ಕಿರುಕುಳ ಆರೋಪ: ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕ ಬಂಧನ; ಬಾಲಕನ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಕಿರುಕುಳ ಆರೋಪ: ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕ ಬಂಧನ; ಬಾಲಕನ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು

ಕಿರುಕುಳ ಆರೋಪ: ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕ ಬಂಧನ; ಬಾಲಕನ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು

ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರು ಪಾವತಿ ಮಾಡುವಂತೆ ಬಂಧಿತ ಆರೋಪಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. 11 ವರ್ಷದ ಬಾಲಕನಿಗೆ 70 ವರ್ಷದ ವೃದ್ಧನೊರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಸಾಲ ಪಡೆದವರಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ (File)
ಸಾಲ ಪಡೆದವರಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ (File)

ರಾಜ್ಯಾದ್ಯಂತ ಮೈಕ್ರೊ ಫೈನಾನ್ಸ್‌ ಕಂಪನಿಗಳ ಕಾಟ ಹೆಚ್ಚಾಗುತ್ತಿದ್ದು, ರಾಮನಗರ, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ಮೊದಲಾದ ಜಿಲ್ಲೆಗಳಲ್ಲಿ ಸಾಲ ಪಡೆದವರು ಊರು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಕೂನಮುದ್ದನಹಳ್ಳಿ ಗ್ರಾಮದ ಇರುಳಿಗರ ಕಾಲೊನಿಯೊಂದರ ಮಹಿಳೆಯೊಬ್ಬರಿಗೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಆಪರ್ಚುನಿಟಿ ಪ್ರೈವೇಟ್‌ ಫೈನಾನ್ಸ್‌ ಕಂಪನಿ ಬಿಡದಿ ಶಾಖೆಯ ವ್ಯವಸ್ತಾಪಕ ರಘು ಎಂಬಾತನನ್ನು ಬಂಧಿಸಿಲಾಗಿದೆ. ಈ ಕಂಪನಿಯಿಂದ ಮುನಿವೆಂಕಟಮ್ಮ 52 ಸಾವಿರ ಸಾಲ ಪಡೆದುಕೊಂಡಿದ್ದರು. ಫೈನಾನ್ಸ್‌ ಕಂಪನಿ ಕಾಟಕ್ಕೆ ಹೆದರಿ ಊರು ಬಿಟ್ಟು ಮಾಗಡಿ ತಾಲೂಕಿನಲ್ಲಿರುವ ತವರುಮನೆ ಸೇರಿಕೊಂಡಿದ್ದರು.

ಆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಿದ್ದ ರಘು ಸಾಲ ಕಟ್ಟದಿದ್ದರೆ ಬಂಧಿಸಲಾಗುತ್ತದೆ ಎಂಬ ಎಚ್ಚರಿಕೆಯ ನೋಟಿಸ್ ಅನ್ನು ಮನೆ ಬಾಗಿಲಿಗೆ ಅಂಟಿಸಿ ಹೋಗಿದ್ದ. ಸಾಲ ಮರುಪಾವತಿಗೆ ಸಮಯ ಕೇಳಿದ್ದರೂ ರಘು ಕಿರುಕುಳ ಮುಂದುವರಿಸಿದ್ದ. ಈತನಿಂದ ಸಾಲ ಪಡೆದ ಇನ್ನೂ ಕೆಲವರು ಕಿರುಕುಳಕ್ಕೆ ಹೆದರಿ ಊರು ತೊರೆದಿದ್ದರು. ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದ ವಿಷಯ ತಿಳಿದ ಮುನಿವೆಂಕಟಮ್ಮ, ರಘು ವಿರುದ್ಧ ರಾಮನಗರ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.

ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ತಿಂಗಳು 2,810 ರೂಪಾಯಿ ಸಾಲದ ಕಂತನ್ನು ಪಾವತಿಸುತ್ತಿದ್ದ ಮುನಿವೆಂಕಟಮ್ಮ ತೊಂದರೆಯಿಂದ ಮೂರು ತಿಂಗಳು ಸಾಲ ಪಾವತಿಸಿರಲಿಲ್ಲ. ಡಿ.20 ರಂದು ಮನೆಗೆ ಆಗಮಿಸಿದ್ದ ರಘು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

11 ವರ್ಷದ ಬಾಲಕನ ಮೇಲೆ 70 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ ಆರೋಪ, ಪೋಕ್ಸೋ ಕೇಸ್ ದಾಖಲು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ ನಡೆದಿದೆ. 11 ವರ್ಷದ ಬಾಲಕನ ಮೇಲೆ 70 ವರ್ಷದ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವಿದ್ಯಾರಣ್ಯ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಆರೋಪಿ ರಾಮ್‌ ಮನೋಹರ್‌ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದುಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನವೊಂದರ ಎದುರಿನಲ್ಲಿ ಆರೋ‍ಪಿ ತಳ್ಳುವ ಗಾಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ. ಈ ಸ್ಥಳದ ಸಮೀಪವೇ ಸಂತ್ರಸ್ತ ಬಾಲಕನ ಮನೆಯಿತ್ತು. ಬಾಲಕನ ಪರಿಚಯ ಮಾಡಿಕೊಂಡ ರಾಮ್‌ ಮನೋಹರ್‌ ಆತನನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕ ಮನೆಗೆ ಬಂದು ವಿಷಯ ತಿಳಿಸಿದ್ದಾನೆ. ನಂತರ ಬಾಲಕನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮದ್ಯ ಸೇವಿಸಿ ವಾಹನ ಚಾಲನೆ; 693 ಮಂದಿಯ ವಿರುದ್ಧ ಎಫ್‌ಐಆರ್

ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, 693 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಜನವರಿ 13 ರಿಂದ 19ರ ವರೆಗೆ ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ 61,660 ವಾಹನಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ತಪಾಸಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವಾಹನಗಳ ಚಾಲಕರು ಹಾಗೂ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಅತಿವೇಗದಿಂದ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಜನವರಿ19ರಂದು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರ ಪೊಲೀಸರು 52 ಪ್ರಕರಣ ದಾಖಲಿಸಿಕೊಂಡು 26 ಸಾವಿರ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ದೋಷಪೂರಿತ ಸೈಲೆನ್ಸರ್‌ ಅಳವಡಿಸಿಕೊಂಡಿದ್ದವರ ವಿರುದ್ಧ 22 ಪ್ರಕರಣ ದಾಖಲಿಸಿಕೊಂಡು 11 ಸಾವಿರ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.

Whats_app_banner