ಗ್ರೇಟರ್‌ ಬೆಂಗಳೂರು ಬ್ರಾಂಡ್‌ ಆಗದಿರಲು ಇರುವ ಕಾರಣಗಳು ಇವೇ ನೋಡಿ: ರಾಜೀವ್ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಗ್ರೇಟರ್‌ ಬೆಂಗಳೂರು ಬ್ರಾಂಡ್‌ ಆಗದಿರಲು ಇರುವ ಕಾರಣಗಳು ಇವೇ ನೋಡಿ: ರಾಜೀವ್ ಹೆಗಡೆ ಬರಹ

ಗ್ರೇಟರ್‌ ಬೆಂಗಳೂರು ಬ್ರಾಂಡ್‌ ಆಗದಿರಲು ಇರುವ ಕಾರಣಗಳು ಇವೇ ನೋಡಿ: ರಾಜೀವ್ ಹೆಗಡೆ ಬರಹ

ಬೆಂಗಳೂರಿನ ಸಮಸ್ಯೆಗಳ ಬಗ್ಗೆ ತಮ್ಮ ಹರಿತವಾದ ಲೇಖನದ ಮೂಲಕ ಬೆಳಕು ಚೆಲ್ಲುವ ರಾಜೀವ್ ಹೆಗಡೆಯವರು ಗ್ರೇಟರ್ ಬೆಂಗಳೂರು ಬ್ರಾಂಡ್‌ನ ಸಮಸ್ಯೆಗಳು ಮತ್ತು ಯಾವ ರೀತಿಯಲ್ಲಿ ಅದು ಸಮಸ್ಯೆ ತರಬಲ್ಲದು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ.

ಗ್ರೇಟರ್ ಬೆಂಗಳೂರು ಬ್ರಾಂಡ್‌ನ ಸಮಸ್ಯೆಗಳು
ಗ್ರೇಟರ್ ಬೆಂಗಳೂರು ಬ್ರಾಂಡ್‌ನ ಸಮಸ್ಯೆಗಳು (Rajeev Hegade Facebook)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯಲಾಗುತ್ತದೆ. ಪಾಲಿಕೆಯನ್ನು ವಿಸರ್ಜಿಸಿ, ಆಡಳಿತ ವಿಕೇಂದ್ರಿಕರಣ ಮತ್ತು ಮರುವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಗ್ರೇಟರ್ ಬೆಂಗಳೂರು ಬ್ರಾಂಡ್ ಆಗದಿರಲು ಕಾರಣವೇನು ಎನ್ನುವುದನ್ನು ರಾಜೀವ್ ಹೆಗಡೆ ವಿವರಿಸಿದ್ದಾರೆ. ಅವರ ಫೇಸ್‌ಬುಕ್ ಬರಹದ ಯಥಾವತ್ ಪ್ರತಿ ಇಲ್ಲಿದೆ.

ಗ್ರೇಟರ್‌ ಬೆಂಗಳೂರು ಬ್ರಾಂಡ್‌ ಆಗದಿರಲು ಇರುವ ಕಾರಣಗಳು...

- ಬೆಂಗಳೂರಿಗರು ಸರಿಯಾಗಿ ಮನೆ ಕಟ್ಟಿಲ್ಲ.

- ಕಸವನ್ನು ಜನರು ಸರಿಯಾಗಿ ಹಾಕುವುದಿಲ್ಲ.

- ರಸ್ತೆಗಳು ಹೊಂಡಗಳಾಗುವ ರೀತಿ ವಾಹನ ಓಡಿಸುತ್ತಾರೆ.

- ನಗರದಲ್ಲಿನ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸರಿಯಾಗಿ ಜನರು ತೆರಿಗೆ ಕಟ್ಟುತ್ತಿಲ್ಲ.

