Pan 2.0 updates:ಈಗಿರುವ ಪ್ಯಾನ್ ಉನ್ನತೀಕರಣಕ್ಕೆ ಮುಂದಾದ ಭಾರತ ಸರ್ಕಾರ; ಏನಿದು ಪ್ಯಾನ್ 2.0 ಯೋಜನೆ, ನವೀಕರಣ ಹೇಗೆ, ಅರ್ಜಿ ಸಲ್ಲಿಸಬೇಕೆ
Pan 2.0 updates: ಈಗಾಗಲೇ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್ ನ ನವೀಕರಣ ಮಾಡುವ ಪ್ಯಾನ್ 2.0 ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ತೆರಿಗೆದಾರರ ಸೇವೆಗಳನ್ನು ಸರಳೀಕರಿಸಿ, ಕಾರ್ಡ್ ಅನ್ನು ತಂತ್ರಜ್ಞಾನ ಬಲದೊಂದಿಗೆ ಉನ್ನತೀಕರಿಸುವುದು ಯೋಜನೆಯ ಆಶಯ.
Pan 2.0 updates: ಈಗ ಪ್ಯಾನ್ ಕಾರ್ಡ್ ಎನ್ನುವುದು ಭಾರತದಲ್ಲಿ ಬಹುತೇಕ ವಹಿವಾಟು, ಆದಾಯ ತೆರಿಗೆ ಸಹಿತ ಹಲವು ಚಟುವಟಿಕೆಗಳಿಗೆ ಕಡ್ಡಾಯ. ಪ್ಯಾನ್ ಕಾರ್ಡ್ ಅನ್ನು ಬಳಸುವವರ ಪ್ರಮಾಣವೂ ಭಾರತದಲ್ಲಿ ಅಧಿಕ. ಈಗಿರುವ ಪ್ಯಾನ್ ಕಾರ್ಡ್ ಅನ್ನೇ ಉನ್ನತೀಕರಿಸುವ ಚಟುವಟಿಕೆಗೆ ಭಾರತ ಸರ್ಕಾರ ಚಾಲನೆ ನೀಡಿದೆ. ಇದನ್ನು ಪ್ಯಾನ್ 2.0 ಎಂದು ಕರೆಯಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟವು ಅಗತ್ಯ ಅನುಮತಿಗಳನ್ನು ನೀಡಿದೆ. ಪ್ಯಾನ್ ಕಾರ್ಡ್ ಉನ್ನತೀಕರಣದ ಚಟುವಟಿಗೆ ಭಾರತ ಸರ್ಕಾರವು ಹಸಿರು ನಿಶಾನೆ ತೋರಿರುವುದರಿಂದ ಬದಲಾವಣೆ ಚಟುವಟಿಕೆಗಳು ಹಂತಹಂತವಾಗಿ ಶುರುವಾಗಲಿವೆ. ಪ್ಯಾನ್ ಉನ್ನತೀಕರಣಕ್ಕೆ ಏನು ಮಾಡಬೇಕು.ಎಷ್ಟು ದಿನಗಳೊಳಗೆ ಇದನ್ನೆಲ್ಲಾ ಮುಗಿಸಬೇಕು ಎನ್ನುವುದೂ ಸೇರಿದಂತೆ ಪೂರಕ ಮಾರ್ಗಸೂಚಿಗಳನ್ನು ಕೇಂದ್ರ ಹಣಕಾಸು ಇಲಾಖೆಯು ಬಿಡುಗಡೆ ಮಾಡಲು ಮುಂದಾಗಿದೆ.
ಈಗಾಗಲೇ ಪ್ರತೀ ಭಾರತೀಯರ ಬಳಿ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್ ಅನ್ನು ಉನ್ನತೀಕರಿಸಿ ಸುಧಾರಿತ ಅವೃತ್ತಿಯೊಂದಿಗೆ ಬಿಡುಗಡೆ ಮಾಡುತ್ತಿರುವುದೇ ಪ್ಯಾನ್ 2.0 ಯೋಜನೆ. ಪ್ಯಾನ್ ಉನ್ನತೀಕರಣದ ಮೂಲಕ ಎಲ್ಲಾ ರೀತಿಯ ಆರ್ಥಿಕ ನೋಂದಣಿ ಸುಲಭೋಪಾಯ ಕಂಡುಕೊಳ್ಳುವುದು ಮತ್ತು ಮುಖ್ಯವಾಗಿ ಆದಾಯ ಸಹಿತ ಎಲ್ಲಾ ರೀತಿಯ ತೆರಿಗೆದಾರರಿಗೆ ಹೆಚ್ಚು ಅನುಕೂಲವಾಗುವಂತೆ ಪ್ಯಾನ್ ಕಾರ್ಡ್ ಉನ್ನತೀಕರಣಗೊಳಿಸಲು ಉನ್ನತ ತಂತ್ರಜ್ಞಾನದ ಬಳಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆಂದೇ 1,435 ಕೋಟಿ ರೂ ಬಜೆಟ್ ಅನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ಯೋಜನೆಯು ಆದಾಯ ತೆರಿಗೆ ಇಲಾಖೆಯ ಡಿಜಿಟಲ್ ಮೂಲಸೌಕರ್ಯವನ್ನು ಜನರ ಸುಲಭವಾಗಿ ಬಳಸಲು ಮತ್ತು ಸುಸೂತ್ರವಾದ ವ್ಯವಹಾರಗಳಿಗೆ ಉತ್ತಮ ಸೇವೆ ನೀಡುವಂತೆ ಮಾಡಲಾಗುತ್ತಿದೆ.
