ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ಇದ್ದವರಿಗೆ ಖುಷಿ ಸುದ್ದಿ, ವಯೋಮಿತಿ 3 ವರ್ಷ ಸಡಿಲಿಕೆ; ಅಕ್ಟೋಬರ್ 3 ರ ಒಳಗೆ ಅಪ್ಲೈ ಮಾಡಿ-govt jobs karnataka pdo recruitment 2024 247 vacancies apply by oct 3 date extended and age relaxation announced uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ಇದ್ದವರಿಗೆ ಖುಷಿ ಸುದ್ದಿ, ವಯೋಮಿತಿ 3 ವರ್ಷ ಸಡಿಲಿಕೆ; ಅಕ್ಟೋಬರ್ 3 ರ ಒಳಗೆ ಅಪ್ಲೈ ಮಾಡಿ

ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ಇದ್ದವರಿಗೆ ಖುಷಿ ಸುದ್ದಿ, ವಯೋಮಿತಿ 3 ವರ್ಷ ಸಡಿಲಿಕೆ; ಅಕ್ಟೋಬರ್ 3 ರ ಒಳಗೆ ಅಪ್ಲೈ ಮಾಡಿ

ಸರ್ಕಾರಿ ಉದ್ಯೋಗ ಅನೇಕರ ಕನಸು. ಇಂತಹ ಕನಸು ಕಾಣುತ್ತಿರುವ ಪದವೀಧರರಿಗೆ ಪಿಡಿಒ ನೇಮಕಾತಿಯ ತಿದ್ದುಪಡಿ ಅಧಿಸೂಚನೆ ಮತ್ತೊಂದು ಸುತ್ತಿನ ಅವಕಾಶ ನೀಡಿದೆ. ಈ ಬಾರಿ 3 ವರ್ಷ ವಯೋಮಿತಿ ಸಡಿಲಿಕೆಯೊಂದಿಗೆ ಈ ಅವಕಾಶ ಬಂದಿದೆ. ಅಕ್ಟೋಬರ್ 3ರ ಒಳಗೆ ಮರೆಯದೇ ಅಪ್ಲೈ ಮಾಡಿ.

ಕರ್ನಾಟಕದ 247 PDO ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಸೇವಾ ಆಯೋಗ ಇದಕ್ಕಾಗಿ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ 247 PDO ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಸೇವಾ ಆಯೋಗ ಇದಕ್ಕಾಗಿ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿದೆ. (ಸಾಂಕೇತಿಕ ಚಿತ್ರ) (KPSC)

ಬೆಂಗಳೂರು: ಕರ್ನಾಟಕ ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ನಿರಾಶರಾಗಿದ್ದವರಿಗೆ ಒಂದು ಖುಷಿ ಸುದ್ದಿ. ಕರ್ನಾಟಕ ಸರ್ಕಾರವು ಸಿವಿಲ್ ಸೇವೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಮೂರು ವರ್ಷ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಇದರಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ 247 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ನೇಮಕಾತಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದೆ.

ಇದಕ್ಕಾಗಿ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿರುವ ಕೆಪಿಎಸ್‌ಸಿ, ಇಂದಿನಿಂದ (ಸೆಪ್ಟೆಂಬರ್ 18) ಅಕ್ಟೋಬರ್ 3 ರ ತನಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದೆ.

ಪಿಡಿಒ ನೇಮಕಾತಿ 2024; ಕೆಪಿಎಸ್‌ಸಿ ತಿದ್ದುಪಡಿ ಅಧಿಸೂಚನೆಯಿಂದ ಯಾರಿಗೆ ಪ್ರಯೋಜನ

ವಯೋಮಿತಿ ಸಡಿಲಿಕೆಯ ಕಾರಣ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 41 ವರ್ಷ, ಎಸ್‌ಸಿ, ಎಸ್ಟಿ, ಪ್ರವರ್ಗ-1 ವರ್ಗಗಳಿಗೆ 43 ವರ್ಷ ನಿಗದಿಯಾಗಿದೆ. ತಿದ್ದುಪಡಿ ಅಧಿಸೂಚನೆ ಪ್ರಕಾರ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆ.18ರಿಂದ ಅ.3ರವರೆಗೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ "ಪಂಚಾಯತಿ ಅಭಿವೃದ್ಧಿ ಅಧಿಕಾರಿ" ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದದ-97 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಈ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದೆ.

