ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ; ಈ ಆ್ಯಪ್​ನಲ್ಲಿ ಟಿಕೆಟ್ ಪಡೆಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ; ಈ ಆ್ಯಪ್​ನಲ್ಲಿ ಟಿಕೆಟ್ ಪಡೆಯಿರಿ

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ; ಈ ಆ್ಯಪ್​ನಲ್ಲಿ ಟಿಕೆಟ್ ಪಡೆಯಿರಿ

Hasanamba Temple: ಹಾಸನದ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್​ 24 ರಿಂದ ನವೆಂಬರ್ 3ರ ತನಕ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ 9 ದಿನಗಳಲ್ಲಿ 24 ಗಂಟೆಗಳ ಕಾಲವೂ ಬಾಗಿಲು ತೆರೆದಿರುತ್ತದೆ.

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ (Photo- mpbreakingnews.in)

ಹಾಸನ: ಬೇಡಿದ ವರವನ್ನು ಕರುಣಿಸುವ ಹಾಸನದ ಅಧಿದೇವತೆ ಮತ್ತು ನಾಡಿನ ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ದಿನಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ ಭಕ್ತರಿಗೆ ಹಾಸನಾಂಬೆ ದರ್ಶನವಾಗುತ್ತದೆ. ಅದರಂತೆ ಈ ವರ್ಷ ಅಕ್ಟೋಬರ್​ 24 ರಿಂದ 11 ದಿನಗಳ ಕಾಲ ಅಂದರೆ, ನವೆಂಬರ್​ 3ರ ತನಕ ದೇವಸ್ಥಾನದ ಬಾಗಿಲು ತೆರಯಲಾಗುತ್ತದೆ. ಆದರೆ, ಮೊದಲ ಮತ್ತು ಅಂತಿಮ ದಿನದಂದು ಭಕ್ತರಿಗೆ ಅವಕಾಶ ಇರುವುದಿಲ್ಲ. ಉಳಿದ 9 ದಿನಗಳಲ್ಲಿ ದರ್ಶನಕ್ಕೆ 24 ಗಂಟೆಯೂ ದರ್ಶನಕ್ಕೆ ಅವಕಾಶ ಇರಲಿದೆ. ಪ್ರತಿ ವರ್ಷವೂ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಜಿಲ್ಲಾಡಳಿತ ಸಜ್ಜಾಗಿದೆ.

ಕಳೆದ ವರ್ಷ ನವೆಂಬರ್ 2ರಿಂದ ನವೆಂಬರ್ 15ರ ತನಕ ದೇಗುಲದ ಬಾಗಿಲು ಓಪನ್ ಆಗಿತ್ತು. 14 ದಿನಗಳ ಕಾಲ ಭಕ್ತರ ಭೇಟಿಗೆ ಅವಕಾಶ ನೀಡಲಾಗಿತ್ತು. ಆದರೆ ಮೊದಲ ಮತ್ತು ಕೊನೆಯ ಬಿಟ್ಟು ಉಳಿದ 12 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದ್ದು, ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ಭಕ್ತರು ಕೂಡ ದೇವಿಯ ದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ದೇವಿಯ ದರ್ಶನ, ಟಿಕೆಟ್ ಖರೀದಿ ಸೇರಿ ಪ್ರಮುಖ ಮಾಹಿತಿ ಒದಗಿಸುವ ಸಲುವಾಗಿ ಹಾಸನಾಂಬ ಹೆಸರಿನಲ್ಲಿ ಅಪ್ಲಿಕೇಷನ್​​ವೊಂದನ್ನು ತೆರೆಯಲಾಗಿದ್ದು, ಇದರಲ್ಲಿ ಸಂಪೂರ್ಣ ಮಾಹಿತಿ ದೊರೆಯಲಿದೆ.

ದಸರಾ ಮಾದರಿ ಲೈಟಿಂಗ್ ವ್ಯವಸ್ಥೆ

ಹಾಸನ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರು ಸೆಪ್ಟೆಂಬರ್​ 30ರ ಸೋಮವಾರದಂದು ಹಾಸನಾಂಬ ಆ್ಯಪ್ ಬಿಡುಗಡೆ ಮಾಡಿದರು. ಈ ಅಪ್ಲಿಕೇಷನ್​ನಲ್ಲಿ ದೇವಸ್ಥಾನ ಮತ್ತು ದರ್ಶನದ ಕುರಿತು ಸಂಪೂರ್ಣ ಮಾಹಿತಿ, ನೇರ ದರ್ಶನಕ್ಕೆ ಟಿಕೆಟ್ ಖರೀದಿ, ದರ್ಶನದ ಸಮಯ, ನಿತ್ಯ ದರ್ಶನದ ಮಾಹಿತಿ ಹಾಗೂ ಕ್ಷೇತ್ರದ ಮಹಿಮೆಯ ಕುರಿತು ಇರಲಿದೆ. ಮೈಸೂರು ದಸರಾ ಮಾದರಿಯ ಲೈಟಿಂಗ್ ವ್ಯವಸ್ಥೆ, ಬೆಂಗಳೂರಿನ ಲಾಲ್ ಬಾಗ್ ಮಾದರಿ ಫಲ ಪುಷ್ಪ ಪ್ರದರ್ಶನಕ್ಕೆ ತಯಾರಿ ನಡೆದಿದೆ. ಕಳೆದ ವರ್ಷ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರು. ಈ ಬಾರಿ ಅದರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಸಚಿವರು ಪೋಸ್ಟರ್​ ಬಿಡೆಗಡೆಗೊಳಿಸಿದರು.

ತಪ್ಪುಗಳಾದಂತೆ ಎಚ್ಚರ

ಕಳೆದ ವರ್ಷ ಭಕ್ತರ ದರ್ಶನದ ವೇಳೆ ಸಾಕಷ್ಟು ಎಡವಟ್ಟುಗಳಾಗಿದ್ದವು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಅಂತಹ ತಪ್ಪುಗಳು ಆಗದಂತೆ ನೋಡಿಕೊಂಡು ಹಾಸನಾಂಬೆ ಉತ್ಸವ ನಡೆಸುತ್ತೇವೆ ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ. ರಾಜ್ಯ-ಅಂತಾರಾಜ್ಯಗಳಿಂದ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ಪ್ಯಾರಾ ಗ್ಲೈಡಿಂಗ್, ಹೆಲಿ ಟೂರಿಸಮ್ ಹಾಸನದ ಐತಿಹಾಸಿಕ ತಾಣಗಳ ಪ್ಯಾಕೇಜ್ ಟೂರ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ನಾಡಿನ ಶಕ್ತಿದೇವತೆಗಳಲ್ಲಿ ಹಾಸನಾಂಬೆಯೂ ಒಬ್ಬಳು. ಹಾಗಾಗಿ ದೇವಿ ದರ್ಶನ ಮಾಡಲೆಂದೇ ಲಕ್ಷಲಕ್ಷ ಭಕ್ತರ ದಂಡು ಹರಿದುಬರುತ್ತಿದೆ. ದೇವರ ಮುಡಿಗಿಟ್ಟ ಹೂ ಬಾಡುವುದಿಲ್ಲ. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪ ಆರುವುದಿಲ್ಲ ಎನ್ನುವ ನಂಬಿಕೆಯಿಂದಲೇ ಹಾಸನಾಂಬೆ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

Whats_app_banner