ಕನ್ನಡ ಸುದ್ದಿ  /  Karnataka  /  Gujarat Exit Poll Result Survey Also Affected In Karnataka Says Cm Bommai

CM Bommai on Gujarat Exit Poll survey: ಗುಜರಾತ್ ಚುನಾವಣೋತ್ತರ ಸಮೀಕ್ಷೆ ಕರ್ನಾಟಕದಲ್ಲೂ ಪರಿಣಾಮ ಬೀರುತ್ತೆ: ಸಿಎಂ ಬೊಮ್ಮಾಯಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದಲ್ಲಿ ಶಕ್ತಿಯನ್ನು ತುಂಬುವ ಕೆಲಸ ಆಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಭಾರತದ ಯಶಸ್ವಿಗೆ ಅಂಬೇಡ್ಕರ್ ಕಾರಣ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ
ಭಾರತದ ಯಶಸ್ವಿಗೆ ಅಂಬೇಡ್ಕರ್ ಕಾರಣ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ

ಬೆಂಗಳೂರು: ಗುಜರಾತ್ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು ಕರ್ನಾಟಕದಲ್ಲಿಯೂ ಕೂಡ ಇದು ಒಳ್ಳೆಯ ಪರಿಣಾಮ ಬೀರಲಿದೆ. ನೂರಕ್ಕೆ ನೂರು 2023 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಬಾ ಸಾಹೇಬ್ ಡಾ:ಬಿ.ಆರ್.ಅಂಬೇಡ್ಕರ್ ಅವರ 66 ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಪೂರ್ವದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಜನ ಇಂದು ಸುಶಾನ, ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುತ್ತಾರೆ. ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿದೆ ಎಂದು ಹೇಳಿದರು.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಜಯಭೇರಿ ಹೊಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಇದೊಂದು ಸಕಾರಾತ್ಮಕ, ಅಧಿಕಾರದ ಪರ ಮತದಾರರ ತೀರ್ಪು. ಗುಜರಾತ್ ನಲ್ಲಿ 7ನೇ ಬಾರಿಗೆ ಆಯ್ಕೆಯಾಗುತ್ತಿದ್ದು, ಇದು ನರೇಂದ್ರ ಮೋದಿಯವರ ನಾಯಕತ್ವ, ಆಡಳಿತದಲ್ಲಿ ಜನರ ಪ್ರಬಲವಾದ ನಂಬಿಕೆಯನ್ನು ತೋರಿದೆ ಎಂದಿದ್ದಾರೆ.

ಚುನಾವಣಾ ದೃಷ್ಟಿಕೋನವಿಲ್ಲ

ಮಹಾರಾಷ್ಟ್ರ ಸಚಿವರು ಬಾರದೆ ಇರುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದವರು ಬಹಳ ವರ್ಷಗಳಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ವಿವಾದದಿಂದ ಎರಡೂ ಕಡೆ ಪ್ರತಿಕ್ರಿಯೆ ಬರುತ್ತದೆ. ಜನರ ನಡುವಿನ ಇರುವ ಸಾಮರಸ್ಯ ಕದಡುವ ಕೆಲಸ ಬೇಡ ಎಂದು ಹೇಳಿದ್ದೇನೆ. ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ವಿದ್ದು, ನಮ್ಮ ನಡೆ ಸಂವಿಧಾನಬದ್ಧವಾಗಿರುವುದರಿಂದ ಕಾನೂನು ಸಮರವನ್ನು ಗೆಲ್ಲುವ ವಿಶ್ವಾಸವಿದೆ. ನಮಗೆ ಚುನಾವಣಾ ದೃಷ್ಟಿಕೋನವಿಲ್ಲ.ಅಥವಾ ವಿವಾದ ಹುಟ್ಟಿಸುವ ಇರಾದೆಯೂ ಇಲ್ಲ. ನಮ್ಮ ಗಡಿ ಹಾಗೂ ಜನರ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿರುವ ಕನ್ನಡಿಗರ ಹಿತಚಿಂತನೆಯನ್ನೂ ಮಾಡುತ್ತಿದ್ದೇವೆ ಎಂದರು.

ಇಂದಿನ ಸವಾಲುಗಳನ್ನು ಎದುರಿಸಲು ಸಂವಿಧಾನದಲ್ಲಿ ಪರಿಹಾರವಿದೆ

ಇಂದಿನ ಸವಾಲುಗಳನ್ನು ಎದುರಿಸಲು ಸರ್ಕಾರ ಸಂವಿಧಾನದ ಆಶ್ರಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಎಂದರು.

