ಕನ್ನಡ ಸುದ್ದಿ  /  Karnataka  /  Govt Assistance For Higher Education In Agricultural Universities For The Children Of Agricultural Awardees Says Cm Bommai

CM Bommai: 'ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು'

ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ
ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ

ಧಾರವಾಡ: ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ಕೃಷಿ ಇಲಾಖೆ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಶಕ್ತಿ, ಕೃಷಿ ಕಾರ್ಮಿಕರ ಮಕ್ಕಳಿಗೆ ರೈತ ವಿದ್ಯಾ ನಿಧಿ, ಕೃಷಿ ಸಂಜೀವಿನಿ ವಾಹನಗಳ, ಡಾ: ಎಸ್.ವಿ.ಪಾಟೀಲ್, ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವ್ರದ್ಧಿ ಪೀಠದ ಲೋಕಾರ್ಪಣೆ ನರವೇರಿಸಿ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ರೈತರ ಪರವಾಗಿ ವಿಶೇಷ ಬಜೆಟ್

ಈ ಬಾರ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಅದಕ್ಕಾಗಿ ಧಾರವಾಡ ಕೃಷಿ ವಿವಿ ಸ್ಥಾಪಕರಾದ ಡಾ: ಎಸ್.ವಿ ಪಾಟೀಲ್ ಅವರ ಹೆಸರಿನಲ್ಲಿ ಪೀಠ ಸ್ಥಾಪಿಸಿ ಉದ್ಘಾಟಿಸಲಾಗಿದೆ. ಕೃಷಿಗೆ ಪೂರಕವಾಗಿರುವ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ರೂಪಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯನ್ನು ಮುಂದಿನ ವಾರ ಉದ್ಘಾಟಿಸಲಾಗುತ್ತಿದೆ. ಹಾಗೂ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದು ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದರು.

ಹೊಸ ಪದ್ದತಿಯ ಗೋದಾಮುಗಳ ನಿರ್ಮಾಣಕ್ಕೆ ಚಿಂತನೆ

ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು. ನಮ್ಮ ಸುಗ್ಗಿ ಮಾಡಿದ ನಂತರ ರೈತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲರು ರಾಜ್ಯದಲ್ಲಿ ಪ್ರಥಮ ಬಾರಿಗೆ 12 ಶೀತಲಾಗಾರಗಳನ್ನು ಸ್ಥಾಪಿಸಿದ್ದಾರೆ. ರೈತ ಸಂಜೀವಿನಿ ವಾಹನಗಳು, ಪ್ರಯೋಗಾಲಯಗಳಿಂದ ರೈತರ ಹೊಲಕ್ಕೆ ಸಂಶೋಧನೆಗಳು ಬರುತ್ತಿವೆ. ಕೃಷಿಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕ್ರಾಂತಿಕಾರಿ ಕಾರ್ಯಕ್ರಮ

ರೈತ ಕೂಲಿಕಾರರ ಬಗ್ಗೆ ಯಾರೂ ಈವರೆಗೆ ಚಕಾರ ಎತ್ತಿರಲಿಲ್ಲ. ಧ್ವನಿ ಇಲ್ಲದ ಅವರಿಗೆ ಮನವಿ ನೀಡಬೇಕೆಂದು ಕೂಡ ತಿಳಿಯದ ಈ ದುಡಿಯುವ ವರ್ಗದ ಮಕ್ಕಳೂ ವಿದ್ಯೆ ಕಲಿಯಬೇಕು. ಅವರೂ ಗುಡಿಸಲಿನಿಂದ ಹೊರಗೆ ಬರಬೇಕು. ಆದ್ದರಿಂದ ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ. ಬದಲಾವಣೆ ಅತ್ಯಂತ ತಳಮಟ್ಟದಿಂದ ಆಗಬೇಕು. ಕಾರ್ಯಕ್ರಮಗಳನ್ನು ರೂಪಿಸುವಾಗ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು. ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಮಕ್ಕಳನ್ನು ಓದಿಸಬಹುದೆಂಬ ಆತ್ಮವಿಶ್ವಾಸ ಈ ಕುಟುಂಬಗಳಿಗೆ ಬಂದಿದೆ. ಕಟ್ಟಡ ಕೂಲಿಕಾರ್ಮಿಕರ 5 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ತಲುಪಿದೆ. ದುಡಿಯುವ ವರ್ಗಕ್ಕೆ ಬಲ ತುಂಬಬೇಕು ಎಂದರು.

