ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರ ಆತಂಕ; ಎಲ್ಲೆಡೆ ಮುಂಜಾಗ್ರತೆ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ರಾಜ್ಯದ ಹಲವು ಕಡೆ ಹಕ್ಕಿ ಜ್ವರ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಎಲ್ಲಡೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹಕ್ಕಿಜ್ವರ ಕಂಡುಬಂದ 3 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೆ ಮಾರ್ಗಸೂಚಿ ಪ್ರಕಟಿಸಿದೆ.

ಬೆಂಗಳೂರು: ಕೆಲವು ದಿನಗಳ ಹಿಂದೆಯೇ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿರುವ ಹಕ್ಕಿ ಜ್ವರ, ಹಲವು ಜಿಲ್ಲೆಗಳ ಜನರನ್ನು ಕಾಡುತ್ತಿದೆ. ಹೀಗಾಗಿ ಆಂಧ್ರ ಹಾಗೂ ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಜೊತೆಗೆ ಕೇರಳದ ಜೊತೆಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕು, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕುಗಳಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಹಕ್ಕಿ ಜ್ವರದಿಂದ ಬಳ್ಳಾರಿಯಲ್ಲಿ ಭಾರಿ ತೊಂದರೆ ಉಂಟಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸುಮಾರು 17 ಸಾವಿರ ಕೋಳಿಗಳು ಸಾವನ್ನಪ್ಪಿವೆ. ಬೇರೆ ದಾರಿ ಇಲ್ಲದೆ ಜಿಲ್ಲಾಡಳಿತವೇ 7 ಸಾವಿರ ಜೀವಂತ ಕೋಳಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿದೆ.
ಬಳ್ಳಾರಿಯ ದರೋಜಿ ಕೆರೆಗೆ ಸಾವಿರಾರು ವಲಸೆ ಪಕ್ಷಿಗಲು ಬರುತ್ತವೆ. ಈ ಪಕ್ಷಿಗಳಿಂದ ಹಕ್ಕಿ ಜ್ವರ ಜಿಲ್ಲೆಗೆ ಕಾಲಿಟ್ಟಿರುವ ಶಂಕೆ ಇದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೈ ಅಲರ್ಟ್
ರಾಜ್ಯದಲ್ಲಿ ಹಕ್ಕಿ ಜ್ವರ ಮೊದಲು ಕಾಣಿಸಿಕೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಹೀಗಾಗಿ ವರದಹಳ್ಳಿ ಗ್ರಾಮದಲ್ಲಿ ಅಧಿಕಾರಿಗಳು ಹೆಚ್ಚು ಅಲರ್ಟ್ ಆಗಿದ್ದಾರೆ. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತ್ತ ಬಾಗಲಕೋಟೆ ಜಿಲ್ಲೆಯಲ್ಲೂ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದಾರೆ. ಹಕ್ಕಿ ಜ್ವರ ಕಾಣಿಸಿಕೊಂಡರೆ ಅಂತಹ ಕೋಳಿ ಫಾರಂ ಅನ್ನು ಸೀಲ್‌ಡೌನ್ ಮಾಡಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿ
ರಾಜ್ಯದ ಹಲವು ಕಡೆ ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹಕ್ಕಿ ಜ್ವರ ಕಂಡುಬಂದ 3 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಹೀಗಿದೆ.
- ಹಕ್ಕಿ ಜ್ವರ ಕಂಡುಬಂದ ಸ್ಥಳದ 3 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಈ ವ್ಯಾಪ್ತಿಯಲ್ಲಿ ಯಾರೂ ಓಡಾಡುವಂತಿಲ್ಲ.
- ಹಕ್ಕಿ ಜ್ವರ ಕಂಡು ಬಂದ 10 ಕಿಲೋ ಮೀಟರ್ ವ್ಯಾಪ್ತಿ ಸರ್ವಲೆನ್ಸ್ ಸ್ಥಳ ಎಂದು ಘೋಷಣೆ. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ.
- ಮಾಂಸ ಸಂಪೂರ್ಣವಾಗಿ ಬೇಯಿಸಿಯೇ ತಿನ್ನಬೇಕು. ಅರಬರೆ ಬೇಯಿಸಿದ ಮತ್ತು ಹಸಿ ಮಾಂಸ ತಿನ್ನುವಂತಿಲ್ಲ.
- ಪೌಲ್ಟ್ರಿಯಲ್ಲಿ ಕೆಲಸ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಕೋಳಿ ಮಾಂಸ ಕತ್ತರಿಸುವಾಗ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ.
- ಹಕ್ಕಿಗಳು, ಕೋಳಿಗಳ ಜೊತೆ ಇರುವವರಿಗೆ ಔಷಧ ನೀಡಬೇಕು.
- ಹಕ್ಕಿ ಜ್ವರದ ಗುಣಲಕ್ಷಣ ಇರುವವರಿಗೆ RTPCR ಟೆಸ್ಟ್ ಕಡ್ಡಾಯ. ಹಕ್ಕಿ ಜ್ವರ ಬಂದವರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆಯಬೇಕು .
- ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಎಲ್ಲ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಿದೆ.
ಇದನ್ನೂ ಓದಿ | ಬಳ್ಳಾರಿಯಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ: 3 ದಿನಗಳಲ್ಲಿ 8000 ಕೋಳಿಗಳು ಸಾವು; 7000 ಕೋಳಿಗಳ ಸಾಮೂಹಿಕ ಹತ್ಯೆ