Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಮೊದಲ ದಿನವೇ 60 ಸಾವಿರ ಮಹಿಳೆಯರ ನೋಂದಣಿ, ವಿಳಾಸದ ಗೊಂದಲದ ನಡುವೆ ಬ್ಯಾಂಕ್‌ಗಳಲ್ಲಿ ಜನಜಂಗುಳಿ
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು ಎಂದು ಮಹಿಳೆಯರು ಭಾವಿಸಿದ್ದರು. ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ 81475 00500 ಸಂಖ್ಯೆಗೆ ಮೆಸೇಜ್ ಮಾಡಬೇಕು ಎಂಬ ಮಾಹಿತಿ ಅರಿತು, ಅದರಂತೆ ಮೆಸೇಜ್ ಕಳಿಸಿದರೂ ರಿಪ್ಲೈ ಸಕಾಲಕ್ಕೆ ಬರುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ಮುಖ್ಯವಾದದ್ದು ಗೃಹಲಕ್ಷ್ಮಿ ಯೋಜನೆ. ರಾಜ್ಯದ ಮಹಿಳೆಯರು ಕಾತರದಿಂದ ನಿರೀಕ್ಷಿಸುತ್ತಿದ್ದ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಜುಲೈ 19ರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆಗೆ ನೋಂದಣಿ ಆರಂಭವಾದ ಒಂದೇ ದಿನದಲ್ಲಿ ಅಂದರೆ ಜುಲೈ 20ರ ರಾತ್ರಿ 8 ಗಂಟೆಯ ಹೊತ್ತಿಗೆ 60 ಸಾವಿರ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರಕಿದ್ದು, ಇನ್ನೂ ಲಕ್ಷಾಂತರ ಮಹಿಳೆಯರು ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ 16ರಂದು 2000 ರೂಪಾಯಿ ಹಣವನ್ನು ಸರ್ಕಾರ ಜಮಾ ಮಾಡಲಿದೆ.
ಬಹುತೇಕ ಬ್ಯಾಂಕುಗಳಲ್ಲಿ ಗುರುವಾರ (ಜುಲೈ 20) ಹೆಚ್ಚು ಜನಜಂಗುಳಿ ಇದ್ದದ್ದು ಕಂಡುಬಂತು. ಮಾಸಲು ಪಾಸ್‌ಪುಸ್ತಕಗಳೊಂದಿಗೆ ಆಧಾರ್ ಕಾರ್ಡ್ ಹಿಡಿದಿದ್ದ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿಸಲು ಬ್ಯಾಂಕ್ ಸಿಬ್ಬಂದಿಗೆ ಮನವಿ ಮಾಡುತ್ತಿದ್ದರು. ಆಧಾರ್ ಸೇವಾ ಕೇಂದ್ರಗಳು ಮತ್ತು ಇಂಟರ್‌ನೆಟ್ ಸೆಂಟರ್‌ಗಳಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ, ಎಸ್‌ಎಂಎಸ್ ಬರುವ ಮೊಬೈಲ್ ಸಂಖ್ಯೆ ಸರಿಯಿದೆಯೇ, ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿದೆಯೇ ಎಂದೆಲ್ಲಾ ಮಹಿಳೆಯರು ಸೇವಾ ಕೇಂದ್ರಗಳ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದುದು ಸಾಮಾನ್ಯ ಸಂಗತಿ ಎನಿಸಿತ್ತು.
ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಶುಲ್ಕ ವಿಧಿಸಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಘೋಷಿಸಿದೆ. ಅದರೆ ಇಂಟರ್ನೆಟ್ ಸೇವಾ ಕೇಂದ್ರಗಳಲ್ಲಿ ನೋಂದಣಿಗಾಗಿ ದಾಖಲೆ ಪರಿಶೀಲಿಸಲು ಕನಿಷ್ಠ 50 ರೂಪಾಯಿಯಿಂದ ಗರಿಷ್ಠ 500 ರೂಪಾಯಿಯವರೆಗೂ ಶುಲ್ಕ ವಿಧಿಸಲಾಗುತ್ತಿದೆ. 'ಅವರದ್ದೂ ಬದುಕು ನಡೀಬೇಕಲ್ಲ. ನಮಗೆ ಏನೂ ಗೊತ್ತಾಗಲ್ಲ. ಆವಣ್ಣನ್ನ ಕೇಳಿದ್ರೆ ನೋಡಿ ಹೇಳ್ತೈತೆ. ಅವ್ರಿಗೆ 100 ರೂಪಾಯಿ ಕೊಟ್ರೆ ಏನು ತಪ್ಪು, ಸಿದ್ರಾಮಣ್ಣ ನಮಗೆ 2000 ರೂಪಾಯಿ ಕೊಡ್ತಾನಲ್ಲಾ' ಎಂದು ದೊಡ್ಡಬಳ್ಳಾಪುರದ ಇಂಟರ್ನೆಟ್ ಸೇವಾ ಕೇಂದ್ರದ ಬಳಿ ಗೌರಮ್ಮ ಎಂಬ ಮಹಿಳೆ 'ಎಚ್‌ಟಿ ಕನ್ನಡ' ಪ್ರತಿನಿಧಿಗೆ ಪ್ರತಿಕ್ರಿಯಿಸಿದರು.