ಮೂಲ ಸಮಸ್ಯೆಗೆ ಪರಿಹಾರ

33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗಿದೆ. ಕೃಷಿಯಲ್ಲಿ ಆರ್ಥಿಕ ಬದಲಾವಣೆ ತರಲು ಈ ಬಗ್ಗೆ ಪರಿಣಿತರ ಬಳಿ ಚರ್ಚೆ ಮಾಡುತ್ತಿದ್ದು, ಒಂದು ಎಕರೆ ಜೋಳ ಬೆಳೆದರೆ ಎಷ್ಟು ವೆಚ್ಚವಾಗಲಿದೆ. ಎಷ್ಟು ಅಂತರವಿದೆ ಎಂದು ಪರಿಶೀಲಿಸಿ, ಬರುವ ದಿನಗಳಲ್ಲಿ ಇದಕ್ಕೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು. ರೈತ, ಕೂಲಿಕಾರರನ್ನು ಗಟ್ಟಿಗೊಳಿಸಿದರೆ ಈ ನಾಡನ್ನು ಕಟ್ಟಬಹುದು. ದುಡಿಮೆಗೆ ಬೆಲೆ ಬರಲು ಕೃಷಿ ಸಾಲದ ನೀತಿ ಬದಲಾಗಬೇಕು. ಕೃಷಿ ಉತ್ಪನ್ನ ಪಡೆದ ಮೇಲೆ ಮಾರುಕಟ್ಟೆಯಲ್ಲಿ ದರ ನಿರ್ಧಾರ ಮಾಡುವ ರೀತಿಯಲ್ಲಿ ಆಗಬೇಕು. ರೈತನಿಗೆ ತಾನು ಬೆಳೆದ ಬೆಲೆ ಎಷ್ಟು ಎಂದು ಮುಂಚಿತವಾಗಿಯೇ ತಿಳಿಯುವ ಯೋಜನೆಯನ್ನು ಜಾರಿಗೆ ತರಬೇಕೆಂಬ ಚಿಂತನೆ ಇದೆ. ಬರುವ ದಿನಗಳಲ್ಲಿ ಕೃಷಿಗೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ 20 ಲಕ್ಷ ಕೋಟಿಗಳಿಂತ ಹೆಚ್ಚು ಅನುದಾನವನ್ನು ದೇಶದಲ್ಲಿ ನೀಡಿದ್ದಾರೆ. ಕರ್ನಾಟಕದಲ್ಲಿ 46 ಲಕ್ಷ ಜನ ರೈತರಿಗೆ ಕಳೆದ 5 ವರ್ಷಗಳಿಂದ ಅನುದಾನ ಒದಗಿಸಲಾಗುತ್ತಿದ್ದು, ಕೇಂದ್ರದ ಆರು ಸಾವಿರ ರೂ.ಗಳಿಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ರೈತಶಕ್ತಿ ಯೋಜನೆ ಸರ್ಕಾರದ ದಾಖಲೆಯ ನಿರ್ಣಯ

