ಕನ್ನಡ ಸುದ್ದಿ  /  Karnataka  /  Government Is Committed To Protect Kannadigas Says Cm Bommai

Basavaraj Bommai: 'ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧ, ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವುದು ನಮ್ಮ ಧ್ಯೇಯ'

ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ನಮ್ಮ ಸರ್ಕಾರದ ಸಂಕಲ್ಪವಾಗಿದ್ದು, ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸುವುದು ನಮ್ಮ ಧ್ಯೇಯವಾಗಿದೆ. ಇತರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯದ ಪ್ರದೇಶಗಳ 1800 ಗ್ರಾಮ ಪಂಚಾಯತ್ ಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪುಗೊಂಡಿದ್ದು, ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಳಗಾವಿ: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ‌, ಅವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರ್ಕಾರದ ಸಂಕಲ್ಪವಾ‌ದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಮದುರ್ಗ ತಾಲೂಕಿನಲ್ಲಿ ಅಂದಾಜು 671.28 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು. ಸುಮಾರು 2,739 ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ಕಳೆದ ಮೂರೂವರೆ ವರ್ಷಗಳಲ್ಲಿ ತಂದು ವಿವಿಧ ಇಲಾಖೆಗಳ ಅಭಿವೃದ್ಧಿ ಮಾಡಿ, ರಾಮದುರ್ಗ ಕ್ಷೇತ್ರವನ್ನು ಅಭಿವೃದ್ಧಿಶೀಲ ಕ್ಷೇತ್ರವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ನೀರಾವರಿ, ಮೂಲಭೂತ ಸೌಕರ್ಯ, ವಿದ್ಯುತ್, ಶಿಕ್ಷಣ, ಆಸ್ಪತ್ರೆ, ಬ್ಯಾರೇಜ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆಗಳನ್ನು ಈ ಕ್ಷೇತ್ರಕ್ಕೆ ತಂದು ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೆ ಗಂಗೆಯನ್ನು ಹರಿಸುವ ಸಾಹಸವನ್ನು ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾಡಿದ್ದಾರೆ. ಸರ್ಕಾರ ಜನಪ್ರಿಯವಾದರೆ ಸಾಲದು, ಜನಪರ ಸರ್ಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ ಎಂದರು.

ಗಡಿಭಾಗದ ಜಿಲ್ಲೆಗಳ‌ ಗ್ರಾಮ ಪಂಚಾಯತಿಗಳ ಸಂಪೂರ್ಣ ಅಭಿವೃದ್ಧಿ‌

ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಚಿಂತನೆ ಮಾಡಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ನಡುಭಾಗದಿಂದ ಹಿಡಿದು ಗಡಿಭಾಗದವರೆಗೆ ಅಭಿವೃದ್ಧಿಯನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳಲ್ಲಿ 2 ನೂತನ ಕಾರ್ಯಕ್ರಮ ರೂಪಿಸಿದೆ. ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ತಮಿಳುನಾಡು, ಕೇರಳ ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1,800 ಗ್ರಾಮ ಪಂಚಾಯತಿಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ಕಾರ್ಯಕ್ರಮವನ್ನು ಈ ವರ್ಷ ಅನುಷ್ಠಾನ ಮಾಡಲಾಗುತ್ತಿದೆ. ಗಡಿ ಭಾಗದ ಸಮಗ್ರ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಗಡಿ ಭಾಗದ ಗ್ರಾಮಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೂಪಿಸಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಈ ವರ್ಷ ಗಡಿ ಭಾಗದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ಮೀಸಲು

ಗಡಿಯಾಚೆ ಇರುವವರು ನಮ್ಮವರು. ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರ್ಕಾರ ಕಡೆಗಣಿಸಿರುವುದರಿಂದ ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿರುವುದಿಲ್ಲ. ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಕನ್ನಡದ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಗೋವಾದಲ್ಲಿ ಕನ್ನಡ ಭವನ

ಗೋವಾದಲ್ಲಿ ಹತ್ತು ಕೋಟಿ‌ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅದೇ ರೀತಿ ಸೋಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ ಹತ್ತು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಲಿದೆ ಎಂದರು.

ಪಾಂಡರಾಪುರ, ತುಳಜಾಪುರ, ಶ್ರೀಶೈಲಂ, ಅಯ್ಯಪ್ಪ ದೇವಾಲಯಗಳಲ್ಲಿ ಯಾತ್ರಿ ನಿವಾಸ

ಕನ್ನಡ ನಾಡಿನ ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರಗಳಾದ ಪಾಂಡರಾಪುರ, ತುಳಜಾಪುರ, ಶ್ರೀಶೈಲಂ, ಅಯ್ಯಪ್ಪ ದೇವಾಲಯಗಳಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಕನ್ನಡಿಗರ ಹಿತಚಿಂತನೆ, ರಕ್ಷಣೆ ಹಾಗು ಅಭಿವೃದ್ದಿ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವದ ಯಾವುದೇ ಭಾಗದಲ್ಲಿರಲಿ, ಭಾರತದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ದಿ, ಹಿತಚಿಂತನೆ ಮತ್ತು ರಕ್ಷಣೆ ಮಾಡುವ ಕೆಲಸ ಕರ್ನಾಟಕ ಸರ್ಕಾರ ಮಾಡಿಕೊಂಡು ಬಂದಿದೆ ಎಂದರು.

ತಡೆಗೋಡೆ ನಿರ್ಮಾಣಕ್ಕೆ 120 ಕೋಟಿ ರೂ. ಅನುಮೋದನೆ

ದುಡಿಯುವ ವರ್ಗಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿ ಅಭಿವೃದ್ಧಿ ಮಾಡಲಾಗಿದೆ. ರಾಮದುರ್ಗ ತಾಲ್ಲೂಕಿನ ಕೆಲ ಗ್ರಾಮಗಳು ಪದೇ ಪದೇ ಪ್ರವಾಹದಿಂದ ಬಾಧಿತಗೊಳ್ಳುವುದನ್ನು ತಪ್ಪಿಸಲು ಮಲಪ್ರಭಾ ನದಿತೀರದಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರ ಮುಂದಾಗಿದೆ. 120 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನವನ್ನು ಅನುಮೋದಿಸಿ ಕಾಮಗಾರಿಗೆ ಅಡಿಗಲ್ಲು ಹಾಕಲಾಗಿದೆ. ಶಾಶ್ವತವಾಗಿ ಊರುಗಳನ್ನು ಉಳಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದರು.

ಕೆರೆ ತುಂಬಿಸುವ ಯೋಜನೆ

ಏತ ನೀರಾವರಿಯಿಂದ ವಂಚಿತಗೊಂಡಿರುವ 19 ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅವರು ನಿರಂತರ ಒತ್ತಡ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅವರ ಕಳಕಳಿಯನ್ನು ಅರಿತುಕೊಂಡು ಅವರ ಒತ್ತಾಯದಂತೆ 19 ಕೆರೆಗಳನ್ನು ತುಂಬಿಸುವ ಯೋಜನೆಗೆ ಕೂಡಲೇ ಡಿಪಿಆರ್ ತಯಾರಿಸಿ ಮುಂದಿನ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಲಾಗುವುದು ಎಂದು ಸಿಎಂ ಘೋಷಿಸಿದರು.

IPL_Entry_Point