CM Bommai on wild elephant attacks: ಕಾಡಾನೆ ಹಾವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ
ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಬಂದಿರುವ ಕಾಡಾನೆಗಳು ವಾಪಸ್ಸು ಹೋಗಿಲ್ಲ. ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಗುಂಪುಗಳಲ್ಲಿ ಆನೆಗಳು ಇದ್ದರೆ ಅವುಗಳನ್ನು ಚದುರಿಸುವುದು ಕಷ್ಟ. ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಹಳೇಬೀಡು( ಹಾಸನ): ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಳೇಬೀಡಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಬಂದಿರುವ ಕಾಡಾನೆಗಳು ವಾಪಸ್ಸು ಹೋಗಿಲ್ಲ. ಕೆಲವು ಸಂದರ್ಭಗಳಲ್ಲಿ ಮನುಷ್ಯರೂ ಕೂಡ ಕಾಡಿಗೆ ಹೋಗುವುದು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಗುಂಪುಗಳಲ್ಲಿ ಆನೆಗಳು ಇದ್ದರೆ ಅವುಗಳನ್ನು ಚದುರಿಸುವುದು ಕಷ್ಟ. ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ.
ಯಾವುದೋ ಒಂದು ಘಟನೆ ಸಂಭವಿಸಿದಾಗ ಕಾರ್ಯಾಚರಣೆ ಮಾಡಿದರೆ ಸೂಕ್ತವಲ್ಲ. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಕಾರ್ಯಪಡೆ ರಚಿಸಲಾಗಿದೆ. ತರಬೇತಿ, ವಾಹನ, ಸಲಕರಣೆ, ನಿಯಂತ್ರಣಾ ಕೊಠಡಿ ಸ್ಥಾಪಿಸಿ ಪ್ರತಿ ನಿತ್ಯ ಗಸ್ತು ತಿರುಗುವುದು, ಕಾರ್ಯಾಚರಣೆ ಮಾಡುವುದು ಹಾಗೂ ಆನೆಗಳು ಹೆಚ್ಚಿದ್ದ ಕಡೆ ಎಲ್ಲಾ ಪಡೆಗಳು ಹಾಗೂ ನೂರಾರು ಜನ ಸೇರಿ ಆನೆಗಳನ್ನು ಹಿಮ್ಮೆಟ್ಟಿಸಲು ವಾರ, ಹತ್ತುದಿನಗಳ ಕಾಲ ನಿರಂತರ ಪ್ರಯತ್ನ ಮಾಡಲು ಸೂಚಿಸಲಾಗಿದೆ. ಇದಕ್ಕೆ ಅಗತ್ಯ ಅನುದಾನ ನೀಡಿದ್ದು, ಈ ವರ್ಷದ ಬಜೆಟ್ ನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಬಂಡೀಪುರದಲ್ಲಿ ಹೊಸ ಮಾದರಿಯ ಬೇಲಿಯನ್ನು ಹಾಕಲಾಗುತ್ತಿದೆ. ಆನೆ ಕಾರಿಡಾರ್ ನ್ನು ಸಂಪೂರ್ಣವಾಗಿ ಕಾಯುವ ಕೆಲಸ ಮಾಡಲಾಗುವುದು ಎಂದರು.
ಸರ್ಕಾರಿ ಕೆಲಸ: ಗಂಭೀರ ಚಿಂತನೆ
ಆನೆ ತುಳಿತಕ್ಕೆ ಒಳಗಾಗಿ ಸಾವನ್ನು ಅಪ್ಪಿದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಮರಣ ಹೊಂದಿದವರ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಬಗ್ಗೆ ಗಂಭಿರವಾಗಿ ಪರಿಗಣಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ
ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, 18 ಸ್ಲೀಪರ್ ಸೆಲ್ ಗಳನ್ನು ಪತ್ತೆ ಹಚ್ಚಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಪಕ್ಕದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ತರಬೇತಿ ಪಡೆದು ಬರುವುದು ನಿರಂತರ ಪ್ರಕ್ರಿಯೆ ಆಗಿದೆ. ವಿಶೇಷವಾಗಿ ನರೇಂದ್ರ ಮೋದಿಯವರು ಬಂದ ನಂತರ, ಎಲ್ಲಿಯೂ ಇದಕ್ಕೆ ಅವಕಾಶ ನೀಡಿಲ್ಲ. ಹಿಂದೆ ಬೆಂಗಳೂರು, ಹೈದರಾಬಾದ್ ಮುಂಬೈ ನಲ್ಲಿ ಆಗಿತ್ತು. ಈಗ ಅವುಗಳೀಗೆ ಕಡಿವಾಣ ಹಾಕಿದ್ದದರೂ ಕರಾವಳಿ ಪ್ರದೇಶದಲ್ಲಿ ಸ್ಲೀಪರ್ ಸೆಲ್ ಗಳ ಮೇಲೆ ನಿಗಾ ಇರಿಸಲಾಗಿದೆ. ಕೇಂದ್ರೀಕೃತ ಶ್ರಮ ಹಾಕಬೇಕಿದೆ. ಹಿಂದೆ ನಾನು ಗೃಹ ಮಂತ್ರಿ ಇದ್ದ ಸಂದರ್ಭದಲ್ಲಿ ಎಲ್ಲಾ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳಿಗೆ ಕರೆ ನೀಡಿದ್ದೆ. ಬಹಳಷ್ಟು ಜನ ಕೃತ್ಯವೆಸಗಿ ಗಡಿದಾಟುತ್ತಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಿನಿಂದ ಸಮನ್ವಯದೊಂದಿಗೆ ಮಾಹಿತಿ ಹಂಚಿಕೊಳ್ಳುವುದು, ಅಲ್ಲಿರುವ ಸೆಲ್ ಗಳಿಗೆ ಕಡಿವಾಣ ಹಾಕಲು ಸಾಧ್ಯ. ಹೀಗಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗುವುದು ಎಂದು ತಿಳಿಸಿದ್ದಾರೆ.