ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ, ಇಂದಿನಿಂದ ಜಾರಿ; ಸಿಎಂ ಸಿದ್ದರಾಮಯ್ಯ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಕಾನೂನು ಇಂದಿನಿಂದ ಜಾರಿಗೆ ಬರಲಿದ್ದು, ಇನ್ನು ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಶೀಘ್ರವೇ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು.
ಇನ್ನು ಮುಂದೆ ಬೃಹತ್ ಬೆಂಗಳೂರು – ಗ್ರೇಟರ್ ಬೆಂಗಳೂರು ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.
ಮಳೆ ಅನಾಹುತಕ್ಕೆ ಸೂಕ್ತ ಪರಿಹಾರ
ರಾಜ್ಯದಲ್ಲಿ ಮಳೆಯಿಂದಾಗಿ ಅನಾಹುತಗಳು ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮಳೆಯಿಂದಾಗಿ ಸಂಭವಿಸುವ ಅನಾಹುತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗ್ರೇಟರ್ ಬೆಂಗಳೂರು- 5 ಪ್ರಯೋಜನಗಳು; ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್
ಬಿಬಿಎಂಪಿ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ. ಇದು ಬೆಂಗಳೂರು ಆಡಳಿತ ಹೊಸ ಅಧ್ಯಾಯ. ಬಿಬಿಎಂಪಿ ಕಾಯ್ದೆ 2021ರ ಬದಲಾಗಿ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯ 2024 ಚಾಲ್ತಿಯಲ್ಲಿರಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
1) ಆಡಳಿತ ವಿಕೇಂದ್ರೀಕರಣ- ಸ್ಥಳೀಯ ಆಡಳಿತ ವಿಕೇಂದ್ರೀಕರಣವಾಗಲಿದ್ದು. ಹೂಡಿಕೆಗೆ ಆಕರ್ಷಣೆ ಹೆಚ್ಚಾಗಲಿದೆ. ಆರ್ಥಿಕ ಬೆಳವಣಗೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯೂ ಹೆಚ್ಚಾಗಲಿದೆ.
2) ಹೆಚ್ಚಿನ ಸ್ವಾಯತ್ತೆ: ವಾರ್ಡ್ ಸಮಿತಿಗಳು ಹಾಗೂ ನಗರ ಪಾಲಿಕೆಗಳಿಗೆ ಬಜೆಟ್ ಹಂಚಿಕೆಯಾಗಲಿದೆ. ಅದೇ ರೀತಿ ಸ್ಥಳೀಯ ಅಭಿವೃದ್ಧಿ ವಿಚಾರಗಳಲ್ಲಿ ಹೆಚ್ಚಿನ ಹಿಡಿತವೂ ಇರಲಿದೆ.
3) ಸುಸ್ಥಿರ ನಗರ ನಿರ್ವಹಣೆ: ಬೆಂಗಳೂರು ಮಹಾನಗರದ ಪ್ರಗತಿಗಾಗಿ ಗರಿಷ್ಠ 7 ಹೊಸ ಪಾಲಿಕೆಗಳನ್ನು ರಚಿಸುವುದಕ್ಕೆ ಈ ಅಧಿನಿಯಮ ಅವಕಾಶ ಮಾಡಿಕೊಲಿದೆ.
4) ಬೃಹತ್ ಹಾಗೂ ಸ್ಮಾರ್ಟ್ ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಪ್ರಕಾರ, ಭವಿಷ್ಯದ ಅಗತ್ಯಗಳನ್ನು ಪೂರಸುವುದಕ್ಕೆ ಬೆಂಗಳೂರು ನಗರದ ವ್ಯಾಪ್ತಿಯು 1400 ಚದರ ಕಿಮೀಗೆ ವಿಸ್ತಾರವಾಗಲಿದೆ.
5) ಸಂಯೋಜಿತ ನಗರ ಯೋಜನೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‌ಡಿಎ, ಬೆಸ್ಕಾಂ, ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮೊದಲಾದ ಸಂಸ್ಥೆಳ ನಡುವೆ ಸಮನ್ವಯ ಸಾಧಿಸುವ ಕೆಲಸವೂ ಆಗಲಿದೆ.
ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ- 2024 ಅನುಷ್ಠಾನ - ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದರಿಂದ ಆಗುವ 5 ಪ್ರಯೋಜನಗಳ ಕಡೆಗೆ ಗಮನಸೆಳೆದಿದ್ದಾರೆ.