ಕನ್ನಡ ಸುದ್ದಿ  /  Karnataka  /  Hampi Utsav 2023 From Today In Karnataka, Complete Details

Hampi Utsav 2023: ಇಂದಿನಿಂದ ಮೂರು ದಿನ ಹಂಪಿ ಉತ್ಸವ, 9 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ, ಇಲ್ಲಿದೆ ಕಾರ್ಯಕ್ರಮಗಳ ಪಟ್ಟಿ

Hampi Utsav 2023: ಮೂರು ದಿನಗಳ ಕಾಲ ದೇಶ-ವಿದೇಶದ ಲಕ್ಷಾಂತರ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ. ವಿಜಯನಗರದ ವೈಭವವನ್ನು ಇಡೀ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಕ್ರಮಗಳನ್ನು ರೂಪಿಸಿದೆ.

Hampi Utsav 2023: ಇಂದಿನಿಂದ ಮೂರು ದಿನ ಹಂಪಿ ಉತ್ಸವ, 9 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ
Hampi Utsav 2023: ಇಂದಿನಿಂದ ಮೂರು ದಿನ ಹಂಪಿ ಉತ್ಸವ, 9 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ (Govt website)

ವಿಜಯನಗರ: ಇಂದು ಸಂಜೆ 5.30 ಗಂಟೆಗೆ ಹಂಪಿ ಉತ್ಸವ-2023 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಹಂಪಿಯಲ್ಲಿ ಹೊಸ ವೈಭವ ಕಾಣಲಿದೆ. ಅಲ್ಲಿನ ಸ್ಮಾರಕಗಳು ದೀಪಾಲಂಕರಗಳಿಂದ ಕಂಗೊಳಿಸುತ್ತಿದ್ದು, ಹೊಸ ಸಂಭ್ರಮ ಮನೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳನ್ನು ಸಿದ್ಧಗೊಳಿಸಲಾಗಿದೆ. ಬಾಲಿವುಡ್‌, ಸ್ಯಾಂಡಲ್‌ವುಡ್‌ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

ಹಂಪಿ ಉತ್ಸವದ ಕಾರ್ಯಕ್ರಮಗಳು ನಾಲ್ಕು ವೇದಿಕೆಗಳಲ್ಲಿ ನಡೆಯಲಿದೆ. ಮುಖ್ಯವೇದಿಕೆಯು ಗಾಯತ್ರಿಪೀಠದ ಬಳಿಯ ಮೈದಾನದಲ್ಲಿದೆ. ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆಯಿದೆ. ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ಮೂರನೇ ವೇದಿಕೆಯಿದೆ. ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ನಾಲ್ಕನೇ ವೇದಿಕೆಯಿದೆ.

ಮೂರು ದಿನಗಳ ಕಾಲ ದೇಶ-ವಿದೇಶದ ಲಕ್ಷಾಂತರ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ. ವಿಜಯನಗರದ ವೈಭವವನ್ನು ಇಡೀ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಕ್ರಮಗಳನ್ನು ರೂಪಿಸಿದೆ.

ಇಂದು ಸಂಜೆ ಸಿಎಂ ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಆದರೆ, ಕಾರ್ಯಕ್ರಮಗಳು ನಿನ್ನೆ ಸಂಜೆಯಿಂದಲೇ ಆರಂಭಗೊಂಡಿವೆ. ವಸಂತ ವೈಭವ ಕಾರ್ಯಕ್ರಮವು ನಡೆದಿದೆ. ನಿನ್ನೆ ಸೌಂಡ್‌ ಮತ್ತು ಲೈಟ್‌ ಶೋ ಇತ್ತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಫೆಬ್ರವರಿ 2ರವರೆಗೆ ಇರಲಿದೆ. ವಿಜಯನಗರದ ವೈಭವವನ್ನು ಧ್ವನಿ ಮತ್ತು ಬೆಳಕು ಲೇಸರ್‌ ಶೋನಲ್ಲಿ ಕಣ್ತುಂಬಿಕೊಳ್ಳಬಹುದು.

