ಕನ್ನಡ ಸುದ್ದಿ  /  Karnataka  /  Government Supports Sirasangi Sri Lingaraja Desai Trust Says Cm Bommai

CM Bommai:'ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಟ್ರಸ್ಟ್​ಗೆ ಸರ್ಕಾರದ ಪೂರ್ಣ ಸಹಕಾರ'

ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಟ್ರಸ್ಟ್ ಕ್ರಿಯಾಶೀಲವಾಗಬೇಕಿದ್ದು, ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಒಳ್ಳೆಯ ಕೆಲಸಗಳು ಸಮಾಜದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 162ನೇ ಜಯಂತಿ ಉದ್ಘಾಟನೆ
ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 162ನೇ ಜಯಂತಿ ಉದ್ಘಾಟನೆ

ಧಾರವಾಡ: ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಟ್ರಸ್ಟ್ ಕ್ರಿಯಾಶೀಲವಾಗಬೇಕಿದ್ದು, ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಒಳ್ಳೆಯ ಕೆಲಸಗಳು ಸಮಾಜದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಅಖಿಲ ಭಾರತೀಯ ವೀರಶೈವ-ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾದ ತ್ಯಾಗವೀರ ಮಹಾದಾನಿ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 162ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೇರಣಾದಾಯಕ ಬದುಕುಗಳಿಂದ ನಾಡು ಶ್ರೀಮಂತ :

ತ್ಯಾಗಮೂರ್ತಿಯಾದ ಸಿರಸಿಂಗಿ ಶ್ರೀ ಲಿಂಗರಾಜ ದೇಸಾಯಿ ಅವರು ಇತಿಹಾಸ ಸೃಷ್ಟಿ ಮಾಡಿದವರು. ಉತ್ತರಕರ್ನಾಟಕದ ಮಠಗಳಿಗೆ ತನ್ನದೇ ಆದ ಇತಿಹಾಸವಿದೆ. ವೀರಶೈವ ಲಿಂಗಾಯತ ತತ್ವಗಳಡಿಯಲ್ಲಿಯೇ ಆ ಪರಂಪರೆಯನ್ನು ಹಾಕಿಕೊಡಲಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಮಠಗಳು ಎಲ್ಲ ಬಡವರಿಗೆ ಆಶ್ರಯ ನೀಡಿದ ಇತಿಹಾಸವಿದೆ. ಮಕ್ಕಳಿಗೆ ಆಶ್ರಯ, ವಿದ್ಯೆ, ಅನ್ನ ನೀಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾದ ಮೂರುಮಠಗಳ ಸ್ವಾಮೀಜಿಗಳು ಇಂದು ಉಪಸ್ಥಿತರಿದ್ದಾರೆ. ಸಿರಸಿಂಗಿ ಶ್ರೀ ಲಿಂಗರಾಜ ದೇಸಾಯಿ ಅವರ ತತ್ವಗಳನ್ನು ಈ ಮಠಗಳು ಜೀವಂತವಾಗಿಟ್ಟಿವೆ. ನಾಡು ಅಭಿವೃದ್ಧಿಯಾಗಬೇಕಾದರೆ ಶ್ರೀಮಂತ ಇತಿಹಾಸ ಬೇಕು. ನಮ್ಮ ಮಣ್ಣಿನಲ್ಲಿ ಹುಟ್ಟಿ ನಮ್ಮ ನಡುವೆ ಎತ್ತರಕ್ಕೆ ಬೆಳೆದು, ಪ್ರೇರಣಾದಾಯಕ ಬದುಕುಗಳಿಂದ ಈ ನಾಡು ಶ್ರೀಮಂತವಾಗುತ್ತದೆ. ಈ ಪಂಕ್ತಿಯಲ್ಲಿ ಪ್ರಥಮವಾಗಿ ಸಿರಸಿಂಗಿ ಶ್ರೀ ಲಿಂಗರಾಜ ದೇಸಾಯಿ ಅವರು ನಿಲ್ಲುತ್ತಾರೆ ಎಂದರು.

18 ನೇ ಶತಮಾನ ಸಾಮಾಜಿಕ ಬದಲಾವಣೆಗೆ ನಾಂದಿ :

ಪರಕೀಯರ ಬ್ರಿಟೀಷರ ಆಡಳಿತವನ್ನು ವಿರೋಧಿಸಿದ ಅನೇಕ ಸಂಸ್ಥಾನಗಳಲ್ಲಿ ಕಿತ್ತೂರು ಸಂಸ್ಥಾನ ಪ್ರಮುಖವಾದುದು. ಕಿತ್ತೂರು ರಾಣಿ ಚೆನ್ನಮ್ಮ ಇಡೀ ಭಾರತದ ಸ್ವಾಭಿಮಾನದ ಸಂಕೇತವಾದ ಪ್ರಥಮ ವೀರಮಹಿಳೆಯಾದರು.18 ನೇ ಶತಮಾನದಲ್ಲಿ ಸಾಮಾಜಿಕವಾಗಿ ದೊಡ್ಡ ಬದಲಾವಣೆಯಾಯಿತು. ಪರಕೀಯರ ಆಡಳಿತದಿಂದ ಬೇಸತ್ತ ಭಾರತೀಯರು ಜಾಗೃತರಾದರು. ಇಡೀ ಭಾರತೀಯರು ಸ್ವಾತಂತ್ರ್ಯ ಹೋರಾಟದ ಮೂಲಕ ಒಂದಾದರು. ಈ ಸಂದರ್ಭದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ವೈಚಾರಿಕವಾಗಿ ಬಹಳ ದೊಡ್ಡ ಬದಲಾವಣೆಯಾಯಿತು ಎಂದರು.

