ಕನ್ನಡ ಸುದ್ದಿ  /  Karnataka  /  Gubbi Viranna's Granddaughter, B. Jayashree's Daughter Sushma Veer Joins Aam Aadmi Party

Sushma Veer joins AAP: ಆಮ್‌ ಆದ್ಮಿ ಪಾರ್ಟಿಗೆ ಗುಬ್ಬಿ ವೀರಣ್ಣ ಮರಿಮೊಮ್ಮಗಳು, ಬಿ.ಜಯಶ್ರೀ ಮಗಳು ಸುಷ್ಮಾ ವೀರ್‌ ಸೇರ್ಪಡೆ

ಖ್ಯಾತ ರಂಗಭೂಮಿ ಕಲಾವಿದರಾದ ಗುಬ್ಬಿ ವೀರಣ್ಣರವರ ಮರಿಮೊಮ್ಮಗಳು ಹಾಗೂ ಖ್ಯಾತ ಗಾಯಕಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರ ಮಗಳಾದ ಸುಷ್ಮಾ ವೀರ್‌ರವರು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಸುಷ್ಮಾ ವೀರ್‌ ಎಎಪಿ ಸೇರ್ಪಡೆ
ಸುಷ್ಮಾ ವೀರ್‌ ಎಎಪಿ ಸೇರ್ಪಡೆ

ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದರಾದ ಗುಬ್ಬಿ ವೀರಣ್ಣರವರ ಮರಿಮೊಮ್ಮಗಳು ಹಾಗೂ ಖ್ಯಾತ ಗಾಯಕಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರ ಮಗಳಾದ ಸುಷ್ಮಾ ವೀರ್‌ರವರು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುಷ್ಮಾರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪೃಥ್ವಿ ರೆಡ್ಡಿ, “ಕಲಾವಿದರು ಹಾಗೂ ಸಾಧಕರ ಕುಟುಂಬದಲ್ಲಿ ಜನಿಸಿದ ಸುಷ್ಮಾ ವೀರ್‌ರವರು ಕೂಡ ಬಹುಮುಖ ಪ್ರತಿಭೆ ಹೊಂದಿದ್ದಾರೆ. ಅಭಿನಯ, ನೃತ್ಯ, ಗಾಯನ, ಚಿತ್ರಕಲೆ, ನಿರ್ದೇಶನ, ವಿನ್ಯಾಸ ಮುಂತಾದ ಹಲವು ವಿಷಯಗಳಲ್ಲಿ ಇವರು ಸಾಧನೆ ಮಾಡಿದ್ದಾರೆ. ಉತ್ತಮ ಕಿರುಚಿತ್ರ ಹಾಗೂ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ರಂಗಭೂಮಿಯಲ್ಲಿ ಪ್ರಯೋಗಾತ್ಮಕ ಹಾಗೂ ಸೃಜನಶೀಲ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇಂತಹ ಸಾಧಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸ ತಂದಿದೆ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಜನಸಂಪರ್ಕ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಸುಷ್ಮಾ ವೀರ್‌ರವರು 2004ರಲ್ಲಿ ಆಕಾಂಕ್ಷ ಎಂಬ ಎನ್‌ಜಿಒ ಸ್ಥಾಪಿಸಿದ್ದು, ಈ ಮೂಲಕ ಕಲೆ, ಸಂಸ್ಕೃತಿ, ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದಾರೆ. ದೇಶದ ವಿವಿಧೆಡೆ ಇವರ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಯುವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ರೂಪಿಸಿಕೊಟ್ಟು ಮಾದರಿಯಾಗಿದ್ದಾರೆ. ಜೊತೆಗೆ, ಅಂಧ ಹಾಗೂ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ನೆರವಾಗಿದ್ದಾರೆ. ಹಲವು ಭಾಷೆಗಳ ಸುಮಾರು 42ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಷ್ಮಾ ವೀರ್‌ರವರು ತೆಲುಗು ಚಿತ್ರರಂಗದಲ್ಲಿ ʻಅತ್ಯುತ್ತಮ ಉದಯೋನ್ಮುಖ ನಟಿʼ ಪ್ರಶಸ್ತಿ, ತಮಿಳು ಚಿತ್ರರಂಗದಲ್ಲಿ ʻಅತ್ಯುತ್ತಮ ನಟಿʼ ಪ್ರಶಸ್ತಿಗಳನ್ನು ಗಳಿಸಿದ್ದಾರೆ” ಎಂದರು.