ಹಂಪಿ ಬೈ ಸ್ಕೈ ಎಂಬ ಹೆಲಿಕಾಪ್ಟರ್‌ ರೈಡ್‌ ಅವಕಾಶವೂ ಈ ಹಂಪಿ ಉತ್ಸವದಲ್ಲಿ ದೊರಕಲಿದೆ. ಜನವರಿ 30ರವರೆಗೆ ಆರರಿಂದ ಏಳು ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲಿ ಹಂಪಿಯನ್ನು ನೋಡುವ ಅವಕಾಶ ದೊರಕಲಿದೆ.

ಇಂದು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಅರ್ಜುನ್‌ ಜನ್ಯ ಮತ್ತು ತಂಡವು ಗಾಯತ್ರಿ ಪೀಠ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಿದೆ. ರಾತ್ರಿ 10.30ರಿಂದ 12.30ರವರೆಗೆ ಅಂಕಿತ್‌ ತಿವಾರಿ ಮತ್ತು ತಂಡವು ಕಾರ್ಯಕ್ರಮ ನೀಡಲಿದೆ.

ನಾಳೆ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸ್ಯಾಂಡಲ್‌ವುಡ್‌ನ ಜನಪ್ರಿಯ ಗಾಯಕ ವಿಜಯ ಪ್ರಕಾಶ್‌ ಕಾರ್ಯಕ್ರಮ ನೀಡಲಿದ್ದಾರೆ. ಬಳಿಕ ಬಾಲಿವುಡ್‌ ಗಾಯಕ ಅರ್ಮನ್‌ ಮಲ್ಲಿಕ್‌ ಕಾರ್ಯಕ್ರಮ ನಡೆಯಲಿದೆ. ನಾಡಿದ್ದು, ಕನ್ನಡ ಗಾಯಕಿ ಅನನ್ಯ ಭಟ್‌ ಅವರು ರಾತ್ರಿ 7-8 ಗಂಟೆಗೆ ಕಾರ್ಯಕ್ರಮ ನೀಡಲಿದ್ದಾರೆ. ಬಳಿಕ 8.15 ಗಂಟೆಯಿಂದ 9.45 ಗಂಟೆಯವರೆಗೆ ರಘು ದೀಕ್ಷಿತ್‌ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 10.15 ಗಂಟೆಯಿಂದ ಕೈಲಾಶ್‌ ಖೇರ್‌ ಕಾರ್ಯಕ್ರಮ ನೀಡಲಿದ್ದಾರೆ.

ಪಾರ್ಕಿಂಗ್‌ ಸ್ಥಳದಿಂದ ಕಾರ್ಯಕ್ರಮ ಸ್ಥಳದವರೆಗೆ ಉಚಿತ ಬಸ್‌ ಸೇವೆ ಇರಲಿದೆ. ಪ್ರತಿ ಐದು ನಿಮಿಷಕ್ಕೊಂದು ಬಸ್‌ ಬಿಡಲಾಗುತ್ತದೆ. ಒಟ್ಟು 120 ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಹಂಪಿ ಉತ್ಸವದಲ್ಲಿ ಚಿತ್ರಕಲೆ ಶಿಬಿರ, ಫಲಪುಷ್ಪ ಪ್ರದರ್ಶನ, ಮತ್ಸ್ಯಮೇಳ, ಮರಳು ಶಿಲ್ಪಕಲಾ ವೈಭವ, ಲೇಸರ್‌ ಶೋ, ವಸಂತ ವೈಭವ, ಆಹಾರ ಮೇಳ, ಕವಿಗೋಷ್ಠಿ, ಜಲಕ್ರೀಡೆ, ಕುಸ್ತಿ, ರಸಮಂಜರಿ, ಸಾಹಸ ಕ್ರೀಡೆ ಇತ್ಯಾದಿ ಹಲವು ಬಗೆಯ ಕಾರ್ಯಕ್ರಮಗಳು ಇರಲಿವೆ.