ಅಧ್ಯಾತ್ಮಿಕ, ಶೈಕ್ಷಣಿಕ ಲೋಕ ಅಭಿವೃದ್ಧಿ :

ಅಖಿಲ ಭಾರತ ವೀರಶೈವ ಮಹಾಸಭಾದ ಮೂಲ ಚಿಂತನೆ ಮಾಡಿದವರು ಲಿಂಗರಾಜ ದೇಸಾಯಿಯವರು. ಇವರ ಅಧ್ಯಕ್ಷತೆಯಲ್ಲಿ ಮಹಾಸಭಾದ ಅಧಿವೇಶನಗಳು ನಡೆದವು. ಇದರ ಪರಿಣಾಮ ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಸಾಮಾಜಿಕ ಬೆಳವಣಿಗೆ ಮತ್ತು ಸಾಮಾಜಿಕ ಸಾಮರಸ್ಯ ಬೆಳವಣಿಗೆ ಕಾರಣವಾಯಿತು. 18 ನೇ ಶತಮಾನದಲ್ಲಿ ನೈಜ್ಯವಾದ ಸಾಮಾಜಿಕ ಕ್ರಾಂತಿಯಾಯಿತು. ಈ ಸಂಸ್ಥೆ ಸ್ಥಾಪನೆಯಾಗಿರದಿದ್ದರೆ ಕರ್ನಾಟಕದಲ್ಲಿ ಅಧ್ಯಾತ್ಮಿಕ, ಶೈಕ್ಷಣಿಕ ಲೋಕ ಅಭಿವೃದ್ಧಿಯಾಗುತ್ತಿರಲಿಲ್ಲ. ಇದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಮಠಮಾನ್ಯಗಳು ಶಿಕ್ಷಣ ನೀಡುವತ್ತ ಒಲವು ತೋರುತ್ತಿವೆ. ಜಾತಿ ಬೇಧವಿಲ್ಲದೇ ಬಡ ಮಕ್ಕಳ ಶಿಕ್ಷಣ, ಆಹಾರ, ಅನ್ನಗಳನ್ನು ನೀಡಲಾಗುತ್ತಿದೆ. ಶ್ರೀ ಲಿಂಗರಾಜ ದೇಸಾಯಿಯವರ ತತ್ವಾದರ್ಶಗಳ ಪ್ರೇರಣೆಯಿಂದ ಬೆಳಗಾವಿ, ಗುಲ್ಬರ್ಗಾ,ಬಳ್ಳಾರಿಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ಬಂದಿದ್ದು, ಬಡಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ ಎಂದರು.

ಶ್ರೀ ಲಿಂಗರಾಜ ದೇಸಾಯಿ ಅವರು ವ್ಯಕ್ತಿಯಲ್ಲ , ಮಹಾನ್ ಸಂಸ್ಥೆ :

ಶ್ರೀ ಲಿಂಗರಾಜ ದೇಸಾಯಿ ಅವರು ವ್ಯಕ್ತಿಯಲ್ಲ , ಮಹಾನ್ ಸಂಸ್ಥೆ. ತಾನು ದಾನ ಮಾಡಿ, ಇತರರಿಗೆ ಪ್ರೇರಣೆಯಾದವರು. ಕೊಡುವುದರಲ್ಲಿ ಸಂತೃಪ್ತಿ ಇದೆ ಎನ್ನುವುದನ್ನು ಶ್ರೀಯುತರ ಜೀವನ ಚರಿತ್ರೆಯಿಂದ ಮನಗಾಣಬಹುದಾಗಿದೆ. ಅವರ ವಿಚಾರಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಶಿಕ್ಷಣದ ಮೂಲಕ ಸ್ವಾಭಿಮಾನ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ. ಇತರ ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡುವ ವೀರಶೈವ ಲಿಂಗಾಯತ ಸಮುದಾಯವು ಬಸವಣ್ಣನವರ ವೈಚಾರಿಕತೆ ಇರುವ ಹಾಗೂ ಗುರುಗಳ ಸಂಸ್ಕಾರವಿರುವ ಆದರ್ಶಪ್ರಾಯ ಸಮುದಾಯವಾಗಿದೆ. ಇಡೀ ವೀರಶೈವ ಲಿಂಗಾಯತ ಸಮುದಾಯಗಳು ಒಂದಾಗುವ ಮೂಲಕ ಕರ್ನಾಟಕಕ್ಕೆ ಸಾಮರಸ್ಯದ ಬದುಕನ್ನು ಕಟ್ಟಿಕೊಡಲು ಅನುಕೂಲವಾಗುತ್ತದೆ. ಕಾಯಕ ಸಮುದಾಯಗಳನ್ನು ಎತ್ತಿಹಿಡಿಯುವ ಹಾಗೂ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು ಎಂದರು.

IPL_Entry_Point