ನಗರ ವ್ಯಾಪ್ತಿಯ ಆಸ್ತಿದಾರರಿಗೊಂದು ಸಿಹಿ ಸುದ್ದಿ, ಇ-ಖಾತಾ ಇಲ್ಲದ ಎಲ್ಲಾ ಆಸ್ತಿ ಮಾಲೀಕರಿಗೂ ಸಿಗಲಿದೆ ಬಿ-ಖಾತಾ
ಕನ್ನಡ ಸುದ್ದಿ  /  ಕರ್ನಾಟಕ  /  ನಗರ ವ್ಯಾಪ್ತಿಯ ಆಸ್ತಿದಾರರಿಗೊಂದು ಸಿಹಿ ಸುದ್ದಿ, ಇ-ಖಾತಾ ಇಲ್ಲದ ಎಲ್ಲಾ ಆಸ್ತಿ ಮಾಲೀಕರಿಗೂ ಸಿಗಲಿದೆ ಬಿ-ಖಾತಾ

ನಗರ ವ್ಯಾಪ್ತಿಯ ಆಸ್ತಿದಾರರಿಗೊಂದು ಸಿಹಿ ಸುದ್ದಿ, ಇ-ಖಾತಾ ಇಲ್ಲದ ಎಲ್ಲಾ ಆಸ್ತಿ ಮಾಲೀಕರಿಗೂ ಸಿಗಲಿದೆ ಬಿ-ಖಾತಾ

ಬೆಂಗಳೂರು ಬಿಟ್ಟು ಕರ್ನಾಟಕದ ಇತರೆ ನಗರಗಳಲ್ಲ ಇ ಖಾತೆಯನ್ನು ಹೊಂದಿರದ ಆಸ್ತಿದಾರರಿಗೆ ಬಿ ಖಾತೆಯನ್ನು ನೀಡಿ ಅವರ ಆಸ್ತಿಯನ್ನು ಗಟ್ಟಿ ಮಾಡಿಕೊಳ್ಳಲು ಕರ್ನಾಟಕ ಒಂದು ಅವಕಾಶ ಮಾಡಿಕೊಡಲಿದೆ.

ಇ ಖಾತಾ ಇಲ್ಲದ ಆಸ್ತಿದಾರರಿಗೆ ಬಿ ಖಾತಾ ನೀಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ಇ ಖಾತಾ ಇಲ್ಲದ ಆಸ್ತಿದಾರರಿಗೆ ಬಿ ಖಾತಾ ನೀಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು: ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ. ಈ ಪೈಕಿ 22 ಲಕ್ಷ ನಿವೇಶನ ಮಾಲೀಕರು ಇ- ಖಾತಾ ಮಾಡಿಸಿದ್ದಾರೆ. ಆದರೆ, 30 ರಿಂದ 32 ಲಕ್ಷ ನಿವೇಶನ ಆಸ್ತಿಗಳಿಗೆ ಯಾವುದೇ ರೀತಿಯಾದ ಇ-ದಾಖಲೆ ಇರುವುದಿಲ್ಲ. ಈ ಎಲ್ಲರಿಗೂ ಒಂದು ಬಾರಿಯ ಮಾದರಿಯಲ್ಲಿ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ತಮ್ಮ ಖಾತೆ ಅಧಿಕೃತವಲ್ಲ ಎಂದು ವಹಿವಾಟು ನಡೆಸಲು ಇಲ್ಲವೇ ಸಾಲ ಪಡೆಯುವುದು ಸೇರಿದಂತೆ ಬ್ಯಾಂಕಿನ ಚಟುವಟಿಕೆಗಳಿಗೆ ಉಪಯೋಗವಾಗದೇ ಇದ್ದ ಆಸ್ತಿ ದಾಖಲೆಗಳಿಗೆ ಬೆಲೆ ಬರಲಿದೆ. ಆಯಾ ನಗರದ ಸನ್ನಿವೇಶ ನೋಡಿಕೊಂಡು ಹಂತ ಹಂತವಾಗಿ ಬಿ ಖಾತಾವನ್ನು ಆಸ್ತಿದಾರರಿಗೆ ನೀಡಲು ಸೂಚನೆ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯನವರು ಜನವರಿ.7 ರಂದು ಸಭೆ ನಡೆಸಿ ಫೆ.10 ರಿಂದ ದಾಖಲೆ ಇಲ್ಲದ ನಿವೇಶನಗಳ ಮಾಲೀಕರಿಗೆ ಒಮ್ಮೆ ಇ-ಆಸ್ತಿ ನಮೂದಿಸಿ ಬಿ-ಖಾತಾ ಸಮಾನಾಂತರ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಇಂದು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸರ್ಕಾರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಫೆ.10ರೊಳಗೆ ಸುತ್ತೋಲೆ ಹೊರಡಿಸಿ ಗರಿಷ್ಠ ಮೂರು ತಿಂಗಳ ಒಳಗೆ ಅಭಿಯಾನ ಮಾದರಿಯಲ್ಲಿ ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ ಬಿ-ಖಾತಾ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ ಎನ್ನುವುದು ಕಂದಾಯ ಸಚಿವ ಕೃಷ್ಣಬೈರೇಗೌಡರ ಸೂಚನೆ.

