ಗ್ರೇಟರ್ ಬೆಂಗಳೂರು ರಚನೆಗೆ ಸಿಕ್ಕಿತು ಅಂಕಿತ, ಪ್ರಾಧಿಕಾರ ರಚನೆ ಯಾವಾಗ, ಪಾಲಿಕೆಯಲ್ಲಿ ಎಷ್ಟು ವಾರ್ಡ್ಗಳಿರುತ್ತವೆ, ಗಮನಸೆಳೆದಿವೆ 6 ಅಂಶಗಳು
ಗ್ರೇಟರ್ ಬೆಂಗಳೂರು ರಚನೆಗೆ ಅಂಕಿತ: ಬೆಂಗಳೂರಿನ ವ್ಯಾಪ್ತಿ ಹೆಚ್ಚಿಸಿ ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ರಚಿಸುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ರ ಅಧಿಸೂಚನೆ ಪ್ರಕಟವಾಗಿದೆ. ಗರಿಷ್ಠ 7 ಪಾಲಿಕೆ ರಚನೆಯಾಗಲಿದ್ದು, ಅಧಿಸೂಚನೆಯಲ್ಲಿ ಗಮನಸೆಳೆದ 6 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಗ್ರೇಟರ್ ಬೆಂಗಳೂರು ರಚನೆಗೆ ಅಂಕಿತ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ವಿಭಜಿಸಿ, ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ರ ಅಧಿಸೂಚನೆ ಪ್ರಕಟವಾಗಿದೆ. ರಾಜ್ಯಪಾಲ ತಾವರ್ಚಂದ್ ಗೆಹಲೋತ್ ಅವರು ಮಾರ್ಚ್ 25 ರಂದು ಮಸೂದೆಗೆ ಸಂಬಂಧಿಸಿ ಕೆಲವು ಸ್ಪಷ್ಟೀಕರಣ ಕೇಳಿದ್ದರು. ಕರ್ನಾಟಕ ಸರ್ಕಾರ ಆ ಸ್ಪಷ್ಟೀಕರಣಗಳನ್ನು ಕೊಟ್ಟ ಬಳಿಕ ಏಪ್ರಿಲ್ 24 ರಂದು ಗ್ರೇಟರ್ ಬೆಂಗಳೂರು ರಚನೆಗೆ ಅಂಕಿತ ಹಾಕಿದ್ದಾರೆ. ಇದಾದ ಬಳಿಕ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024'ರ ಅಧಿಸೂಚನೆ ಪ್ರಕಟವಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ಸಂಬಂಧಿಸಿದ 6 ಅಂಶ
ಪ್ರಕಟವಾಗಿರುವ ಅಧಿಸೂಚನೆ ಪ್ರಕಾರ, ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಸರ್ಕಾರ ಗುರುತಿಸಿ ಅವುಗಳ ವಿವರ ಪ್ರಕಟಿಸಲಿದೆ. ಸುಗಮ ಆಡಳಿತಕ್ಕಾಗಿ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024'ರ ಪ್ರಕಾರ ಮೂರು ಹಂತಗಳ ಆಡಳಿತ ವ್ಯವಸ್ಥೆ ಜಾರಿಗೊಳಿಸಲಿದೆ.
1) ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಯಾವ ಪ್ರದೇಶ: ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕೆಲವು ಪ್ರದೇಶಗಳು ಸೇರಿದಂತೆ ಸರ್ಕಾರ ಅಧಿಸೂಚಿಸುವ ಪ್ರದೇಶಗಳು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಲಿವೆ.
2) ಬಿಬಿಎಂಪಿ ಏನಾಗಲಿದೆ?: ಗ್ರೇಟರ್ ಬೆಂಗಳೂರು ರಚನೆಯಾದ ಬಳಿಕ ಬೃಹತ್ ಬೆಂಗಳೂರು ನಗರ ಪಾಲಿಕೆ, ನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿಗಳು ಕೆಲವು ರದ್ದುಗೊಳ್ಳಲಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಪಾಲಿಕೆ ಹಾಗೂ ವಾರ್ಡ್ ಹೀಗೆ ಮೂರು ಹಂತಗಳ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ.