ಸುಮಾರು 51 ಲಕ್ಷ ರೈತರ ಖಾತೆಗೆ 390 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ರೈತರ ಯಂತ್ರೋಪಕರಣಕ್ಕೆ ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸುವ ದಾಖಲೆಯ ಕಾರ್ಯಕ್ರಮ. ಇದೊಂದು ದಾಖಲೆಯ ನಿರ್ಣಯಕ್ಕೆ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಕೃಷಿಯಲ್ಲಿ ಆದಾಯ ಹೆಚ್ಚಬೇಕಾದರೆ ಕೃಷಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಬೇರೆ ಬೇರೆ ವೃತ್ತಿಯಲ್ಲಿದ್ದಾಗ ಮಾತ್ರ ಆ ಕುಟುಂಬ ಸಬಲವಾಗುತ್ತದೆ. ಕೃಷಿ ಅಭಿವೃದ್ಧಿಕಂಡಿದ್ದು, ಹಸಿರು ಕ್ರಾಂತಿಯಾಗಿದೆ. ದೇಶದ 130 ಕೋಟಿ ಜನರಿಗೆ ಆಹಾರ ದೊರೆಯುತ್ತಿರುವುದರಲ್ಲಿ ರೈತರು ಮಹತ್ವದ ಪಾತ್ರ ವಹಿಸುತ್ತಾರೆ. ಕೃಷಿ ಸಂಶೋಧನೆಗಳು, ಆವಿಷ್ಕಾರಗಳನ್ನು ರೈತರು, ಕೃಷಿ ವಿವಿಗಳು ಕೈಗೊಳ್ಳುತ್ತಿದ್ದು, ಕೃಷಿ ಕ್ಷೇತ್ರ ಅಭಿವೃದ್ಧಿಗೊಳಿಸುತ್ತಿದ್ದಾರೆ.

11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೈತವಿದ್ಯಾನಿಧಿ :

ಕೃಷಿ ಕ್ಷೇತ್ರದ ಅಭಿವೃದ್ಧಿಯಾಗುತ್ತಿದ್ದರೂ ರೈತರ ಸ್ಥಿತಿ ಸುಧಾರಿಸಿಲ್ಲ. ಆದ್ದರಿಂದ ರೈತರು ಸ್ವಾವಲಂಬನೆಯ ಬದುಕು ಬದುಕಲು, ಆದಾಯ ಹೆಚ್ಚಿಸಲು, ರೈತ ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ನಗರಪ್ರದೇಶದ ಮಕ್ಕಳಿಗೆ ಶಿಕ್ಷಣ ಮೀಸಲಾಗಬಾರದು. ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಅವಕಾಶಗಳನ್ನು ನೀಡುವ ಸಲುವಾಗಿ ರೈತ ವಿದ್ಯಾನಿಧಿಯನ್ನು ಜಾರಿಗೆ ತಂದಿದೆ. 11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ.ಗಳ ವಿದ್ಯಾನಿಧಿ ನೀಡಲಾಗಿದೆ. ಇಂದು ನೀಡಲಾಗಿರುವ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಯೋಜನೆಗಳಿಗೆ ಫಲಾನುಭವಿಗಳಿಂದ ಯಾವುದೇ ಅರ್ಜಿ ಪಡೆಯಲಾಗಿಲ್ಲ. ಒಮ್ಮೆ ದಲಿತ ರೈತರ ಮಗಳು ನನ್ನನ್ನು ಭೇಟಿಯಾದಳು. ಆ ಹೆಣ್ಣುಮಗಳು ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ ಹಾಗೂ ರೈತ ವಿದ್ಯಾನಿಧಿಗಳೆರಡೂ ಲಭಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಎರಡೇ ತಿಂಗಳಲ್ಲಿ ಬೆಳೆಹಾನಿ ಪರಿಹಾರ:

ಯಾವುದೇ ವರ್ಗದ ವಿದ್ಯಾರ್ಥಿ ವೇತನ ಪಡೆದಿದ್ದರೂ ರೈತ ಮಕ್ಕಳು, ರೈತ ವಿದ್ಯಾನಿಧಿಯನ್ನು ಪಡೆಯಬಹುದಾಗಿದೆ. ಇದು ಸರ್ಕಾರದ ರೈತಪರ ನಿಲುವಾಗಿದೆ. ಕೇಂದ್ರ ಸರ್ಕಾರ ನೀಡುವ ಬೆಳೆಹಾನಿ ಪರಿಹಾರದ ಜೊತೆಗೆ ರಾಜ್ಯಸರ್ಕಾರದ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಬೆಳೆಹಾನಿ ಪರಿಹಾರವನ್ನು ನೀಡಲಾಗುತ್ತಿದೆ. 14 ಲಕ್ಷ ರೈತರಿಗೆ 1900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ಎರಡು ತಿಂಗಳ ಅವಧಿಯೊಳಗೆ ನೀಡಲಾಗಿದೆ. ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್, ಧಾರವಾಡ ವಿವಿ ಕುಲಪತಿ ಡಾ:ಪಿ.ಎಲ್. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.