CM Bommai on Gujarat Election Result: ಗುಜರಾತ್ ಚುನಾವಣಾ ಫಲಿತಾಂಶ: ಬಿಜೆಪಿ ಮುನ್ನಡೆಯ ಸೀಕ್ರೆಟ್ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಈ ಬಾರಿಯೂ ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ ಎಂಬುದಕ್ಕೆ ಇದು ನಿದರ್ಶನ ಎಂದಿದ್ದಾರೆ.
ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಗುಜರಾತ್ ನಲ್ಲಿ ಬಿಜೆಪಿ ಭಾರಿ ಮುನ್ನಡೆಯೊಂದಿಗೆ ಹೊಸ ದಾಖಲೆಯತ್ತ ದಾಪುಗಾಲು ಇಟ್ಟಿದೆ. ಮತ್ತೊಂದೆಡೆ ಹಿಮಾಚಲ ಪ್ರದೇಶದಲ್ಲಿ ನೆಕ್ ಟು ನೆಕ್ ಫೈನಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತದತ್ತ ದಾಪುಗಾಲು ಇಟ್ಟಿದೆ.
ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಆ ಪಕ್ಷದ ಸಿಕ್ರೇಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ, ಗುಜರಾತ್ ಚುನಾವಣಾ ಫಲಿತಾಂಶ ಸುಶಾಸನದ ಫಲ ಎಂದು ಹೇಳಿದ್ದಾರೆ.
ಭಾಜಪ ಮುನ್ನಡೆಯಲ್ಲಿದ್ದು, ಈ ಬಾರಿಯೂ ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ. ಇದುವರೆಗೂ ದೇಶದಲ್ಲಿ ಆಡಳಿತ ವಿರೋಧ ಟ್ರೆಂಡ್ ಇತ್ತು. ಗುಜರಾತ್ ಆಡಳಿತದ ಪರವಾಗಿದೆ ಎಂದು ನಿರೂಪಿಸಿದೆ. 7 ನೇ ಬಾರಿ ಗೆಲ್ಲುತ್ತಿರುವುದು ಸುಲಭದ ಮಾತಲ್ಲ. ಆಡಳಿತದ ಪರವಾಗಿ ಜನ ನಿಲ್ಲಲು ಸರ್ಕಾರಗಳು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ಗುಜರಾತ್ ಸರ್ಕಾರ ಮಾಡಿದೆ ಎಂದಿದ್ದಾರೆ.
ಮೋದಿಯವರ ನಾಯಕತ್ವದ ಫಲ
ಎಲ್ಲಕ್ಕೂ ಮಿಗಿಲಾಗಿ ಇದಕ್ಕೆ ಅಡಿಪಾಯ ಹಾಕಿ ಬೆಳಸಿ, ಮಾರ್ಗದರ್ಶನ ಮಾಡುತ್ತಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ. ಅವರ ಸಕಾರಾತ್ಮಕ ನಾಯಕತ್ವ ಸುಮಾರು ಒಂದು ತಲೆಮಾರು ದಾಟಿದರೂ ಹಳೆ ಮತ್ತು ಹೊಸ ಪೀಳಿಗೆ ಅವರ ಆಡಳಿತ, ದಕ್ಷತೆಯನ್ನು ಒಪ್ಪಿದ್ದಾರೆ. ದೇಶ ಮುನ್ನಡೆಸುವ ಶಕ್ತಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಳೆದ ಬಾರಿ 3 ರಾಜ್ಯಗಳಲ್ಲಿ ಸಹ ಗೆದ್ದಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ಸಮಬಲದ ಹೋರಾಟವಿದೆ. ಅಂತಿಮವಾಗಿ ಬಿಜೆಪಿ ಗೆದ್ದು ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹೋಲಿಕೆ ಸಲ್ಲದು
ನವದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ 15 ವರ್ಷ ಆಡಳಿತ ಮಾಡುವುದೇ ದೊಡ್ಡ ಸಾಧನೆ. ಸ್ಥಳೀಯ ಸಮಸ್ಯೆಗಳು ಬಹಳ ಇರುತ್ತವೆ. ಮತದಾರರ ಸಣ್ಣ ಸಂಖ್ಯೆ, ಬಹುಆಯಾಮದ ಸ್ಪರ್ಧೆ ಇರುತ್ತದೆ. ಮುನಿಸಿಪಲ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಗೆ ಹೋಲಿಕೆ ಮಾಡಲಾಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕದಲ್ಲೂ ಜಯ ನಿಶ್ಚಿತ
ಬಿಜೆಪಿ ಗೆಲುವಿನ ಪರಿಣಾಮ ಸಕಾರಾತ್ಮಕವಾಗಿ ಕರ್ನಾಟಕದ ಚುನಾವಣೆಯ ಮೇಲೆ ಆಗಿಯೇ ಆಗುತ್ತದೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ದೊಡ್ಡ ನೈತಿಕ ಬಲ ಸಿಗಲಿದೆ. ಇನ್ನಷ್ಟು ಹುರುಪು, ಹುಮ್ಮಸ್ಸಿನಲ್ಲಿ ಕೆಲಸ ಮಾಡಿದರೆ ಜಯ ನಿಶ್ಚಿತ ಎಂದರು.
ಯಾವುದೂ ನಿಜವಾಗಿಲ್ಲ
ಚುನಾವಣಾ ಫಲಿತಾಂಶ ಪರಿಣಾಮ ಬೀರುವುದಿಲ್ಲ ಎಂದಿರುವ ವಿಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು ಅವರು ಹಾಗೆಯೇ ಹೇಳಬೇಕು. ಅವರು ಹೇಳಿದ್ದು ಯಾವುದೂ ನಿಜವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ವಿಭಾಗ