ಹಂಪಿ ಎಕ್ಸ್‌ಪ್ರೆಸ್ ಸಂಚಾರ ಮಾರ್ಗದಲ್ಲಿ ತುಸು ಬದಲಾವಣೆ, ಮೇ ಮತ್ತು ಜೂನ್ ತಿಂಗಳ ಮಾರ್ಗ ಬದಲಾವಣೆ ವಿವರ ಇಲ್ಲಿದೆ
ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಯಾರ್ಡ್ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಹಂಪಿ ಎಕ್ಸ್‌ಪ್ರೆಸ್ ರೈಲು (16591/ 16592) ಸಂಚಾರ ಮಾರ್ಗದಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ತುಸು ಬದಲಾವಣೆ ಇರಲಿದೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಹಂಪಿ ಎಕ್ಸ್‌ಪ್ರೆಸ್ ರೈಲು (16591/ 16592) ಸಂಚಾರ ಮಾರ್ಗದಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ತುಸು ಬದಲಾವಣೆ ಇರಲಿದೆ. ಭಾರತೀಯ ರೈಲ್ವೆಯು ಮೇ ತಿಂಗಳಲ್ಲಿ ಧರ್ಮಾವರಂ ರೈಲು ನಿಲ್ದಾಣದ ಯಾರ್ಡ್ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಹಾಗೂ ಜೂನ್ ತಿಂಗಳಲ್ಲಿ ಗುಂತಕಲ್ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ತಾತ್ಕಾಲಿಕ ಮಾರ್ಗ ಬದಲಾವಣೆ ಇರಲಿದೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ.
ಮೇ 11 ರಿಂದ 17 ರ ತನಕ ಹಂಪಿ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ
ಧರ್ಮಾವರಂ ರೈಲು ನಿಲ್ದಾಣದ ಯಾರ್ಡ್ ನವೀಕರಣ ಕಾಮಗಾರಿ ನಡೆಸುವ ಕಾರಣ, ಮೇ 11 ರಿಂದ 17 ರ ತನಕ ಹಂಪಿ ಎಕ್ಸ್‌ಪ್ರೆಸ್ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಇದರಂತೆ, ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 16591) ರೈಲು ಮೇ 11 ರಿಂದ ಮೇ 17 ರ ತನಕ ಬಳ್ಳಾರಿ ಜಂಕ್ಷನ್ , ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ ಹಾಗೂ ತುಮಕೂರು ಮಾರ್ಗವಾಗಿ ಸಂಚರಿಸುತ್ತದೆ. ಗುಂತಕಲ್ಲು ಮತ್ತು ಯಲಹಂಕ ನಡುವಿನ ಸಂಚಾರ ರದ್ದು ಪಡಿಸಲಾಗಿದೆ.
ಇನ್ನೊಂದೆಡೆ, ಮೈಸೂರು - ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16592) ರೈಲು ಮೇ 11 ರಿಂದ 17 ರ ತನಕ ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ರಾಯದುರ್ಗ ಹಾಗೂ ಬಳ್ಳಾರಿ ಜಂಕ್ಷನ್ ನಿಲ್ದಾಣಗಳ ನಡುವೆ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಯಲಹಂಕ ಮತ್ತು ಗುಂತಕಲ್ಲು ನಡುವೆ ಸಂಚಾರ ರದ್ದುಗೊಳ್ಳಲಿದೆ.
ಗುಂತಕಲ್ ಡಿವಿಷನ್‌ನಲ್ಲಿ ಯಾರ್ಡ್ ನವೀಕರಣ ಕಾರ್ಯ ಇರುವ ಕಾರಣ ಹಂಪಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16591/16592) ರೈಲು ಜೂನ್ 15 ರಿಂದ ಜೂನ್ 20 ತನಕ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಿ ಸಂಚರಿಸಲಿದೆ. ಈ ರೈಲು ಬಳ್ಳಾರಿ ಕಂಟೋನ್ಮೆಂಟ್, ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ, ಯಶವಂತಪುರ ದಾರಿಯಾಗಿ ಸಂಚರಿಸಲಿದೆ. ಬಳ್ಳಾರಿ ಜಂಕ್ಷನ್, ಗುಂತಕಲ್ ಜಂಕ್ಷನ್, ಧರ್ಮಾವರಂ ಜಂಕ್ಷನ್, ಪೆನುಕೊಂಡ ಜಂಕ್ಷನ್, ಹಿಂದುಪುರ, ಗೌರಿಬಿದರನೂರು, ದೊಡ್ಡಬಳ್ಳಾಪುರ, ಯಲಹಂಕ ಜಂಕ್ಷನ್ ಮೂಲಕ ಸಂಚರಿಸುವುದಿಲ್ಲ ಎಂದು ಭಾರತೀಯ ರೈಲ್ವೆ ಮೂಲಗಳು ವರದಿ ಹೇಳಿದೆ.