ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಅಭೂತಪೂರ್ವ ಮಹಿಳಾ ಸ್ಪಂದನೆ; ಆದರೂ 300 ಗ್ರಾಮಗಳ ಮಹಿಳೆಯರು ಶಕ್ತಿ ಯೋಜನೆಯಿಂದ ದೂರ
ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳ 291 ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಸಾರಿಗೆ ಇಲಾಖೆ ಪ್ರಕಾರ ಕೆಎಸ್‍ಆರ್‌ಟಿಸಿ ವ್ಯಾಪ್ತಿಯ 204 ಗ್ರಾಮಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 45 ಗ್ರಾಮಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 42 ಗ್ರಾಮಗಳು ಬಸ್ ಸಂಚಾರದಿಂದ ವಂಚಿತವಾಗಿವೆ. ಬಿಎಂಟಿಸಿ ವ್ಯಾಪ್ತಿಯ ಮಹಿಳೆಯರು ಮಾತ್ರ ಸಂಪೂರ್ಣ ಭಾಗ್ಯವಂತರು.
ಬೆಂಗಳೂರು: ತಿಂಗಳ ಹಿಂದೆ ಜಾರಿಗೆ ಬಂದ ಶಕ್ತಿ ಯೋಜನೆಗೆ ರಾಜ್ಯದ ಮಹಿಳೆಯರು ಭರ್ಜರಿ ಪ್ರತಿಕ್ರಿಯೆ ನೀಡಿದ್ದು, ಉತ್ಸಾಹದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಹಳ್ಳಿಯ ಮಹಿಳೆಯರೆಲ್ಲರಿಗೂ ಶಕ್ತಿಯ ಸೌಲಭ್ಯ ಸಿಕ್ಕಿದೆ. ವೀಕೆಂಡ್ ಗಳಲ್ಲಿ ಬಸ್ ಗಳಲ್ಲಿ ನಿಲ್ಲಲೂ ಸ್ಥಳಾವಕಾಶ ಇರುವುದಿಲ್ಲ. ಆದರೆ 291 ಗ್ರಾಮಗಳ ಸ್ತ್ರೀಯರಿಗೆ ಈ ಶಕ್ತಿಯ ಭಾಗ್ಯ ಇಲ್ಲವಾಗಿದೆ.
ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ 291 ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಸಾರಿಗೆ ಇಲಾಖೆ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‌ಟಿಸಿ) ವ್ಯಾಪ್ತಿಯ 204 ಗ್ರಾಮಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 45 ಗ್ರಾಮಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 42 ಗ್ರಾಮಗಳು ಬಸ್ ಸಂಚಾರದಿಂದ ವಂಚಿತವಾಗಿವೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಬಸ್‍ಗಳು ಸಂಚರಿಸುತ್ತವೆ. ಹಾಗಾಗಿ ಬಿಎಂಟಿಸಿ ವ್ಯಾಪ್ತಿಯ ಮಹಿಳೆಯರು ಭಾಗ್ಯವಂತರು ಎಂದು ಹೇಳಬಹುದು. ಈ 291 ಗ್ರಾಮಗಳ ಮಹಿಳೆಯರು ಶಕ್ತಿ ಯೋಜನೆಯ ಫಲಾನುಭವಿಗಳಾಗಲು ಪಕ್ಕದ ಊರುಗಳಿಗೆ ನಡೆದೇ ಹೋಗಬೇಕಿದೆ.
ಸಚಿವರ ಭರವಸೆ:
ಇಡೀ ರಾಜ್ಯದಲ್ಲಿ 30,563 ಗ್ರಾಮಗಳಿಗೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರವಿದ್ದು 291 ಗ್ರಾಮಗಳಿಗೆ ಮಾತ್ರ ಕೊರತೆ ಉಂಟಾಗಿದೆ. ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಒಮ್ಮೆ ಸುಗಮ ರಸ್ತೆಗಳನ್ನು ನಿರ್ಮಾಣ ಮಾಡಿದ ನಂತರ 291 ಗ್ರಾಮಗಳಿಗೂ ಬಸ್ ಸೇವೆ ಒದಗಿಸಲು ಇಲಾಖೆ ಸಿದ್ದವಿದೆ. ಹೊಸದಾಗಿ ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದ್ದು, ಬಸ್‍ಗಳ ಕೊರತೆ ಉಂಟಾಗುವುದಿಲ್ಲ. 2016-17ರಿಂದೀಚೆಗೆ ನೌಕರರ ನೇಮಕಾತಿ ಆಗಿಲ್ಲ. ಈ ಅವಧಿಯಲ್ಲಿ ಸಾಕಷ್ಟು ನೌಕರರು ನಿವೃತ್ತರಾಗಿದ್ದಾರೆ. ಇವರಲ್ಲಿ ಚಾಲಕ, ನಿರ್ವಾಹಕರೂ ಸೇರಿದ್ದಾರೆ. ಹಂತಹಂತವಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ ಮೊದಲ ಹಂತದ ನೇಮಕಾತಿಗೆ ಒಪ್ಪಿಗೆ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಶಕ್ತಿ ಯೋಜನೆಯಿಂದ ಪ್ರಯಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಿಳೆಯರು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣ ಕರ ಹಿತದೃಷ್ಟಿಯಿಂದ ಹೊಸದಾಗಿ 4000 ಬಸ್ ಗಳನ್ನು ಖರೀದಿ ಮಾಡಲಾಗುವುದು ಎಂದೂ ಸಚಿವರು ತಿಳಿಸಿದರು.
