ಗೃಹಜ್ಯೋತಿ ಯೋಜನೆಯಡಿ ಮಂಜೂರಾದ ಲೋಡ್‌ಗಿಂತ ಅಧಿಕ ವಿದ್ಯುತ್ ಬಳಕೆ ಮಾಡುತ್ತೀದ್ದೀರಾ, ಈ ಸೂಚನೆ ಗಮನಿಸಿ
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಅನ್ನು ನಿಗದಿತ ಪ್ರಮಾಣದ ಒಳಗೆ ಬಳಕೆ ಉಚಿತ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಶುಲ್ಕ ಹೇಗಿರಲಿದೆ, ಲೋಡ್‌ಗಿಂತ ಅಧಿಕ ವಿದ್ಯುತ್ ಬಳಕೆ ಮಾಡಿದಲ್ಲಿ ದಂಡ ವಿಧಿಸುವ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಎರಡು ವರ್ಷದ ಹಿಂದೆ ಜಾರಿಗೆ ತಂದಿರುವ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಬಳಸಿಕೊಳ್ಳುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯಿಂದ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದರಲ್ಲೂ ಯೋಜನೆಗಳನ್ನು ಬಳಸಿಕೊಂಡರು ಯೂನಿಟ್ ಬಳಕೆ ವಿಚಾರದಲ್ಲಿ ಗೊಂದಲ ಇದ್ದವರು, ಅಲ್ಲದೇ ಮಂಜೂರಾದ ಲೋಡ್‌ಗಿಂತಲೂ ಅಧಿಕ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೂ ಸೂಚನೆಗಳನ್ನು ಇಂಧನ ಇಲಾಖೆ ನೀಡಿದೆ. ಆಯಾ ಎಸ್ಕಾಂಗಳ ಉಪವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗಳ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇಂಧನ ಇಲಾಖೆ ಆಯಾ ಎಸ್ಕಾಂಗಳ ಮೂಲಕ ನೀಡಿರುವ ಸೂಚನೆಗಳನ್ನು ಗ್ರಾಹಕರು ಗಮನಿಸಿ ಕಟ್ಟು ನಿಟ್ಟಾಗಿ ಪಾಲಿಸಬೇಕು. ಮಿತಿಯನ್ನು ಮೀರಿ ವಿದ್ಯುತ್ ಬಳಸುವವರಿಗೆ ದಂಡ ಪ್ರಯೋಗ ಮಾಡುವ ವಿವರವನ್ನೂ ಒದಗಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗೃಹಬಳಕೆ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ(ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆ ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರ ಆದೇಶಿಸಿದೆ.
ಈ ಯೋಜನೆಯಡಿ ಗ್ರಾಹಕರು https://sevasindhugs.Karnataka.gov.in/ ನಲ್ಲಿ ನೋಂದಾಯಿಸಿಕೊಳ್ಳಬೇಕು. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕು. ಗ್ರಾಹಕರು ಮಂಜೂರಾದ ಲೋಡ್‌ಗಿಂತ ಅಧಿಕ ವಿದ್ಯುತ್ ಬಳಕೆ ಮಾಡಿದಲ್ಲಿ ಎಸ್ಕಾಂಗಳಿಂದ ನಿಯಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಗ್ರಾಹಕರು ಹೆಚ್ಚಿನ ಲೋಡ್ ಅನ್ನು ಸಕ್ರಮಗೊಳಿಸಲು ಸಂಬಂಧಪಟ್ಟ ಎಸ್ಕಾಂ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು 2023ರ ಆಗಸ್ಟ್ 1 ರಿಂದ ಜಾರಿಮಾಡಿದ್ದು ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯನ್ನು ವಿಧಿಸಲಾಗಿದೆ.ನಾಗರಿಕರಿಗೆ ದಿನಬಳಕೆಯ ವಿದ್ಯುತ್ ಮೇಲಿನ ಖರ್ಚುವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಯಡಿ ಇದನ್ನು ಜಾರಿಗೊಳಿಸಲಾಗಿದೆ.
2022-23ರ ಸಾಲಿನಲ್ಲಿ ಗ್ರಾಹಕರು ಬಳಕೆಯ ಆಧಾರದನ್ವಯ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿ ನೀಡಲಾಗಿದೆ.
ಬಳಕೆ ತಿಂಗಳಿಗೆ 200 ಯೂನಿಟ್‌ಗಳಿಗಿಂತ ಕಡಿಮೆ ಇದ್ದಾಗ ನಾಗರಿಕರು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಾರೆ. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.ಆದರೆ ಗ್ರಾಹಕರು ಹೊಸ ಮನೆ ಕಟ್ಟಿದಾಗ ಅಥವಾ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡಾಗ, ಸರಾಸರಿ ವಿದ್ಯುತ್ ಬಳಕೆಯ ಯೂನಿಟ್‌ಗಳನ್ನು ಲೆಕ್ಕಹಾಕಲು ಹಿಂದಿನ ವರ್ಷದ ವಿದ್ಯುತ್ ಬಳಕೆಯ ದಾಖಲೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ, ಸರ್ಕಾರವು ಪ್ರತಿ ತಿಂಗಳು ಸರಾಸರಿ 53 ಯೂನಿಟ್‌ಗಳ ಉಚಿತ ವಿದ್ಯುತ್ ಅನ್ನು ಶೇ.10 ಹೆಚ್ಚಳದೊಂದಿಗೆ ತೆಗೆದುಕೊಳ್ಳುತ್ತದೆ.ಈ ಬದಲಾವಣೆ ವಿಚಾರದಲ್ಲಿ ಸರ್ಕಾರದಿಂದ ಆದೇಶ ಜಾರಿಯಾಗಿರಲಿಲ್ಲ. ಈಗ 200 ಯೂನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಂಥವರು ಸಮೀಪದ ವಿದ್ಯುತ್ ಕಚೇರಿಗೆ ತೆರಳಿ ಮಾಹಿತಿ ಸಲ್ಲಿಸಬಹುದು. ಇಲ್ಲವೇ ಸೇವಾ ಸಿಂಧು ಅಡಿಯೂ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಯೋಜನೆಯ ಪೂರ್ಣ ಲಾಭದಿಂದ ವಂಚಿತರಾಗಿದ್ದರು. 2024ರ ಜುಲೈಗೆ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದು ಒಂದು ವರ್ಷವಾಗಿತ್ತು. ಒಂದು ವರ್ಷ ಪೂರ್ಣಗೊಂಡ ಬಳಿಕ ಸರಾಸರಿ ವಿದ್ಯುತ್ ಯೂನಿಟ್ ಬಳಕೆಯನ್ನು ಪರಿಷ್ಕರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದರು. ಆದರೆ, ಈವರೆಗೂ ಪರಿಷ್ಕರಣೆ ಆಗಿರಲಿಲ್ಲ. ಅದನ್ನು ಈಗ ಜಾರಿಗೊಳಿಸಲಾಗಿದೆ. ಅಲ್ಲದೇ ಗ್ರಾಹಕರು ಮಂಜೂರಾದ ಲೋಡ್‌ಗಿಂತ ಅಧಿಕ ವಿದ್ಯುತ್ ಬಳಕೆ ಮಾಡಿದಲ್ಲಿ ಎಸ್ಕಾಂಗಳಿಂದ ನಿಯಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಗ್ರಾಹಕರು ಹೆಚ್ಚಿನ ಲೋಡ್ ಅನ್ನು ಸಕ್ರಮಗೊಳಿಸಲು ಸಂಬಂಧಪಟ್ಟ ಎಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ವಿಭಾಗ