- ತೆರಿಗೆ ಕಟ್ಟುವ ಹಣದಲ್ಲೂ ಅರ್ಧಕ್ಕೂ ಅಧಿಕ ಪ್ರಮಾಣವನ್ನು ಕಮೀಷನ್‌ ರೂಪದಲ್ಲಿ ಜನರೇ ಲೂಟಿ ಮಾಡುತ್ತಿದ್ದಾರೆ.

- ಪ್ರತಿದಿನ ಮನೆ, ಕಿಚನ್‌, ಶೌಚಾಲಯ ಸ್ವಚ್ಛಗೊಳಿಸುವಂತೆ ಚರಂಡಿ, ರಾಜಕಾಲುವೆಗೆ ಇಳಿದು ಸ್ವಚ್ಛಗೊಳಿಸಬೇಕಾದ ಬೆಂಗಳೂರಿಗರು ನಿದ್ರೆ ಮಾಡುತ್ತಿದ್ದಾರೆ.

- ಬೆಂಗಳೂರಿನ ಸಮಸ್ಯೆಗಳ ಕುರಿತು ಸಹಾಯವಾಣಿಗೆ ದೂರು ನೀಡಿ ಸಮಯ ವ್ಯರ್ಥ ಮಾಡುವ ಬದಲಿಗೆ, ಅವರೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.

- ಸರ್ಕಾರದಲ್ಲಿನ ಅತ್ಯಂತ ಪ್ರಾಮಾಣಿಕ ಆಡಳಿತ ವ್ಯವಸ್ಥೆಯಲ್ಲಿನ ಶುಭ್ರ ಪ್ರಜಾಪ್ರಭುತ್ವವಾದಿಗಳ ರೀತಿಯಲ್ಲಿ ಸದಾಶಿವನಗರ, ಡಾಲರ್ಸ್‌ ಕಾಲನಿಯಲ್ಲಿ ಬೆಂಗಳೂರಿನ ಇತರ ಜನರು ಮನೆ ಕಟ್ಟುತ್ತಿಲ್ಲ.

- ಸಿಎಂ, ಡಿಸಿಎಂ ಹಾಗೂ ಸಚಿವರ ರೀತಿಯಲ್ಲಿ ಸಾರ್ವಜನಿಕರು ಪ್ರಯಾಣಕ್ಕೆ ವಿಮಾನ, ಹೆಲಿಕಾಪ್ಟರ್‌ನ್ನು ಬಳಸುತ್ತಿಲ್ಲ

- ಪ್ರಾಮಾಣಿಕವಾಗಿ ದುಡಿದು ವಿದೇಶಗಳಲ್ಲಿ ಬೇನಾಮಿ ಆಸ್ತಿ ಮಾಡುವ ಬದಲಿಗೆ, ಬೆಂಗಳೂರಿಗರು ಭ್ರಷ್ಟರಾಗಿ ಈ ದೇಶದಲ್ಲಿ ತೆರಿಗೆ ಕಟ್ಟುತ್ತಿದ್ದಾರೆ.

- ಸರಿಯಾಗಿ ಮನೆ ಕಟ್ಟಲು ಬ್ರಾಂಡ್‌ ಬೆಂಗಳೂರು ಸಚಿವರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಅವರ ಕೈ ಕೆಳಗಿನ ಅಧಿಕಾರಿಗಳು ಬೇಡವೆಂದರೂ ಬಲವಂತ ಹಾಗೂ ಬೆದರಿಕೆಯ ಮೂಲಕ ಲಂಚವನ್ನು ತಿನ್ನಿಸಿ ಬಿಬಿಎಂಪಿಯಿಂದ ಜನರೇ ಅನುಮತಿ ಪಡೆಯುತ್ತಿದ್ದಾರೆ.

