ್ಯಾ ರಾವ್ (ಹರ್ಷವರ್ಧಿನಿ) ಗೆ ಸದ್ಯ ಜಾಮೀನು ಸಿಗಲ್ಲ. ಬಂಧನದ ಆದೇಶದಲ್ಲಿ ‘ಈಗಾಗಲೇ ಬಂಧನದಲ್ಲಿ ಇರುವ ರನ್ಯಾ ರಾವ್ (ಹರ್ಷವರ್ಧಿನಿ) ಅವರನ್ನು ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಿ’ ಎಂಬ ಸಂದೇಶವೂ ಇದೆ. ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್ ಈ ಬಂಧನದ ಆಧೇಶವನ್ನು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ್ದು, ಅದರ ಒಂದು ಪ್ರತಿಯನ್ನು ರನ್ಯಾ ರಾವ್ ಅವರಿಗೂ ಒದಗಿಸಿದ್ದಾರೆ.