ವ್ಹೀಲಿಂಗ್ ತಡೆಗೆ ಬ್ರೇಕ್ ಯಾವಾಗ? ವಾಮಾಚಾರದ ಹೆಸರಿನಲ್ಲಿ ವಂಚನೆ, 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ವ್ಹೀಲಿಂಗ್ ತಡೆಯುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಾಮಾಚಾರದ ಹೆಸರಿನಲ್ಲಿ ವಂಚಿಸಿದವರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ವರದಿ-ಎಚ್.ಮಾರುತಿ)

ಬೆಂಗಳೂರು: ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒಂಬತ್ತು ತಿಂಗಳು ತುಂಬಿದ ಎಲ್ಲ ಮಕ್ಕಳಿಗೂ ಸುರಕ್ಷತಾ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಸಾಧನಗಳು ಲಭ್ಯವಾಗುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಡಾ.ಕೆ.ಅರ್ಚನಾ ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಬೆಂಗಳೂರಿನ ಕೆಲವು ಭಾಗಗಳಲ್ಲಿ 20 ವರ್ಷದೊಳಗಿನ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಮತ್ತು ಇತರ ವಾಹನ ಸವಾರರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟಾಗುತ್ತಿದೆ. ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ ಎಂದು ನ್ಯಾಯಪೀಠ ಕಟುವಾಗಿ ಪ್ರಶ್ನಿಸಿತು. ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವುದರಿಂದ ಅಪಘಾತಗಳು ಉಂಟಾಗಿ ಅಪಾರ ಸಾವು ನೋವು ಸಂಭವಿಸುತ್ತಿವೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕಾನೂನು ರೂಪಿಸಬೇಕು. ಬೈಕ್ ವ್ಹೀಲಿಂಗ್ ನಿಯಂತ್ರಿಸಲೇಬೇಕು. ಈ ಸಂಬಂಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮೌಖಿಕವಾಗಿ ಆದೇಶ ನೀಡಿತು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ನಿಯಮಗಳ ಜಾರಿಗೆ ಹಾಗೂ ಬೈಕ್ ಸವಾರರ ರಸ್ತೆ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪಕ್ಕದ ಶೀಲಂಕಾದಲ್ಲಿ ಮಕ್ಕಳ ಹೆಲ್ಮೆಟ್‌ಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿವೆ. ಅದೇ ಪ್ರಕಾರ ನಮ್ಮಲ್ಲೂ ಮಕ್ಕಳ ಹೆಲ್ಮಟ್‌ಗಳು ಲಭ್ಯವಾಗಬೇಕಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ ಹೆಲ್ಮೆಟ್ ಉತ್ಪಾದಕರೊಂದಿಗೆ ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಸಭೆ ನಡೆಸಿದೆ. ಮಕ್ಕಳ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಹೆಲ್ಮೆಟ್ ಧರಿಸುವುದಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ನಿಯಮಗಳೇನು? ಅವುಗಳ ಜಾರಿಗೆ ಯಾವ ಯಾವ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿತು.
ವಾಮಾಚಾರದ ಹೆಸರಿನಲ್ಲಿ ವಂಚನೆ; ದೂರು ದಾಖಲಿಸಿದ ಮಹಿಳೆ
ವಾಮಾಚಾರದ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ 80 ಸಾವಿರ ರೂ ಲಪಟಾಯಿಸಿರುವ ಪ್ರಕರಣ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ 29 ವರ್ಷದ ಮಹಿಳೆ ನೀಡಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಅಪರಿಚಿತ ನಂಬರ್‌ನಿಂದ ದೂರುದಾರ ಮಹಿಳೆಯ ವಾಟ್ಸ್ಆ್ಯಪ್‌ಗೆ ಹಲೋ ಫ್ರೆಂಡ್ ಎಂಬ ಸಂದೇಶ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ.
ಆಗ ಬಾಲ್ಯದಿಂದಲೂ ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ. ಅದು ನಿಮ್ಮ ಪತಿಯ ಮೇಲೂ ಪ್ರಯೋಗವಾಗುತ್ತಿದೆ ಎಂದು ಅಪರಿಚಿತ ಹೆದರಿಸಿದ್ದಾನೆ. ನಿಮ್ಮ ಮೇಲೆ ನಡೆದಿರುವ ವಾಮಾಚಾರವನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಕೇಳಿದ್ದಾನೆ. ವಾಮಾಚಾರದ ಮಾತಿಗೆ ಹೆದರಿದ ಮಹಿಳೆ ಆರೋಪಿಯ ಖಾತೆಗೆ ರೂ. 80 ಸಾವಿರ ಹಣವನ್ನು ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ಆರೋಪಿ ಮತ್ತೆ ಸಂಪರ್ಕಕ್ಕೆ ಪ್ರಯತ್ನ ನಡೆಸಿದ್ದಾನೆ. ತಾನು ಮೋಸ ಹೋಗಿರುವುದು ಅರಿವಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
7ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆ
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯಲ್ಲಿ 7ನೇ ತರಗತಿ ಓದುತ್ತಿರುವ 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಣ್ಣ ಮತ್ತು ತಂಗಿ ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಮೃತ ವಿದ್ಯಾರ್ಥಿಯ ಪೋಷಕರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಎಂದಿನಂತೆಯೇ ಮಕ್ಕಳನ್ನು ಶಾಲೆಗೆ ಕಳುಹಿಸಿ ಪೋಷಕರು ಕೆಲಸಕ್ಕೆ ತೆರಳಿದ್ದರು. ಸಂಜೆ ಅಣ್ಣ, ತಂಗಿ ಮನೆಗೆ ಮರಳಿದ್ದಾರೆ.
ಕೆಲಸದಿಂದ ಹಿಂತಿರುಗಿದ ತಾಯಿ ಮನೆಗೆ ಬಂದಾಗ ಕೋಣೆಯಲ್ಲಿ ಪುತ್ರ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಕೂಡಲೇ ಆಕೆ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಶಾಲೆಗೆ ತೆರಳಿ ಶಿಕ್ಷಕರನ್ನು ವಿಚಾರಣೆ ನಡೆಸಲಾಗಿದ್ದು ಶಾಲೆಯಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಮೊಬೈಲ್ ಬಳಸದಂತೆ ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗೆ ತಿಳಿಸಿದ್ದಾಗಿ ಶಿಕ್ಷಕರು ತಿಳಿಸಿದ್ದರಂತೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