ಪ್ಯಾನ್ 2.0 ನ ವೈಶಿಷ್ಟ್ಯಗಳು
ಪ್ಯಾನ್ ಕಾರ್ಡ್ ನಲ್ಲಿ ಇನ್ನು ಮುಂದೆ ಎಂಬೆಡೆಡ್ ಕ್ಯೂಆರ್ ಕೋಡ್ ಬರಲಿದೆ. ಪ್ಯಾನ್ ಕಾರ್ಡ್ 2.0 ಮೂಲಕ ಹೆಚ್ಚಿನ ಭದ್ರತೆಯನ್ನು ಒದಗಿಸುವುದು ಉದ್ದೇಶ.
ಭಾರತದಲ್ಲಿ ವ್ಯಾಪಾರ ವಲಯದಲ್ಲಿ ಬಳಕೆದಾರರು ಹಾಗೂ ವ್ಯಾಪಾರಗಳಿಗೆ PAN ಸಾರ್ವತ್ರಿಕ ಗುರುತಾಗಿ ಜನಪ್ರಿಯಗೊಂಡಿದೆ. ನಿರ್ದಿಷ್ಟಪಡಿಸಿದ ಸರ್ಕಾರಿ ಡಿಜಿಟಲ್ ವ್ಯವಸ್ಥೆಗಳಾದ್ಯಂತ ಇದರ ಬಳಕೆ ಕಡ್ಡಾಯವೂ ಆಗಿದೆ.
ಆದಾಯ ತೆರಿಗೆ ಇಲಾಖೆಯಲ್ಲದೇ ಇತರೆ ತೆರಿಗೆಗೆ ಸಂಬಂಧಿಸಿದ ತೆರಿಗೆದಾರರ ನೋಂದಣಿ ಪ್ರಕ್ರಿಯೆಗಳನ್ನು ಈ ಯೋಜನೆಯಡಿ ಮರು ವಿನ್ಯಾಸಗೊಳಿಸಿ ಮತ್ತಷ್ಟು ಸರಳೀಕರಣಗೊಳಿಸುತ್ತದೆ. ಅಲ್ಲದೆ ಪ್ಯಾನ್/ಟ್ಯಾನ್‌ನಂತರ ಸೇವೆಗಳನ್ನು ಏಕೀಕೃತ ವೇದಿಕೆಯಾಗಿಯೂ ಬದಲಿಸಲಾಗುತ್ತದೆ. ಇದರಿಂದ ಗೊಂದಲ ಆಗುವುದು ತಪ್ಪಲಿದೆ.
ಬಳಕೆದಾರರಿಗೆ ಏನು ಲಾಭ?
ತೆರಿಗೆದಾರರ ನೋಂದಣಿ ಸೇವೆಗಳು ಇನ್ನಷ್ಟು ತ್ವರಿತವಾಗಿ ಸಿಗಲು ಮತ್ತು ಸುಲಭದಲ್ಲಿ ಪೂರ್ಣಗೊಳ್ಳಲು ಪ್ಯಾನ್ ಕಾರ್ಡ್ 2.0 ಯೋಜನೆಯು ಸಹಕಾರಿಯಾಗಲಿದೆ
ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವವರು ಪ್ಯಾನ್ ಕಾರ್ಡ್ 2.0 ಅನ್ನು ಉನ್ನತೀಕರಿಸಲು ಯಾವುದೇ ಹೆಚ್ಚುವರಿ ಖರ್ಚು ಮಾಡುವ ಹಾಗಿಲ್ಲ. ನವೀಕರಣಕ್ಕೆಂದೇ ಮಾರ್ಗಸೂಚಿಗಳೂ ಬರಲಿವೆ.
ನಾವೀಗ ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಹಾಕಬೇಕೆ?
ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗಿಲ್ಲ.ಪ್ಯಾನ್- 2.0 ಯೋಜನೆಯಡಿಯಲ್ಲಿ, ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ಮಾನ್ಯವಾಗಿ ಉಳಿಯುತ್ತದೆ. ಕ್ಯೂರ್ ಕೋಡ್ ವೈಶಿಷ್ಟ್ಯವನ್ನು ಒಳಗೊಂಡಂತೆ ಅಪ್‌ಗ್ರೇಡ್‌ಗಳನ್ನು ಪ್ರಸ್ತುತ ಕಾರ್ಡ್‌ದಾರರಿಂದ ಯಾವುದೇ ಕ್ರಮವಿಲ್ಲದೆ ಲಭ್ಯವಾಗುವಂತೆ ಮಾಡಲಾಗುತ್ತದೆ.
ದಯವಿಟ್ಟು ಜಾಗರೂಕರಾಗಿರಿ, ಸೈಬರ್ ಅಪರಾಧಿಗಳು ಪ್ಯಾನ್ ಕಾರ್ಡ್ ಅಪ್‌ಗ್ರೇಡ್ ಹೆಸರಿನಲ್ಲಿ ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಆಸ್ಪದವನ್ನೂ ನೀಡಬೇಡಿ.
ಪ್ಯಾನ್-2.0, ನೀವು ಈಗಾಗಲೇ ಪ್ಯಾನ್ ಹೊಂದಿದ್ದರೆ, ನೀವು ಮತ್ತೆ ಪ್ಯಾನ್ ಗೆ ಅರ್ಜಿ ಸಲ್ಲಿಸಬೇಕಾಗಿಲ್ಲ.
ಪ್ಯಾನ್- 2.0 ಯೋಜನೆಯು ವೇಗದ ಸೇವೆಗಳು ಮತ್ತು ಸುಧಾರಿತ ದಕ್ಷತೆಯ ಮೂಲಕ ತೆರಿಗೆದಾರರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದರಲ್ಲಿ ಪ್ರಮುಖ ಈ ಪ್ರಯೋಜನಗಳು ಸೇರಿವೆ
ಸಿಸ್ಟಮ್ ಅಪ್‌ಗ್ರೇಡ್: ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸಂಪೂರ್ಣವಾಗಿ ಪರಿಷ್ಕರಿಸಿದ, ತಂತ್ರಜ್ಞಾನ-ಚಾಲಿತ ಫ್ರೇಮ್‌ವರ್ಕ್ ಇದರ ಉದ್ದೇಶ
ಸಾಮಾನ್ಯ ವ್ಯಾಪಾರ ಗುರುತಿಸುವಿಕೆ: ನಿರ್ದಿಷ್ಟ ವಲಯಗಳಾದ್ಯಂತ ವ್ಯಾಪಾರ-ಸಂಬಂಧಿತ ಚಟುವಟಿಕೆಗಳಿಗಾಗಿ ಪ್ಯಾನ್ ನ ಏಕೀಕರಣ. ಇದರಿಂದ ಅನಗತ್ಯ ಗೊಂದಲ ತಪ್ಪಿಸುವ ಆಶಯ
ಏಕೀಕೃತ ಪೋರ್ಟಲ್: ಎಲ್ಲಾ ಪ್ಯಾನ್-ಸಂಬಂಧಿತ ಸೇವೆಗಳಿಗೆ ಒಂದು-ನಿಲುಗಡೆ ವೇದಿಕೆಯನ್ನು ರೂಪಿಸುತ್ತಿರುವುದು ಬದಲಾವಣೆ ಹಿಂದಿರುವ ಸ್ಪಷ್ಟ ಕ್ರಮ.
ಸೈಬರ್ ಸೆಕ್ಯುರಿಟಿ ಕ್ರಮಗಳು: ಬಳಕೆದಾರರ ಡೇಟಾವನ್ನು ರಕ್ಷಿಸಲು ದೃಢವಾದ ಸುರಕ್ಷತೆಗಳ ಅನುಷ್ಠಾನವೂ ಇದರ ಹಿಂದಿರುವ ಮುಖ್ಯ ಗುರಿ
ಪ್ಯಾನ್ ಡೇಟಾ ವಾಲ್ಟ್: ಪ್ಯಾನ್ ಡೇಟಾವನ್ನು ಬಳಸುವ ಘಟಕಗಳಿಗೆ ಸುರಕ್ಷಿತ ಶೇಖರಣಾ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸುವುದೂ ಇದರಲ್ಲಿ ಸೇರಿದೆ ಎಂದು ಸೈಬರ್ ತಂತ್ರಜ್ಞಾನ ಹಾಗೂ ಸುರಕ್ಷತಾ ತಜ್ಞ ಉದಯಶಂಕರ್ ಪುರಾಣಿಕ್ ಹೇಳುತ್ತಾರೆ.