ಕರ್ನಾಟಕದ ವಾಹನಗಳ ಅರ್ಧದಷ್ಟು ಬೆಂಗಳೂರಿನಲ್ಲಿವೆ; 1.23 ಕೋಟಿ ವಾಹನಗಳ ಪೈಕಿ ದ್ವಿಚಕ್ರ, 4 ಚಕ್ರಗಳ ವಾಹನಗಳ ಸಂಖ್ಯೆ ಎಷ್ಟಿರಬಹುದು
Vehicles In Bengaluru: ಕರ್ನಾಟಕದ ವಾಹನಗಳ ಸಂಖ್ಯೆಯ ಅರ್ಧದಷ್ಟು ವಾಹನಗಳು ಬೆಂಗಳೂರಿನ್ಲಲೇ ಇದೆ. ರಾಜ್ಯ ರಾಜಧಾನಿಯ ಸಂಚಾರ ದಟ್ಟಣೆ ಮತ್ತು ಜನದಟ್ಟಣೆಯನ್ನು ಇಷ್ಟರಲ್ಲೇ ಊಹಿಸಿಕೊಳ್ಳಬಹುದು. ಬೆಂಗಳೂರಲ್ಲಿರುವ ವಾಹನಗಳ ಸಂಖ್ಯೆ 1.23 ಕೋಟಿ. ಈ ಪೈಕಿ ದ್ವಿಚಕ್ರ, 4 ಚಕ್ರಗಳ ವಾಹನಗಳ ಸಂಖ್ಯೆ ಎಷ್ಟಿರಬಹುದು - ಊಹಿಸಿ ನೋಡೋಣ (ವರದಿ- ಎಚ್. ಮಾರುತಿ, ಬೆಂಗಳೂರು)

Vehicles In Bengaluru: ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ 1.4 ಕೋಟಿ ನಿವಾಸಿಗಳಿದ್ದಾರೆ. ಜತೆಗೆ ಲಕ್ಷಾಂತರ ಜನರು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಹೋಗುತ್ತಲೇ ಇರುತ್ತಾರೆ. ಹಾಗಾದರೆ ಐಟಿಬಿಬಿ ರಾಜಧಾನಿಯೂ ಆಗಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಎಷಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಒಟ್ಟು ಸಂಖ್ಯೆಯನ್ನು ಆಮೇಲೆ ನೋಡೋಣ.
ಬೆಂಗಳೂರಲ್ಲಿರುವ ವಾಹನಗಳ ಸಂಖ್ಯೆ ಎಷ್ಟು
2024-25 ರಲ್ಲಿ 4.68 ದ್ವಿಚಕ್ರ ಮತ್ತು 1.45 ಕಾರುಗಳ ಸಂಖ್ಯೆ ಸೇರಿ 7.22 ಲಕ್ಷ ವಾಹನಗಳ ನೋಂದಣಿಯಾಗಿದೆ. ರಾಜ್ಯದಲ್ಲಿರುವ ಒಟ್ಟು ಕಾರುಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಾರುಗಳು ಬೆಂಗಳೂರಿನಲ್ಲಿ ನೊಂದಣಿಯಾಗಿವೆ. ಬೆಂಗಳೂರಿನ ಕಿರಿದಾದ ರಸ್ತೆಗಳಿಗೆ ಇದು ಹೊರೆಯೇ ಸರಿ.
ಸದ್ಯ ಬೆಂಗಳೂರಿನಲ್ಲಿ 1.23 ಕೋಟಿ ವಾಹನಗಳಿವೆ. 2023-24ರಲ್ಲಿ 1.16 ಕೋಟಿಗಳಷ್ಟಿದ್ದು, ಈ ವರ್ಷಕ್ಕೆ ಶೇ.6.5ರಷ್ಟು ಹೆಚ್ಚಳವಾಗಿದೆ. 2022-23 ರಲ್ಲಿ 1.09, 2021-22 ರಲ್ಲಿ 1.04 ಕೋಟಿ, 2020-21 ರಲ್ಲಿ 1 ಕೋಟಿ ವಾಹನಗಳಿದ್ದವು ಎಂದು ಇಲಾಖೆ ತಿಳಿಸಿದೆ.
ವಾಹನಗಳ ಏರಿಕೆಯ ಸರಾಸರಿ ನೋಡುವುದಾದರೆ 2024-25 ರಲ್ಲಿ ತಿಂಗಳಿಗೆ 60,000 ಅಥವಾ ಪ್ರತಿದಿನ 2,000 ವಾಹನಗಳು ಸೇರ್ಪಡೆಯಾಗಿವೆ. ಹಬ್ಬಗಳ ತಿಂಗಳಾದ ಅಕ್ಟೋಬರ್ ನಲ್ಲಿ 76,509 ವಾಹನಗಳು ನೋಂದಣಿಯಾಗಿವೆ. ಡಿಸೆಂಬರ್ ನಲ್ಲಿ ಅತಿ ಕಡಿಮೆ ಎಂದರೆ 42,520 ವಾಹನಗಳು ನೋಂದಣಿಯಾಗಿವೆ.
ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸ್, ಮೆಟ್ರೋ ವ್ಯವಸ್ಥೆ ಇದ್ದರೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ವಾಹನ ದಟ್ಟಣೆಗೆ ಕಾರಣವಾಗುತ್ತಲೇ ಇದೆ. ವಾಹನಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆಯೇ ಹೊರತು ನಗರದ ರಸ್ತೆಗಳನ್ನು ಮಾತ್ರ ವಾಹನಗಳ ಏರಿಕೆಗೆ ತಕ್ಕಂತೆ ಸಜ್ಜುಗೊಳಿಸುತ್ತಿಲ್ಲ. ಬೆಂಗಳೂರಿನಲ್ಲಿ ಇರುವುದೇ 15,000 ಕಿಮೀ ರಸ್ತೆ ಮಾತ್ರ! ಈ ಕಾರಣಕ್ಕಾಗಿ ವಾಹನಗಳ ಸಾಂದ್ರತೆ 2023-24 ರಲ್ಲಿ ಪ್ರತಿ ಕಿಮೀಗೆ 761 ವಾಹನಗಳಿದ್ದರೆ 2024-25 ರಲ್ಲಿ ಪ್ರತಿ ಕಿಮೀಗೆ 823 ವಾಹನಗಳಿಗೆ ಏರಿಕೆಯಾಗಿದೆ.
ಬೆಂಗಳೂರು ಮಹಾನಗರದಲ್ಲಿ ಸಮ- ಬೆಸ ನಿಯಮ ಜಾರಿಗೆ ಬರುತ್ತಾ
ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಒಪ್ಪಿಕೊಳ್ಳುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವಿಷಯದಲ್ಲಿ ಸಚಿವ ಸಂಪುಟ ಮಾತ್ರ ತೀರ್ಮಾನ ಕೈಗೊಳ್ಳಬಹುದು. ವಾಹನ ದಟ್ಟಣೆ ಹೆಚ್ಚಿರುವುದು ನಿಜ. ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಶೀಲನೆ ನಡೆಸಲಾಗುವುದು. ರಸ್ತಗಳನ್ನು ಅಗಲಗೊಳಿಸುವುದು, ಪಾರ್ಕಿಂಗ್ ಶುಲ್ಕ ಜಾರಿ, ಸರಿ- ಬೆಸ ನಿಯಮ ಜಾರಿ ಕುರಿತು ಅವಲೋಕಿಸಲಾಗುವುದು ಎನ್ನುತ್ತಾರೆ.
2024-25ರಲ್ಲಿ ರಾಜ್ಯದಲ್ಲಿ 3.34 ಕೋಟಿ ವಾಹನಗಳಿದ್ದರೆ 2023-24 ರಲ್ಲಿ 3.16 ವಾಹನಗಳಿದ್ದವು. 2022-23 ರಲ್ಲಿ 2.98, 2021-22 ರಲ್ಲಿ 2.84, 2020-21 ರಲ್ಲಿ 2.72 ವಾಹನಗಳಿದ್ದವು ಎಂದು ಸಾರಿಗೆ ಇಲಾಖೆ ಮೂಲಗಳು ಖಚಿತಪಡಿಸಿವೆ.
ಬೆಂಗಳೂರಿನಲ್ಲಿರುವ ದ್ವಿಚಕ್ರ, 4 ಚಕ್ರಗಳ ವಾಹನಗಳ ಸಂಖ್ಯೆ ಎಷ್ಟು
ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಶೇ. 20ರಷ್ಟಿದ್ದರೆ ಇಡೀ ರಾಜ್ಯದಲ್ಲಿ ಶೇ. 15 ರಷ್ಟು ಕಾರುಗಳಿವೆ. ಬೆಂಗಳೂರಿನಲ್ಲಿ 25.37 ಕಾರುಗಳಿದ್ದರೆ ಕರ್ನಾಟಕದಾದ್ಯಂತ 49.16 ಕಾರುಗಳಿವೆ. ಸರಳವಾಗಿ ಹೇಳುವುದಾದರೆ ಬೆಂಗಳೂರಿನಲ್ಲಿ ನೋಂದಣಿಯಾಗುವ ಪ್ರತಿ 5 ನೇ ವಾಹನ ಕಾರು ಆಗಿರುತ್ತದೆ. 2024-25 ರಲ್ಲಿ ಶೇ. 5 ರಷ್ಟು ಮತ್ತು 2023-24 ರಲ್ಲಿ ಶೇ.7 ರಷ್ಟು ಕಾರುಗಳು ನೊಂದಣಿಯಾಗಿವೆ. ಸರ್ಕಾರ ಸುರಂಗ ರಸ್ತೆ ಮತ್ತು ಮೇಲ್ಸೇತುವೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಮೆಟ್ರೋ ಮತ್ತು ಉಪ ನಗರ ರೈಲು ಯೋಜನೆಗಳು ಆಮೆ ವೇಗದಲ್ಲಿ ಆಗುತ್ತಿರುವುದೂ ಖಾಸಗಿ ವಾಹನಗಳ ಏರಿಕೆಗೆ ಕಾರಣವಾಗಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)