ಆಮ್‌ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಕಲಾವಿದೆ ಸುಷ್ಮಾ ವೀರ್‌, “ದೇಶದ ರಾಜಕೀಯ ಇತಿಹಾಸದಲ್ಲಿ ಆಮ್‌ ಆದ್ಮಿ ಪಾರ್ಟಿಯು ಹೊಸ ಸಂಚಲನ ಸೃಷ್ಟಿಸಿದೆ. ಇದರಿಂದಾಗಿ ಎಲ್ಲ ಪಕ್ಷಗಳೂ ಇಂದು ಸರ್ಕಾರಿ ಶಿಕ್ಷಣ ಹಾಗೂ ಪ್ರಾಥಮಿಕ ಆರೋಗ್ಯದ ಬಗ್ಗೆ ಯೋಚಿಸಲು ಆರಂಭಿಸಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಬೇರೆ ಪಕ್ಷಗಳು ಈ ಕ್ಷೇತ್ರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಬೇಸರ ಸಂಗತಿ. ಜನರ ತೆರಿಗೆ ಹಣವು ಲೂಟಿಯಾಗುವುದಕ್ಕೆ ಅವಕಾಶ ನೀಡದೇ, ಅದನ್ನು ಜನರ ಕಲ್ಯಾಣಕ್ಕೆ ಬಳಸುವ ಆಮ್‌ ಆದ್ಮಿ ಪಾರ್ಟಿಯ ಸಿದ್ಧಾಂತವು ನ್ಯಾಯಯುತವಾಗಿದ್ದು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಲಿದೆ” ಎಂದು ಹೇಳಿದರು. ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಹಾಗೂ ಬೆಂಗಳೂರು ವಕ್ತಾರೆ ಉಷಾ ಮೋಹನ್ ಭಾಗವಹಿಸಿದ್ದರು.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಆಮ್‌ ಆದ್ಮಿ ಪಾರ್ಟಿಯ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ್ದ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಕರ್ನಾಟಕದ ಜನರು ಬಹಳ ಒಳ್ಳೆಯವರು ಹಾಗೂ ದೇಶಭಕ್ತಿ ಉಳ್ಳವರು. ಆದರೆ ಇಲ್ಲಿನ ಜನಪ್ರತಿನಿಧಿಗಳು ಕೆಟ್ಟವರಾಗಿದ್ದಾರೆ. ಕರ್ನಾಟಕದ ಸರ್ಕಾರವು 40% ಸರ್ಕಾರವೆಂಬ ಮಾತು ಪ್ರಚಲಿತದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ 40% ಕಮಿಷನ್‌ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದೆ. ಆದರೆ ಬಿಜೆಪಿಯ ಅಮಿತ್‌ ಶಾರವರು ಇಲ್ಲಿಗೆ ಬಂದು ಭ್ರಷ್ಟರಹಿತ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ಇದೇ ಜಿಲ್ಲೆಯ ಹಾಗೂ ಅಮಿತ್‌ ಶಾರವರ ಪಕ್ಷದ ಶಾಸಕ ಹಾಗೂ ಅವರ ಮಗನ ಬಳಿ ಲೋಕಾಯುಕ್ತ ಅಧಿಕಾರಿಗಳಿಗೆ 8 ಕೋಟಿ ರೂಪಾಯಿ ನಗದು ದೊರೆತಿದೆ. ಶಾಸಕರನ್ನು ಈವರೆಗೂ ಬಂಧಿಸದ ಸರ್ಕಾರಕ್ಕೆ ಪದ್ಮಭೂಷಣ ನೀಡಬೇಕು ಎಂದು ವ್ಯಂಗ್ಯವಾಡಿದ್ದರು.

IPL_Entry_Point

ವಿಭಾಗ