Gruha Lakshmi: ಗೃಹಲಕ್ಷ್ಮಿ ಯೋಜನೆ ನೋಂದಣಿ, ಪ್ರತಿ ಪಡೆಯಲು ಹಣ ನೀಡಬೇಡಿ: ಸರ್ಕಾರವೇ ನಿಮ್ಮ ಪರವಾಗಿ 12 ರೂ. ಕೊಡಲಿದೆ
Gruha Lakshmi Registration ಗೃಹಲಕ್ಷ್ಮಿ( Gruha Lakshmi) ನೋಂದಣಿಗೆ ಸಂಪೂರ್ಣ ಉಚಿತ.ನೋಂದಣಿ ಮಾಡಿಸಿ ಪ್ರಿಂಟ್ ಔಟ್ ನೀಡುವುದಕ್ಕೂ ಸರ್ಕಾರವೇ ಹಣ ನೀಡಲಿದೆ. ಇದಕ್ಕಾಗಿ 12 ರೂ.ಗಳನ್ನು ಕರ್ನಾಟಕ ಸರ್ಕಾರ ನಿಗದಿಪಡಿಸಿದೆ. ನೋಂದಣಿಗೆ ಹಣ ಕೇಳಿದರೆ ಕ್ರಮವನ್ನೂ ಕೈಗೊಳ್ಳಲಾಗುತ್ತದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸುತ್ತೀದ್ದೀರಾ? ಯಾವುದೇ ಹಣವನ್ನು ನೋಂದಣಿಗೆ ನೀಡಬೇಡಿ. ಸರ್ಕಾರವೇ ನೋಂದಣಿಗೂ ಹಣ ನೀಡುತ್ತಿದೆ. ಹಣ ಕೇಳಿದರೆ ದೂರು ನೀಡಿ..
ಇದು ಗೃಹಲಕ್ಷ್ಮಿ ಯೋಜನೆ ಜಾರಿ ಹೊಣೆ ಹೊತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನೀಡುತ್ತಿರುವ ಸೂಚನೆ.
ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು ಕೂಡ ಪಂಚಾಯಿತಿಗಳಿಗೆ ಅಥವಾ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಹಣ ನೀಡದಂತೆ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಹಲವು ಕಡೆ ಹಣ ನೀಡದಂತೆ ಫಲಕಗಳನ್ನೂ ಅಳವಡಿಸಲಾಗಿದೆ. ಆದರೂ ಅಲ್ಲಲ್ಲಿ ಹಣ ಕೇಳುತ್ತಿರುವ ದೂರುಗಳು ಬರುತ್ತಲೇ ಇವೆ.
ಬಹಳಷ್ಟು ಕಡೆ ಹೆಣ್ಣು ಮಕ್ಕಳು ನೋಂದಣಿಗೆಂದು ಬಂದಾಗ ಹೆಚ್ಚು ಕೆಲಸ ಹಿಡಿಯುತ್ತದೆ. ತಲೆ ನೋವಿಲ್ಲದೇ ಬೇಗನೇ ಕೆಲಸ ಮುಗಿಯಲಿ ಎಂದು ಹಣ ನೀಡಿರುವ ಸನ್ನಿವೇಶಗಳೂ ಇವೆ. ಕೆಲವೊಮ್ಮೆ ಸಿಬ್ಬಂದಿಯೇ ಹಣ ಪಡೆಯುತ್ತಿರುವ ಉದಾಹರಣೆಗಳೂ ಇವೆ. ಎರಡಕ್ಕೂ ಅವಕಾಶವಿಲ್ಲ. ನೋಂದಣಿಗೆ ಹೋದ ಫಲಾನುಭವಿಗಳಿ ಯಾವುದೇ ಕಾರಣಕ್ಕೂ ಹಣವನ್ನು ನೀಡಬಾರದು.
ಈಗಾಗಲೇ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನೋಂದಣಿ ಹೆಸರಿನಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಪಾಸ್‌ವರ್ಡ್ ರದ್ದುಪಡಿಸಿ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಲ್ಲೂ ದೂರು ಬಂದಿದ್ದರಿಂದ ಪರಿಶೀಲನೆ ಕೂಡ ನಡೆಸಲಾಗಿದೆ.
ನೋಂದಣಿಗೂ ಹಣ
ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರದಿಂದ ಮಾಸಿಕ 2 ಸಾವಿರ ರೂ. ಹಣವನ್ನು ನೋಂದಣಿ ಮಾಡಿಸಿಕೊಂಡವರ ಖಾತೆಗೆ ನೀಡಲಾಗುತ್ತದೆ. ಅಲ್ಲದೇ ನೋಂದಣಿ ಮಾಡಿಸುವವರಿಗೂ 12 ರೂ. ಕೊಡಲಾಗುತ್ತದೆ. ಅಂದರೆ ನೋಂದಣಿಗೆ ಮಾಡುವ ಪ್ರಕ್ರಿಯೆಗೆ 10 ರೂ. ಹಾಗೂ ನೋಂದಣಿ ನಂತರ ನೀಡುವ ಪ್ರಿಂಟ್ ಔಟ್‌ಗೆ 2 ರೂ. ಕೂಡ ನೀಡಲಾಗುತ್ತದೆ. ಗ್ರಾಮ ಒನ್, ಬಾಪೂಜಿ ಕೇಂದ್ರ , ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವವರಿಂದ ವಿವರ ಪಡೆದು ಅವರ ಖಾತೆಗೆ ಇ ಗವರ್ನೆನ್ಸ್ ಇಲಾಖೆ ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ. ಈ ಕಾರಣದಿಂದಲೇ ಹಣ ಪಡೆಯದಂತೆ ಸ್ಪಷ್ಟವಾಗಿ ತಿಳಿಸಲಾಗುತ್ತಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಎಲ್ಲಾ ಕೇಂದ್ರಗಳವರಿಗೆ ನೋಂದಣಿ ಹಣ ಪಡೆಯದಂತೆ ಸೂಚಿಸಲಾಗಿದೆ. ಪ್ರತಿ ನೋಂದಣಿಗೆ 12 ರೂ. ನೀಡುವ ಮಾಹಿತಿಯನ್ನೂ ಕೊಡಲಾಗಿದೆ. ಹಾಗೇನಾದರೂ ಹಣ ಪಡೆದರೆ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ಕಡೆ ದೂರು ಬಂದ ಕಡೆಯೂ ಪರಿಶೀಲಿಸಿ ಸೂಚಿಸಲಾಗಿದೆ ಎನ್ನುತ್ತಾರೆ ಮೈಸೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಬಸವರಾಜು.