ಮೊದಲ ಅಧಿಸೂಚನೆಯ ಕ್ರಮ ಸಂಖ್ಯೆ 13ರಲ್ಲಿ ಗರಿಷ್ಠ ವಯೋಮಿತಿಯನ್ನು “ಸಾಮಾನ್ಯರಿಗೆ 35 ವರ್ಷಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿ- 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- 40 ವರ್ಷಗಳು” ಎಂದು ನಿಗದಿಪಡಿಸಲಾಗಿತ್ತು.

ಪಿಡಿಒ ನೇಮಕಾತಿ ಸಂಬಂಧಿಸಿ ಕೆಪಿಎಸ್‌ಸಿ ವಿಶೇಷ ಸೂಚನೆ

ವಿವಿಧ ಕಾರಣಗಳಿಂದಾಗಿ ಪಿಡಿಒ ನೇಮಕಾತಿಗೆ ಅರ್ಜಿ ಸಲ್ಲಿಸಲಾಗದೇ ಇದ್ದವರಿಗೆ ಇದು ಮತ್ತೊಂದು ಅವಕಾಶ. ಕೆಲವು ತಾಂತ್ರಿಕ ತೊಂದರೆ ಎದುರಿಸಿದ್ದರೆ, ಇನ್ನು ಕೆಲವರಿಗೆ ವಯೋಮಿತಿ ಸಮಸ್ಯೆಯಾಗಿತ್ತು. ಇನ್ನು ಕೆಲವರಿಗೆ ನೇಮಕಾತಿ ವಿಚಾರ ತಿಳಿಯುವಾಗ ತಡವಾಗಿರಬಹುದು. ಈಗ ಇಂತಹ ಎಲ್ಲ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ವಿಶೇಷ ಸೂಚನೆ ಯನ್ನು ನೀಡಿದೆ. ಆ ಮೂರು ಸೂಚನೆಗಳು ಹೀಗಿವೆ.

1) ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

2) ವಯೋಮಿತಿಯನ್ನು ಹೊರತುಪಡಿಸಿ ಉಳಿದಂತೆ, ಆಯೋಗದ ಅಧಿಸೂಚನೆ ಸಂಖ್ಯೆ ಇ(2)598/2023-24/ಪಿಎಸ್‌ಸಿ, ದಿನಾಂಕ:15.03.2024ರಲ್ಲಿ ತಿಳಿಸಲಾಗಿರುವ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಅನ್ವಯಿಸಬೇಕು. ಹಾಗೂ ಹೆಚ್ಚಿನ ವಿವರಗಳಿಗಾಗಿ ಮೊದಲ ಅಧಿಸೂಚನೆಯನ್ನು ಓದಿಕೊಳ್ಳಬೇಕು.

3) ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ ಪಕಟಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಹಾಗೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿರುವ ಆಯೋಗ, ಅರ್ಜಿ ಸಲ್ಲಿಸಲು ಅಕ್ಟೋಬರ್ 3ರ ತನಕ ಕಾಲಾವಕಾಶ ನೀಡಿದೆ. ಮೊದಲ ಅಧಿಸೂಚನೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ವೇತನ ಶ್ರೇಣಿ 37,900-70,850 ರೂಪಾಯಿ ಎಂದು ನಮೂದಿಸಿದೆ. ಅರ್ಜಿ ಸಲ್ಲಿಸುವಾಗ ತೊಂದರೆ ಕಾಣಿಸಿಕೊಂಡರೆ ಸಹಾಯವಾಣಿ ಸಂಖ್ಯೆ 080-30574957 / 30574901ಗೆ ಕರೆ ಮಾಡಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಅಧಿಸೂಚನೆಗಳಿರುವ ಪುಟದ ನೇರ ಲಿಂಕ್‌

https://kpsconline.karnataka.gov.in/Notification/LandingPageNotificationslistApplicants

ಅರ್ಜಿ ಸಲ್ಲಿಸುವುದಕ್ಕೆ ಇರುವ ನೇರ ಲಿಂಕ್

https://kpsconline.karnataka.gov.in/Login/Login

mysore-dasara_Entry_Point