ಅಂಬೇಡ್ಕರ್ ಅವರು ಸಂವಿಧಾನದ ಜೀವಂತಿಕೆಗೆ ಬದಲಾದ ಕಾಲದ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಲು ಸಂವಿಧಾನದಲ್ಲಿ ತಿದ್ದುಪಡಿ ತರುವ ಆಯಾಮ ನೀಡಿರುವುದು ಎಂಥಾ ಬದಲಾದ ಕಾಲಕ್ಕೂ ಸ್ಪಂದಿಸುವಂಥದ್ದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿಗೆ ಪ್ರಜಾಪ್ರಭುತ್ವ ಹೇಗೆ ಯಶಸ್ವಿಯಾಗಬಹುದು ಎಂದು ತೋರಿಸಿದವರು. ಹಲವಾರು ಭಾಷೆ, ಜಾತಿ, ಪ್ರಾಂತ್ಯಗಳಿಂದ ಕೂಡಿದ ಭಾರತದಲ್ಲಿ ಒಂದು ಸಂವಿಧಾನದಿಂದ ಒಂದು ಮಾಡಿ ಎಲ್ಲರ ಭಾವನೆಗಳನ್ನು ಹೆಣೆದು ಅಖಂಡ ಭಾರತ ದೇಶವನ್ನು ರೂಪಿಸುವ ಜೊತೆಗೆ ದೀರ್ಘಕಾಲ ಪ್ರಜಾಪ್ರಭುತ್ವದ ಜೀವಂತಿಕೆಗೆ ನಾಂದಿ ಹಾಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಮೀಸಲಾತಿ ಹೆಚ್ಚಳ: ಕ್ರಾಂತಿಕಾರಿ ನಿರ್ಧಾರ

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದಲ್ಲಿ ಶಕ್ತಿಯನ್ನು ತುಂಬುವ ಕೆಲಸ ಆಗಲಿದೆ. 29 ಸಾವಿರ ಕೋಟಿ ರೂ.ಗಳನ್ನು ಎಸ್.ಸಿ.ಎಸ್. ಪಿ/ ಟಿ ಎಸ್.ಪಿ ಅನುದಾನದಲ್ಲಿ ಮೀಸಲಿರಿಸಲಾಗಿದೆ. ಶಿಕ್ಷಣ ಕ್ಕೆ ಒಟ್ಟು ಕೊಟ್ಟು ನೂರು ಅಂಬೇಡ್ಕರ್ ಹಾಸ್ಟೆಲ್ ಗಳನ್ನು, 55 ಕನಕದಾಸ ಹಾಸ್ಟೆಲ್ ಹಾಗೂ 5 ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮೈಸೂರು, ಧಾರವಾಡ, ಮಂಗಳೂರು, ಬೆಂಗಳೂರು, ಕಲಬುರಾಗಿಯಲ್ಲಿ ಮೆಗಾ ಹಾಸ್ಟೆಲ್ ನಿರ್ಮಾಣವಾಗುತ್ತಿದೆ.

ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, 75 ಯೂನಿಟ್ ವರೆಗೂ ಉಚಿತ ವಿದ್ಯುತ್ ಸರಬರಾಜು, ಗೃಹ ನಿರ್ಮಾಣ ಕ್ಕೆ 2 ಲಕ್ಷ ರೂಗಳ ಸಹಾಯಧನ, ಭೂಒಡೆತನ ಯೋಜನೀಡಿ 15 ಲಕ್ಷದಿಂದ 20 ಲಕ್ಷಕ್ಕೆ ಅನುದಾನ ಹೆಚ್ಚಿಸಲಾಗಿದೆ. ಹಾಸ್ಟೆಲ್ ಗಳಿಗೆ ಶುಲ್ಕ, ಉದ್ಯೋಗಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಿದೆ. ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ 10 ಸ್ಥಳಗಳನ್ನು ಅಭಿವೃದ್ಧಿ ಪಡಿಸಲು 10 ಕೋಟಿ ರೂ.ಗಳನ್ನು ಒದಗಿಸಿದ್ದು ಕಾರ್ಯಕ್ರಮ ಪ್ರಾರಂಭವಾಗಿದೆ. ವಿಕಾಸಸೌಧದ ಮುಂಭಾಗದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 50 ಕೋಟಿ ಬಿಡುಗಡೆಯಾಗಿದೆ ಎಂದಿದ್ದಾರೆ.

IPL_Entry_Point

ವಿಭಾಗ