ಅನಧಿಕೃತ ನಿವೇಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಇದೀಗ ನಾವು ಅದನ್ನು ಪಾಲಿಸಲೇಕಾದ ತುರ್ತು ಎದುರಾಗಿದೆ. ಹೀಗಾಗಿ ಎಷ್ಟು ನಿವೇಶನ ಇವೆ ಎಂದು ಗುರುತಿಸಿ ಸರ್ಕಾರವೇ ಬಿ-ಖಾತಾ ಮಾಡಿಕೊಡಲಿದೆ. ಇದಾದ ಮೇಲೆ ರಾಜ್ಯದಲ್ಲಿ ಬಿ-ಖಾತಾ ಇರುವುದಿಲ್ಲ. ಎ-ಖಾತಾ ಮಾತ್ರ ಇರಲಿದ್ದು, ಮುಂದಿನ ದಿನಗಳಲ್ಲಿಅನಧಿಕೃತ ನಿವೇಶನಗಳಿಗೆ ಅವಕಾಶವೇ ಇಲ್ಲ. ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಮಾದರಿಯನ್ನು ಆರಂಭಿಸಲಾಗುವುದು ಎಂಬುದು ಸಚಿವರ ವಿವರಣೆ.

ಏನಿದು ಇ ಖಾತಾ

ಇ-ಖಾತಾ ಸಾಂಪ್ರದಾಯಿಕ ಖಾತಾ ಪ್ರಮಾಣಪತ್ರದ ಎಲೆಕ್ಟ್ರಾನಿಕ್ ಆವೃತ್ತಿಯಾಗಿದ್ದು, ಇದನ್ನು ಬೆಂಗಳೂರು ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಚಯಿಸಲಾಗಿದೆ. ಈ ಡಿಜಿಟಲ್ ದಾಖಲೆಯು ಆನ್‌ಲೈನ್ ಪೋರ್ಟಲ್ ಮೂಲಕ ಲಭ್ಯವಿದೆ, ಅಲ್ಲಿ ಆಸ್ತಿ ಮಾಲೀಕರು ಪುರಸಭೆಯ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದೇ ತಮ್ಮ ಖಾತೆಗೆ ಅರ್ಜಿ ಸಲ್ಲಿಸಿ ನಂತರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಎ ಖಾತಾ ಎಂದರೇನು?