ಮಾಹಿತಿ ಪಡೆಯುತ್ತಿರುವ ಜನ
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಒನ್ ಸೇವಾ ಕೇಂದ್ರಗಳಲ್ಲೂ ಹಲವರು ಬರುತ್ತಿದ್ದಾರೆ. ಅಲ್ಲದೇ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಆಗಮಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಸುಮಾರು 1.70 ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಅರ್ಹರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಪಡೆಯಲು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಕಡ್ಡಾಯವಾಗಿದೆ. ಅದರಲ್ಲೂ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಎನ್ನುವ ಮಾರ್ಗಸೂಚಿಯನ್ನು ನೀಡಲಾಗಿದೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಮಾಹಿತಿ ಅಪ್‌ಡೇಟ್ ಮಾಡಿಸಲು ಮಹಿಳೆಯರು ಶಾಖೆಗಳನ್ನು ಎಡತಾಕುತ್ತಿದ್ದಾರೆ. ಅಲ್ಲದೇ ಈಗಾಗಲೇ ಹಣ ಖಾತೆಗೆ ಜಮಾವಣೆಯಾಗಿದೆಯಾ ಎನ್ನುವ ಮಾಹಿತಿ ಕೇಳಲು ಸೇವಾ ಕೇಂದ್ರಗಳತ್ತ ಜನ ಬರುವುದು ಕಂಡು ಬರುತ್ತಿದೆ.
ನಿಮ್ಮ ಮಾಹಿತಿ ಸರಿ ಇಲ್ಲದೇ ಇದ್ದರೆ ಗೃಹಲಕ್ಷ್ಮಿ ನೆರವು ಸಿಗುವುದಿಲ್ಲ ಎನ್ನುವ ಮಾಹಿತಿಯೂ ಬಹಳಷ್ಟು ಮಹಿಳೆಯರನ್ನು ಗೊಂದಲದಲ್ಲಿ ದೂಡಿ ಬ್ಯಾಂಕ್‌ಗಳು, ಸೇವಾ ಕೇಂದ್ರಗಳಿಗೆ ದೌಡಾಯಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಹಣ ಕೇಳಿರುವ ಉದಾಹರಣೆಗಳೂ ಇವೆ.
ನೋಂದಣಿ ವಿಚಾರವಾಗಿ ಈಗಾಗಲೇ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಗೊಂದಲ ಬಗೆಹರಿಸಲಾಗಿದೆ. ಜನರೂ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಸಣ್ಣಪುಟ್ಟ ಕಾರಣಗಳಿಗೆ ನೋಂದಣಿ ವಿಳಂಬವಾಗಬಹುದು. ಆದರೆ ಎಲ್ಲರ ನೋಂದಣಿ ಮಾಡಲಾಗುತ್ತದೆ. ಮೊಬೈಲ್ ಆಪ್ ಜತೆಗೆ ಒನ್ ಕೇಂದ್ರಗಳಲ್ಲೂ ನೋಂದಣಿ ನಡೆದಿದೆ ಎಂಬುದು ಹಾಸನ ಜಿಲ್ಲಾಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ವಿವರಣೆ.
ನೋಂದಣಿಗೆ ಅಡ್ಡಿ
ಪ್ರತಿ ಫಲಾನುಭವಿ ನೊಂದಣಿಗೆ ನಿಗದಿಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು1902 ಕರೆ ಮಾಡಿ ತಿಳಿಸಿಕೊಳ್ಳಬಹುದು. ಇಲ್ಲದೇ ಇದ್ದರೆ 8147500500 ಗೆ ಎಸ್‌ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ ವಿವರ ಪಡೆದುಕೊಳ್ಳಬಹುದು ಎನ್ನುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ನೆಟ್‌ವರ್ಕ್ ಸಮಸ್ಯೆಯಿಂದ ಹಲವು ಕಡೆ ತೊಂದರೆಯಾಗುತ್ತಿರುವ ದೂರುಗಳೂ ಇವೆ. ಜನ ಕೇಂದ್ರಗಳತ್ತ ಆಗಮಿಸಿ ಹೆಸರು ನೊಂದಾಯಿಸಿಕೊಳ್ಳಲು ಹರಸಾಹಸ ಪಡುತ್ತಲೇ ಇದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನೀಡಿರುವ ದೂರವಾಣಿಗೆ ಕರೆ ಮಾಡಿದರೂ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಎಸ್‌ಎಂಎಸ್ ಮಾತ್ರ ಮಾಡಿದ್ದೇವೆ. ಮುಂದೆ ಬಂದರೆ ನೋಂದಣಿ ಮಾಡಿಸುತ್ತೇವೆ ಎನ್ನುವುದು ಗಣೇಶಮೂರ್ತಿ ಅಭಿಪ್ರಾಯ.