3) ಎಷ್ಟು ದಿನಗಳಲ್ಲಿ ಜಿಬಿಎ ರಚನೆ: ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024' ಅಧಿಸೂಚನೆ ಪ್ರಕಟವಾದ 120 ದಿನಗಳಲ್ಲಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆಯಾಗಬೇಕು.
4) ಜಿಬಿಎನಲ್ಲಿ ಎಷ್ಟು ಪಾಲಿಕೆ: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ವ್ಯಾಪ್ತಿಯಲ್ಲಿ ತಲಾ 150 ವಾರ್ಡ್ಗಳ ಗರಿಷ್ಠ ಏಳು ನಗರ ಪಾಲಿಕೆ ರಚಿಸುವ ಅವಕಾಶವಿದೆ. ಪ್ರತಿ ನಗರ ಪಾಲಿಕೆಗೂ ಬೆಂಗಳೂರು ಎಂಬ ಮೊದಲ ಪದದಿಂದ ನಾಮಕರಣ ಮಾಡಲಾಗುತ್ತದೆ.
5) ನೇಮಕಾತಿ ನಿಯಮ: ಪ್ರತಿ ನಗರ ಪಾಲಿಕೆಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಿಬಿಎ ಅಂತಿಮಗೊಳಿಸಲಿದೆ. ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ನೌಕರರ ನೇಮಕಾತಿ ಜಿಬಿಎ ಮಾಡಿದರೆ, ಗ್ರೂಪ್ ಸಿ ಮತ್ತು ಡಿ ನೌಕರರನ್ನು ಆಯಾ ನಗರ ಪಾಲಿಕೆಯ ಆಯುಕ್ತರ ವಿವೇಚನೆ ಬಿಡಲಾಗುತ್ತದೆ. ಆದರೆ ಶಿಸ್ತು ಕ್ರಮದ ಅಧಿಕಾರ ಜಿಬಿಎ ಬಳಿಯೇ ಇರಲಿದೆ.
6) ಯೋಜನೆ ರೂಪಿಸಲು ಬಿಎಂಪಿಸಿ: ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸೃಜಿಸಲಾಗುವ ‘ಬೆಂಗಳೂರು ಮಹಾನಗರ ಯೋಜನಾ ಸಮಿತಿ’ಗೆ (ಬಿಎಂಪಿಸಿ) ನಗರ ಯೋಜನೆ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಘಟನಾ ವ್ಯವಸ್ಥೆ ಹೀಗಿರಲಿದೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಮುಖ್ಯಮಂತ್ರಿ ಅಧ್ಯಕ್ಷರು. ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರು. ಗೃಹ, ನಗರಾಭಿವೃದ್ಧಿ, ಸಾರಿಗೆ, ಇಂಧನ ಸಚಿವರು ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು, ಮುಖ್ಯ ಆಯುಕ್ತರು, ಪಾಲಿಕೆಗಳ ಮೇಯರ್ಗಳು, ಪ್ರತಿ ಪಾಲಿಕೆಯಿಂದ ನಾಮನಿರ್ದೇಶನಗೊಳ್ಳುವ ಇಬ್ಬರು ಸದಸ್ಯರು, ಬಿಡಿಎ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್ಸಿಎಲ್, ಬೆಸ್ಕಾಂ, ನಗರ ಪೊಲೀಸ್ ಕಮಿಷನರ್, ಬಿಎಂಎಲ್ಟಿಎ ಸಿಇಒ, ಬಿಎಸ್ಡಬ್ಲ್ಯುಎಂಎಲ್ ಎಂಡಿ, ಗ್ರೇಟರ್ ಬೆಂಗಳೂರು ನಗರ ಯೋಜನೆಯ ಮುಖ್ಯ ನಗರ ಯೋಜಕ, ಗ್ರೇಟರ್ ಬೆಂಗಳೂರಿನ ಪ್ರಧಾನ ಎಂಜಿನಿಯರ್ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸದಸ್ಯರು.