ಉತ್ತರ: ಎ ಖಾತಾ ಎಂಬುದು ನಿಮ್ಮ ದಾಖಲೆಗಳಿಗೆ ಪುರಸಭೆಯ ಅಧಿಕಾರಿಗಳು ನೀಡಿದ ದಾಖಲೆಯಾಗಿದ್ದು, ಇದು ಮಾನ್ಯವಾದ ಶೀರ್ಷಿಕೆ ಪತ್ರ ಸೇರಿದಂತೆ ಎಲ್ಲಾ ಅಗತ್ಯ ನಿಯಮಗಳೊಂದಿಗೆ ಆಸ್ತಿಯ ಕಾನೂನು ಅನುಮೋದನೆ ಮತ್ತು ಅಧಿಕೃತತೆಯನ್ನು ಸೂಚಿಸುತ್ತದೆ.

ಬಿ ಖಾತಾ ಎಂದರೇನು?

ಉತ್ತರ: ಬಿ ಖಾತಾ ಎಂದರೆ ಸಣ್ಣ ವ್ಯತ್ಯಾಸಗಳನ್ನು ಹೊಂದಿರುವ ಅಥವಾ ಪುರಸಭೆಯ ನಿಯಮಗಳಿಗೆ ಅನುಸರಣೆ ಇಲ್ಲದಿರುವ ಆಸ್ತಿಗಳಿಗೆ ನೀಡಲಾದ ತಾತ್ಕಾಲಿಕ ಅಥವಾ ತಾತ್ಕಾಲಿಕ ದಾಖಲೆ. ಆಸ್ತಿಯು ಎ ಖಾತಾದ ಎಲ್ಲಾ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಇದು ಸೂಚಿಸುತ್ತದೆ.

ಮಾಲೀಕತ್ವದ ಗ್ಯಾರಂಟಿಗೆ ದರ್ಖಾಸ್ತು ಪೋಡಿ ಅಭಿಯಾನ

ದಶಕಗಳ ಹಿಂದೆ ಜಮೀನು ಮಂಜೂರು ಆಗಿದ್ದರೂ ಸಹ ಸರಿಯಾದ ದಾಖಲೆ ಇಲ್ಲದವರಿಗೆ ಜಮೀನಿನ ಮಾಲೀಕತ್ವದ ಗ್ಯಾರಂಟಿ ನೀಡುವ ಸಲುವಾಗಿ ದರ್ಖಾಸ್ತು ಪೋಡಿ ಕಾರ್ಯಕ್ರಮವನ್ನು ಅಭಿಯಾನ ಮಾದರಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಶುರುವಾಗಿದ್ದು, 26ಸಾವಿರ ಮಂಜೂರಿದಾರರ ಜಮೀನುಗಳನ್ನು ಸರ್ವೇಗೆ ಅಂಕಿತ ಹಾಕಲಾಗಿದೆ. ಈ ಪೈಕಿ 5 ಸಾವಿರ ಜನರಿಗೆ ಈಗಾಗಲೇ ಸರ್ವೇ ಮುಗಿಸಿದ್ದೇವೆ. ಈ ಎಲ್ಲರಿಗೂ ಹೊಸ ಆರ್ಟಿಸಿ, ಪಹಣಿ ಹಾಗೂ ನಕ್ಷೆ ನೀಡಲಾಗುವುದು. ಇದು ಜಮೀನಿನ ಮಾಲೀಕತ್ವದ ಗ್ಯಾರಂಟಿಯಾಗಿದ್ದು, ಈ ಅಭಿಯಾನಕ್ಕೆ “ನನ್ನ ಭೂಮಿ” ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಮೂರು ವರ್ಷದಲ್ಲಿ 5 ಸಾವಿರ ಜನರಿಗೆ ಪೋಡಿ ಮಾಡಿಕೊಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಕಳೆದ ಎರಡು ತಿಂಗಳಲ್ಲಿ 5 ಸಾವಿರ ಜನರಿಗೆ ಪೋಡಿ ದುರಸ್ಥಿ ಮಾಡಲಾಗಿದೆ. ನಮ್ಮ ಗುರಿ ದೊಡ್ಡದಿದೆ. ಕನಿಷ್ಟ 5 ರಿಂದ 7 ಲಕ್ಷ ಕುಟುಂಬಗಳಿಗೆ ಪೋಡಿ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಅಭಿಯಾನ ಮಾದರಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

Whats_app_banner