ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಎರಡು ವರ್ಷ, ಈಗ ಗೃಹಲಕ್ಷಿ ಸಂಘಗಳ ರಚನೆಗೆ ಸಿದ್ದತೆ, ಹೇಗಿರಲಿದೆ ಕಾರ್ಯಯೋಜನೆ
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಎರಡು ವರ್ಷ, ಈಗ ಗೃಹಲಕ್ಷಿ ಸಂಘಗಳ ರಚನೆಗೆ ಸಿದ್ದತೆ, ಹೇಗಿರಲಿದೆ ಕಾರ್ಯಯೋಜನೆ

ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಎರಡು ವರ್ಷ, ಈಗ ಗೃಹಲಕ್ಷಿ ಸಂಘಗಳ ರಚನೆಗೆ ಸಿದ್ದತೆ, ಹೇಗಿರಲಿದೆ ಕಾರ್ಯಯೋಜನೆ

ಕರ್ನಾಟಕದಲ್ಲಿ ಎರಡು ವರ್ಷದ ಹಿಂದೆ ಜಾರಿಗೊಂಡಿರುವ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿಯೇ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ರಚಿಸಿ ಮಹಿಳೆಯರನ್ನು ಸದೃಢಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ.

ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಸಂಘ ಸ್ಥಾಪನೆ ಸಂಬಂಧ ಬೆಂಗಳೂರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರರು ಚರ್ಚಿಸಿದರು,
ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಸಂಘ ಸ್ಥಾಪನೆ ಸಂಬಂಧ ಬೆಂಗಳೂರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರರು ಚರ್ಚಿಸಿದರು,

ಬೆಂಗಳೂರು: ಕರ್ನಾಟಕದ ಪಂಚ ಗ್ಯಾರಂಟಿಗಳಲ್ಲಿ ಒಂದಾಗ ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ಎರಡು ವರ್ಷ ಕಳೆದಿದ್ದು. ಈಗ ಅದು ಗೃಹಲಕ್ಷ್ಮಿ ಸಂಘದ ರೂಪ ಪಡೆಯಲಿದೆ. ಗೃಹಲಕ್ಷ್ಮೀ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವ ಉದ್ದೇಶದಿಂದ "ಗೃಹಲಕ್ಷ್ಮೀ ಸಂಘ" ಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎನ್ನುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡುವ ವಿವರಣೆ.

ವಿಧಾನಸೌಧದಲ್ಲಿ ಗುರುವಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಶಕ್ತಿ ಗುಂಪುಗಳನ್ನು ರಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ 'ಗೃಹಲಕ್ಷ್ಮಿ' ಸಂಘವನ್ನು ರಚಿಸಲಾಗುವುದು ಎಂದರು.

ರಾಜ್ಯದಲ್ಲಿ ಈ ಹಿಂದೆ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾಗ ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟುಹಾಕಿ, ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು. ಅದೇ ರೀತಿ ಈಗ ಗೃಹಲಕ್ಷ್ಮಿ ಸಂಘಗಳ ಮೂಲಕ ಕುಟುಂಬದ ಯಜಮಾನಿಯರಲ್ಲಿ ಆರ್ಥಿಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಂಘ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಹೇಗಿರಲಿದೆ ಯೋಜನೆ

ರಾಜ್ಯದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆಯ್ದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶ ಹೊಂದಲಾಗಿದೆ. ನಂತರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದರು.

ರಾಜ್ಯದಲ್ಲಿ ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಹಾಗಾಗಿ, ಇಲಾಖೆ ವತಿಯಿಂದ 'ಅಂಗನವಾಡಿಗಳ ಸುವರ್ಣೋತ್ಸವ' ವನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಮೈಸೂರು ಅಥವಾ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಲಾಗುವುದೆಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆಯ ಕಾರ್ಯದರ್ಶಿ ಡಾ.ಶಮ್ಲಾ‌ ಇಕ್ಬಾಲ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀವಿದ್ಯಾ, ಇಸಿಡಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ದಿಲೀಶ್ ಸಸಿ, ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ವಿಷಯಗಳ ಬಗ್ಗೆ ಚರ್ಚೆ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮಹಿಳಾ ಮೇಲ್ವಿಚಾರಕಿ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಸಭೆ ನಡೆಸಿದರು.

ಮಕ್ಕಳ ಅಪೌಷ್ಟಿಕತೆ ನಿವಾರಣೆ ಹಾಗೂ ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರು ಚರ್ಚೆ ನಡೆಸಿದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.