ನೋಂದಣಿಗೆ ಭರ್ಜರಿ ಪ್ರತಿಕ್ರಿಯೆ
ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೊದಲ ದಿನ ನೋಂದಣಿ ಮಾಡಿಕೊಂಡ ಮಹಿಳೆಯರ ಸಂಖ್ಯೆ 60,000 ದಾಟಿದೆ. ಈ ಮಾಹಿತಿಯನ್ನು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜಾಲತಾಣವು ವರದಿ ಮಾಡಿದೆ. ಗೃಹಲಕ್ಷ್ಮಿಯ ಮೊಬೈಲ್ ಆ್ಯಪ್ ಮೂಲಕ 15,276 ಮಹಿಳೆಯರು ಮತ್ತು ಸರ್ಕಾರಿ ಕೇಂದ್ರಗಳ ಮೂಲಕ ವೆಬ್ ಅಪ್ಲಿಕೇಶನ್‌ನಲ್ಲಿ 44,946 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ.
ನೋಂದಣಿಗೆ ರೆಸ್ಪಾನ್ಸ್ ಸಮಸ್ಯೆ
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವವರು 81475 00500 ಸಂಖ್ಯೆಗೆ ತಮ್ಮ ಮೊಬೈಲ್‌ನಿಂದ ಎಸ್‌ಎಂಎಸ್ ಕಳಿಸಬೇಕು ಎಂಬ ಹೊಸ ನಿಯಮ ಜಾರಿ ಮಾಡಲಾಗಿದೆ. ಈ ಬಗ್ಗೆ ಇಲಾಖೆ ಮೊದಲು ಸಮರ್ಪಕ ಮಾಹಿತಿ ಒದಗಿಸಿರಲಿಲ್ಲ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು ಎಂದು ಮಹಿಳೆಯರು ಭಾವಿಸಿದ್ದರು. ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ 81475 00500 ಸಂಖ್ಯೆಗೆ ಮೆಸೇಜ್ ಮಾಡಬೇಕು ಎಂಬ ಮಾಹಿತಿ ಅರಿತು, ಅದರಂತೆ ಮೆಸೇಜ್ ಕಳಿಸಿದರೂ ರಿಪ್ಲೈ ಸಕಾಲಕ್ಕೆ ಬರುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಬಂದಿರುವ ರಿಪ್ಲೈ ಮೆಸೇಜ್‌ನಲ್ಲಿ ಇಂತಲ್ಲಿಗೆ ಹೋಗಿ ಅರ್ಜಿ ಸಲ್ಲಿಸಿ ಎಂಬ ಸೂಚನೆ ಇದೆ. ಆ ವಿಳಾಸ ಹುಡುಕುವುದು ಕಷ್ಟವಾಗುತ್ತಿದೆ ಎಂಬುದು ಮಹಿಳೆಯರ ಆಕ್ಷೇಪ.
'ನಾನು ಈ ಯೋಜನೆಗೆ ಫಲಾನುಭವಿಗಳನ್ನು ನೋಂದಾಯಿಸಲು ಮುಂದಾಗಿದ್ದೇನೆ. ಆದರೆ ಅವರಿಗೆ ಬರುವ ಮೆಸೇಜ್‌ನಲ್ಲಿ ನಮ್ಮನ್ನು ಸಂಪರ್ಕಿಸಬೇಕೆಂಬ ಸೂಚನೆಯಿದ್ದರೆ ಮಾತ್ರ ನಾನು ಅವರ ನೋಂದಣಿಗೆ ಸಹಕರಿಸಲು ಸಾಧ್ಯ' ಎಂದು ದೊಡ್ಡಬಳ್ಳಾಪುರದಲ್ಲಿ ಇಂಟರ್ನೆಟ್ ಸೆಂಟರ್ ನಡೆಸುವ ಹನುಮಂತ ಹೇಳಿದರು.