ಗ್ರೂಪ್ ಬಿ ಮತ್ತು ಸಿ ನೇಮಕಾತಿ, ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: PSI ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಮೇಶ್ವರ ಹೇಳಿದ್ದೇನು?-government of karnataka has issued an order to relax the age limit by 3 years in recruitment of group b and c posts mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಗ್ರೂಪ್ ಬಿ ಮತ್ತು ಸಿ ನೇಮಕಾತಿ, ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: Psi ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಮೇಶ್ವರ ಹೇಳಿದ್ದೇನು?

ಗ್ರೂಪ್ ಬಿ ಮತ್ತು ಸಿ ನೇಮಕಾತಿ, ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: PSI ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಮೇಶ್ವರ ಹೇಳಿದ್ದೇನು?

Job News: ಗ್ರೂಪ್ ಬಿ ಮತ್ತು ಸಿ ನೇಮಕಾತಿಗೆ ಸಂಬಂಧಿಸಿ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಕುರಿತು ಗೃಹ ಸಚಿವರು ಏನು ಹೇಳಿದರು? ಇಲ್ಲಿದೆ ವಿವರ. (ವರದಿ-ಎಚ್. ಮಾರುತಿ)

ಗ್ರೂಪ್ ಬಿ ಮತ್ತು ಸಿ ನೇಮಕಾತಿ, ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ
ಗ್ರೂಪ್ ಬಿ ಮತ್ತು ಸಿ ನೇಮಕಾತಿ, ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗೆ ಈಗಾಗಲೇ ಹೊರಡಿಸಿರುವ ಮತ್ತು ಮುಂದಿನ ಒಂದು ವರ್ಷದ ಒಳಗೆ ಹೊರಡಿಸಲಾಗುವ ಎಲ್ಲ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ಗರಿಷ್ಠ ವಯೋಮಿತಿಯನ್ನು 3 ವರ್ಷ ಸಡಿಲಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರದ ಈ ಆದೇಶದಿಂದ ಲಕ್ಷಾಂತರ ಉದ್ಯೋಗಾಂಕ್ಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ ಬಿ, ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗಳನ್ನು ಕೋವಿಡ್, ಚುನಾವಣೆ ಮತ್ತಿತರ ಕಾರಣಗಳಿಗೆ ರಾಜ್ಯ ಸರ್ಕಾರ ಮುಂದೂಡುತ್ತಲೇ ಬರುತ್ತಿತ್ತು. ಇದರಿಂದ ಅಭ್ಯರ್ಥಿಗಳ ವಯೋಮಿತಿ ಹೆಚ್ಚಿದ್ದು, ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗುತ್ತಿದ್ದರು.

ಆದ್ದರಿಂದ ನೇರ ನೇಮಕಾತಿಗೆ ಪ್ರಸ್ತುತ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಸಡಿಲಿಸಬೇಕು ಎಂದು ಉದ್ಯೋಗಾಂಕ್ಷಿಗಳು ಮತ್ತು ಅಭ್ಯರ್ಥಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ವಯೋಮಿತಿ ಹೆಚ್ಚಿಸಬೇಕೆಂಬ ಅಭ್ಯರ್ಥಿಗಳ ಮನವಿ ಕುರಿತು ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಸಡಿಲಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಗೃಹ ಸಚಿವರು ಏನು ಹೇಳಿದರು?

ಪೊಲೀಸ್ ಸಬ್​ಇನ್​ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ತಿಂಗಳ 22 ರಂದು ನಡೆಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಡಾ ಸಿಎನ್ ಅಶ್ವತ್ಥನಾರಾಯಣ, ಧೀರಜ್ ಮುನಿರಾಜ್ ಅವರ ನೇತೃತ್ವದ ನಿಯೋಗ ಮಂಗಳವಾರ ಗೃಹ ಸಚಿವರಿಗೆ ಮನವಿ ಸಲ್ಲಿಸಿತು. ಪಿಎಸ್‌ಐ ಪರೀಕ್ಷೆ ಬರೆಯಬೇಕಾದ 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯುತ್ತಿದ್ದಾರೆ. ಆದ್ದರಿಂದ ಪರೀಕ್ಷಾ ದಿನವನ್ನು ಮುಂದೂಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಆದರೆ ಯುಪಿಎಸ್‌ಸಿ ಪರೀಕ್ಷೆ ನಮಗೆ ಮುಖ್ಯವಲ್ಲ. ರಾಜ್ಯ ಗೃಹ ಇಲಾಖೆಯಲ್ಲಿ ಸಾವಿರ ಪಿಎಸ್‌ಐ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಇದೇ ಕಾರಣಕ್ಕೆ ನಿಯಮ 32 ಅಡಿಯಲ್ಲಿ ಎಎಸ್‌ಐಗಳಿಗೆ ಪಿಎಸ್‌ಐ ಹುದ್ದೆಗೆ ಬಡ್ತಿ ನೀಡಲಾಗಿದೆ. ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕಾದ ಪಿಎಸ್‌ಐ ಇಲ್ಲದೇ ಇದ್ದರೆ ಇಲಾಖೆ ಮುನ್ನಡೆಸುವುದು ಹೇಗೆ ಎಂದು ಸಚಿವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ 545 ಪಿಎಸ್‌ಐ ಹುದ್ದೆಗಳ ಭರ್ತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದ ಕಾರಣ ನೇಮಕಾತಿ ನಡೆದಿಲ್ಲ. ಹಲವಾರು ಗೊಂದಲಗಳ ನಡುವೆಯೂ ನ್ಯಾಯಾಲಯದಿಂದ ಅನುಮತಿ ಪಡೆದು ಮರು ಪರೀಕ್ಷೆ ನಡೆಸಲಾಗಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಅಂತಿಮ ಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದರು.

ನಾಲ್ಕು ವರ್ಷಗಳಿಂದ ಪಿಎಸ್‌ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು ಕನಿಷ್ಠ ಒಂದು ವರ್ಷ ಬೇಕು. ಎರಡು ವರ್ಷ ಪ್ರೊಬೇಷನರಿ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ಪರಿಸ್ಥಿತಿಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಷ್ಟು ತ್ವರಿತವಾಗಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 600 ಪಿಎಸ್‌ಐ ಹುದ್ದೆಗಳ ಭರ್ತಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

mysore-dasara_Entry_Point