ಕಾರಣಗಳೇನು?
ರಸ್ತೆಗಳ ದುಸ್ತಿತಿಯೇ ಬಸ್‍ಗಳ ಸವಲತ್ತು ಕಲ್ಪಿಸದಿರಲು ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಕೊಂಡಿದ್ದಾರೆ. ಈ ರಸ್ತೆಗಳಲ್ಲಿ ಭಾರಿ ಗಾತ್ರದ ಬಸ್ ಗಳು ಸಂಚರಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವು ಗ್ರಾಮಗಳಿಗೆ ಬಸ್ ಕೊರತೆ ಇದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ ನಂತರ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಚಿವರು ಹೇಳುತ್ತಾರೆ.
ಒಂದು ಉದಾಹರಣೆಯಾಗಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ 47 ಗ್ರಾಮಗಳಿಗೆ ಬಸ್ ಸವಲತ್ತು ಇಲ್ಲ. ಜಿಲ್ಲೆಯಲ್ಲಿ 1521 ಗ್ರಾಮಗಳಿದ್ದು, 1474 ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್‍ಗಳಿಗಾಗಿ ಸಮೀಪದ ಗ್ರಾಮಗಳಿಗೆ ನಡೆದೇ ಹೋಗಬೇಕಾಗಿದೆ. ಜಿಲ್ಲೆಯಲ್ಲಿ 150 ಸಿಬ್ಬಂದಿ ಕೊರತೆ ಇದೆ. 50 ಬಸ್ ಗಳ ಅಗತ್ಯವೂ ಇದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಬಸ್‍ಗಳಿಗಾಗಿ ಸಮೀಪದ ಗ್ರಾಮಗಳಿಗೆ ನಡೆದುಕೊಂಡೇ ಹೋಗಬೇಕಿದೆ. ಇದರಿಂದ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಆಸ್ಪತ್ರೆಗಳಿಗೆ ಹೋಗುವವರಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳಿಯ ನಾಗರೀಕರು ದೂರುತ್ತಾರೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ಗ್ರಾಮೀಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಸಮಸ್ಯೆ ಇದಕ್ಕೆ ಹೊರತಾಗಿಲ್ಲ. ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳನ್ನು ಹೊರತುಪಡಿಸಿದರೆ ಸಮಸ್ಯೆ ಎಲ್ಲ ಕಡೆಯೂ ಇದೆ. ಬೆಂಗಳೂರಿನಲ್ಲಿ ಸಾರಿಗೆ ಸಮಸ್ಯೆ ಇಲ್ಲ ಎಂದರೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಸಮಸ್ಯೆ ಇಲ್ಲ ಎಂದೇ ಬಿಂಬಿತವಾಗುತ್ತದೆ. ಮಾಧ್ಯಮಗಳ ಧೋರಣೆಯೂ ಹಾಗೆಯೇ ಇದೆ. ಆದರೆ ವಾಸ್ತವದಲ್ಲಿ ಗಾಮೀಣ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಸ್ಯೆಗಳು ಹೆಚ್ಚು.
ರಾಮಲಿಂಗಾರೆಡ್ಡಿ ಅವರು ಹೊಸದಾಗಿ ಇಲಾಖೆಯ ಜವಬ್ಧಾರಿ ಹೊತ್ತುಕೊಂಡಿದ್ದರೂ ಈ ಹಿಂದೆ ಸಾರಿಗೆ ಇಲಾಖೆಯನ್ನು ನಿಭಾಯಿಸಿದ ಅನುಭವ ಅವರಿಗೆ ಇದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಹಣ ಪ್ರತಿ ತಿಂಗಳು ಸಂದಾಯವಾಗುತ್ತದೆ. ಬಜೆಟ್ ನಲ್ಲಿ ಅನುದಾನ ತೆಗೆದಿರಿಸಲಾಗಿದೆ. ಆರ್ಥಿಕ ಸಮಸ್ಯೆ ಉಂಟಾಗುವ ಪ್ರಮೇಯ ಒದಗಿಬರುವುದಿಲ್ಲ. ಆದ್ದರಿಂದ ಹಣಕಾಸಿನ ಮುಗ್ಗಟ್ಟು ಉಂಟಾಗುವುದಿಲ್ಲ ಎಂಬ ವಿಶ್ವಾಸವೂ ಸಚಿವರಿಗೆ ಇದೆ. ಇದೇ ಕಾರಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಕಾದು ನೋಡೋಣ.
(ವರದಿ: ಎಚ್. ಮಾರುತಿ)