Gruha Jyothi: ಇಂದಿನಿಂದ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿಯಡಿ 200 ಯೂನಿಟ್ ಉಚಿತ ವಿದ್ಯುತ್‌ಗಾಗಿ ಅರ್ಜಿ ಸ್ವೀಕಾರ; ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Gruha Jyothi: ಇಂದಿನಿಂದ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿಯಡಿ 200 ಯೂನಿಟ್ ಉಚಿತ ವಿದ್ಯುತ್‌ಗಾಗಿ ಅರ್ಜಿ ಸ್ವೀಕಾರ; ಸಂಪೂರ್ಣ ಮಾಹಿತಿ

Gruha Jyothi: ಇಂದಿನಿಂದ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿಯಡಿ 200 ಯೂನಿಟ್ ಉಚಿತ ವಿದ್ಯುತ್‌ಗಾಗಿ ಅರ್ಜಿ ಸ್ವೀಕಾರ; ಸಂಪೂರ್ಣ ಮಾಹಿತಿ

ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿಯಡಿ 200 ಯೂನಿಟ್ ಉಚಿತ ವಿದ್ಯುತ್‌ ಪಡೆಯಲು ಇಂದಿನಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ.

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ
200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ (Gruha Jyothi Scheme) ಇಂದಿನಿಂದ (ಜೂನ್ 18, ಭಾನುವಾರ) ಅರ್ಜಿ ಸ್ವೀಕರಿಸಲಾಗುತ್ತಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ (Seva Sindhu) ನೋಂದಣಿ ಮಾಡಿಕೊಂಡ ಬಳಿಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳಿಂದ ನೋಂದಣಿ ಪೂರ್ಣಗೊಂಡ ಬಳಿಕ ಇಂಧನ ಇಲಾಖೆ ಅಧಿಕೃತವಾಗಿ ಪ್ರತ್ಯೇಕ ಕಾರ್ಯಕ್ರಮದ ಮೂಲಕ ಗೃಹ ಜ್ಯೋತಿಯನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮಹಿಳೆಯರಿಗೆ ಉಚಿತವಾಗಿ ಬಸ್ ಸೇವೆಯ ಶಕ್ತಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ಜಾರಿಗೆ ತಂದಿದೆ.

ಸೇವಾ ಸಿಂಧು (https://sevasindhugs.karnataka.gov.in/) ಈ ಲಿಂಕ್ ಅನ್ನು ಸ್ಮಾರ್ಟ್ ಫೋನ್, ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್​ ಮೂಲಕ ಸರಳವಾಗಿ ನೋಂದಾಯಿಸಿಕೊಳ್ಳಬಹುದು. ರಾಜ್ಯ ಸರ್ಕಾರ ನೀಡಿರುವ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದರೆ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.

ಫಲಾನುಭವಿಗಳಾಗಲು ತಮ್ಮ ಆಧಾರ್ ಕಾರ್ಡ್, ವಿದ್ಯುತ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಒಂದು ವೇಳೆ ನೀವು ಬಾಡಿಗೆದಾರರಾಗಿದ್ದರೆ ಬಾಡಿಗೆ ಮನೆಯ ವಾಸದ ದೃಢೀಕರಣ, ಆಧಾರ್ ಇಲ್ಲವೇ ವೋಟರ್ ಐಡಿಯನ್ನು ನೀಡಬೇಕು

ಎಲ್ಲಿಲ್ಲಿ ನೋಂದಣಿ ಮಾಡಿಕೊಳ್ಳಬಹುದು?

ಗೃಹ ಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ನೋಂದಣಿಯನ್ನು ಎಲ್ಲಿ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಕರ್ನಾಟಕ ಒನ್, ಬೆಂಗಳೂರು ಒನ್ ಸೆಂಟರ್, ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ವಿದ್ಯುತ್ ಕಚೇರಿಯಲ್ಲಿಯೂ ಕೂಡ ನೋಂದಣಿ ಮಾಡಿಕೊಳ್ಳಬಹುದು. ಯೋಜನೆಗೆ ಸಂಬಂಧಿಸಿ ಕುಂದು ಕೊರತೆ ಏನಿದ್ದರೂ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ ಅಥವಾ 24×7 ಸಹಾಯವಾಣಿ 1912ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಆಗಸ್ಟ್​ 1ರಿಂದ ಜಾರಿ

ಗೃಹ ಜ್ಯೋತಿ ಯೋಜನೆಯು ಆಗಸ್ಟ್ 1 ರಿಂದ (ಜುಲೈನಲ್ಲಿ ವಿದ್ಯುತ್ ಬಳಕೆ ಮಾಡಿರುವ ಹಿನ್ನೆಲೆ) ಜಾರಿಗೆ ಬರಲಿದ್ದು, 200 ಯುನಿಟ್​ ವಿದ್ಯುತ್ ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸಿದವರು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ತಿಂಗಳ ಬಳಕೆ ಗರಿಷ್ಠ 200 ಯುನಿಟ್‌ವರೆಗೆ, ಕಳೆದ ಹಣಕಾಸು ವರ್ಷದಲ್ಲಿ ಪ್ರತಿ ಗ್ರಾಹಕ ತಿಂಗಳ ಸರಾಸರಿ ಬಳಕೆ ಮೇಲೆ ಮತ್ತು ಅವರ ಸರಾಸರಿ ಉಪಯೋಗದ ಮೇಲೆ ಶೇ.10% ಉಚಿತ ವಿದ್ಯುತ್​​ ಅರ್ಹತೆಗೆ ಅರ್ಹರು.

ಕರ್ನಾಟಕ ರಾಜ್ಯದ 2 ಕೋಟಿ ಗ್ರಾಹಕರಿಗೆ ಪ್ರಯೋಜನ ಆಗಲಿದೆ. ಬೆಸ್ಕಾಂ ತನ್ನ ಕಚೇರಿಗಳಲ್ಲೂ ಗೃಹಜ್ಯೋತಿ ಯೋಜನೆಯ ಅರ್ಜಿಗಳನ್ನು ಸ್ವೀಕರಿಸಲಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಏಕಕಾಲಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಲಯಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಲಾಗುತ್ತದೆ.

ವಲಯ ಕಚೇರಿಯಲ್ಲಿ 2, ವೃತ್ತ ಕಚೇರಿಯಲ್ಲಿ 2, ವಿಭಾಗ ಕಚೇರಿಯಲ್ಲಿ 2, ಉಪ ವಿಭಾಗದಲ್ಲಿ 2 ಮತ್ತು ಶಾಖೆಯಲ್ಲಿ 1 ವಿಶೇಷ ಕೌಂಟರ್ ತೆರೆಯಲಾಗುತ್ತದೆ. ಪ್ರತಿ ಕೌಂಟರ್‌ಗಳಗೆ ಇಬ್ಬರು ಸಿಬ್ಬಂದಿ ಇರಲಿದ್ದಾರೆ. ಎಲ್ಲಾ ಕಚೇರಿಗಳಲ್ಲಿ 'ಗೃಹಜ್ಯೋತಿ' ಕೌಂಟರ್ ಎಂಬ ಹೆಸರಿನ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ.

ಕೊನೆಯ ದಿನಾಂಕವಿಲ್ಲ

ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ವರ್ಷವಿಡೀ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ. ಅರ್ಜಿ ಸಲ್ಲಿಕೆಯೂ ಸಂಪೂರ್ಣ ಉಚಿತವಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸೇವೆಯ ಶಕ್ತಿ ಯೋಜನೆ ಜಾರಿ ಮಾಡಲಾಗಿದೆ.

Whats_app_banner