- ಬೆಂಗಳೂರಿನ ಸಮಸ್ಯೆಗಳು ಏನಿವೆ ಎಂದು ರೌಂಡ್ಸ್‌ ಮೂಲಕ ತಿಳಿಯೋಣವೆಂದು ಸಚಿರು ಹೊರಟರೆ, ಸಾರ್ವಜನಿಕರು ತಮ್ಮ ವಾಹನಗಳನ್ನು ಹೊರತೆಗೆದು ಟ್ರಾಫಿಕ್‌ ಜಾಮ್‌ ಮಾಡುತ್ತಿದ್ದಾರೆ.

- ಜನರ ಅತಿಯಾದ ಶಾಪಿಂಗ್‌ ಸಂಸ್ಕೃತಿಯಿಂದ ಫುಟ್‌ಪಾತ್‌ಗಳಲ್ಲಿ ಅಂಗಡಿಗಳ ಹೆಚ್ಚಾಗಿ ಓಡಾಡಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

- ನೀರು ಹೋಗಲು ಜಾಗವಿಲ್ಲ ಎಂದು ಟೀಕಿಸುವ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಹೊಂಡ ನಿರ್ಮಿಸಲಾಗಿದೆ.

- ಫುಟ್‌ಪಾತ್‌ ಮೇಲೆ ಜನರು ಸರಿಯಾಗಿ ನಡೆದುಕೊಂಡು ಹೋದರೆ ನೀರು ಹೋಗಲು ಸಮಸ್ಯೆಯಾಗುತ್ತದೆ ಎಂದು, ಅಲ್ಲಿರುವ ಕಲ್ಲುಗಳನ್ನು ಕಿತ್ತು ನೀರು ಹೋಗಲು ಅವಕಾಶ ಮಾಡಿಕೊಡಲಾಗಿದೆ.

- ಮಳೆ ಬರುತ್ತದೆ ಎನ್ನುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದರೂ ಬೋಟ್‌ ಬುಕ್‌ ಮಾಡದಿರುವಷ್ಟು ದರ್ಪವನ್ನು ಜನರು ಪ್ರದರ್ಶಿಸಿದ್ದಾರೆ.

- ಇವೆಲ್ಲದರ ಜತೆಗೆ ಮಳೆಗೂ ದುರ್ಬುದ್ಧಿ. ಟ್ಯಾಂಕರ್‌ ಮೂಲಕ ಜನರಿಗೆ ನೀರುಣಿಸುವ ಕಾಯಕ ಮಾಡುವ ಪುಣ್ಯಾತ್ಮರ ಹೊಟ್ಟೆ ಮೇಲೆ ಹೊಡೆಯಲು ವರ್ಷಧಾರೆಯಾಗಿ ಬೆಂಗಳೂರಿನ ಬ್ರಾಂಡ್‌ನ್ನು ಹಾಳು ಮಾಡುತ್ತಿದೆ.

ವಿಶೇಷ ಮನವಿ: ಗಟರ್‌ ಬೆಂಗಳೂರು ನಿರ್ಮಾಣ ಮಾಡುವ ಬ್ರಾಂಡ್‌ ಬೆಂಗಳೂರು ಸಚಿವರ ಕನಸಿಗೆ ನಾವು ಸಾರ್ವಜನಿಕರು ಹೇಗೆ ಅಡ್ಡಿಯಾಗಿದ್ದೇವೆ ಎನ್ನುವ ಪಟ್ಟಿಯನ್ನು ದಯವಿಟ್ಟು ಬೆಳೆಸಿ. ಸಮಯದ ಅಭಾವದಿಂದ ಕೇವಲ ಅವರು ಮನೆಯನ್ನು ಸರಿಯಾಗಿ ಕಟ್ಟದಿರುವ ಬಗ್ಗೆ ಮಾತನಾಡಿದ್ದಾರೆ. ಅಯ್ಯೋ ದಯವಿಟ್ಟು ಕ್ಷಮಿಸಿ, ಅದು ಗಟರ್‌ ಅಲ್ಲ, ಗ್ರೇಟರ್‌ ಆಗಬೇಕಿತ್ತು.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in