Hassan Congress Convention: ಹಾಸನದಲ್ಲಿ ಇಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಯಾರಿಗೆ ನೀಡಲಿದ್ಧಾರೆ ಸಂದೇಶ ಎನ್ನುವ ಕುತೂಹಲ
ಕನ್ನಡ ಸುದ್ದಿ  /  ಕರ್ನಾಟಕ  /  Hassan Congress Convention: ಹಾಸನದಲ್ಲಿ ಇಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಯಾರಿಗೆ ನೀಡಲಿದ್ಧಾರೆ ಸಂದೇಶ ಎನ್ನುವ ಕುತೂಹಲ

Hassan Congress Convention: ಹಾಸನದಲ್ಲಿ ಇಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಯಾರಿಗೆ ನೀಡಲಿದ್ಧಾರೆ ಸಂದೇಶ ಎನ್ನುವ ಕುತೂಹಲ

Hassan Congress Convention: ಸಿದ್ದತೆ ಶುರುವಾದಾಗ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶವಾಗಿದ್ದ ಹಾಸನದಲ್ಲಿ ಗುರುವಾರ ನಡೆಯುವ ಸಮಾವೇಶ ಈಗ ಜನಕಲ್ಯಾಣದ ರೂಪ ಪಡೆದಿದೆ. ಯಾರ ವಿರುದ್ದ ಸಂದೇಶ ಇಲ್ಲಿಂದ ರವಾನೆಯಾಗಲಿದೆ ಎನ್ನುವ ಕುತೂಹಲ ಕಾಂಗ್ರೆಸ್‌ನಲ್ಲಿಯೇ ಇದೆ.

ಹಾಸನದಲ್ಲಿ ಗುರುವಾರ ನಡೆಯಲಿರುವ ಜನಕಲ್ಯಾಣ ಸಮಾವೇಶಕ್ಕೆ ಭಾರೀ ಸಿದ್ದತೆ ಮಾಡಿಕೊಳ್ಳಲಾಗಿದೆ.
ಹಾಸನದಲ್ಲಿ ಗುರುವಾರ ನಡೆಯಲಿರುವ ಜನಕಲ್ಯಾಣ ಸಮಾವೇಶಕ್ಕೆ ಭಾರೀ ಸಿದ್ದತೆ ಮಾಡಿಕೊಳ್ಳಲಾಗಿದೆ.

ಹಾಸನ: ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ನಾಯಕರ ನಡುವಿನ ಮುಸುಕಿನ ಗುದ್ದಾಟ, ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ಕ್ರೆಡಿಟ್‌ ವಿಚಾರವೂ ಸೇರಿದಂತೆ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್‌ ಹಾಗೂ ಕೆಲ ನಾಯಕರಿಗೆ ಸಂದೇಶ ರವಾನಿಸಲು ಹಾಸನದಲ್ಲಿ ಆಯೋಜಿಸಿರುವ ಸ್ವಾಭಿಮಾನಿ ಸಮಾವೇಶ ಈಗ ಜನಕಲ್ಯಾಣ ಸಮಾವೇಶದ ರೂಪ ಪಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸ್ವಾಭಿಮಾನಿ ಸಮಾವೇಶವನ್ನು ಜನಕಲ್ಯಾಣ ಸಮಾವೇಶ ಎಂದು ಬದಲಿಸಿದ್ದೂ ಅಲ್ಲದೇ ತಾವು ಭಾಗಿಯಾಗುವುದಾಗಿ ಹೇಳಿದ್ದಾರೆ. ಇದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಜತೆಗೆ ಇದು ಕಾಂಗ್ರೆಸ್‌ನ ಸಮಾವೇಶವಾಗಿಯೂ ಪರಿವರ್ತನೆಯಾಗಿದೆ. ಮೈಸೂರು ಭಾಗದಿಂದ ಎರಡು ಲಕ್ಷ ಜನರನ್ನು ಸೇರಿಸಲು ಸಿದ್ದರಾಮಯ್ಯ ಅವರ ಬೆಂಬಲಿತ ಸಚಿವರು, ಶಾಸಕರು ತಯಾರಿ ನಡೆಸಿದ್ದಾರೆ. ಹಾಸನದಲ್ಲಿ ಸಮಾವೇಶಕ್ಕೆ ಭಾರೀ ಸಿದ್ದತೆಗಳು ನಡೆದಿವೆ. ಮಧ್ಯಾಹ್ನ ಸಮಾವೇಶ ನಡೆಯಲಿದೆ.

ಸಮಾವೇಶ ಏಕೆ

ಕರ್ನಾಟಕದಲ್ಲಿ ಕಳೆದ ತಿಂಗಳು ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮೂರಕ್ಕೆ ಮೂರು ಸ್ಥಾನ ಗೆದ್ದ ಉಮೇದಿನಲ್ಲಿದೆ. ಮತ್ತೊಂದು ಕಡೆಯಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಬಣದ ನಡುವೆ ಸಂಘರ್ಷಗಳು ನಡೆದಿವೆ. ಇದರ ನಡುವೆಯೇ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಸಮಾವೇಶದ ಮೂಲಕ ಸಂದೇಶ ರವಾನಿಸಬೇಕು ಎನ್ನುವ ಉದ್ದೇಶದಿಂದ ಮೈಸೂರು ಬದಲು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಂಡಿದ್ದಾರೆ. ಹಾಸನ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ತವರು ಹಾಗೂ ಜೆಡಿಎಸ್‌ ಭದ್ರಕೋಟೆಯೂ ಆಗಿರುವುದರಿಂದ ಈ ಮೂಲಕ ಉತ್ತರ ನೀಡಬೇಕು ಎನ್ನುವುದು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ಉದ್ದೇಶ. ಸಿದ್ದರಾಮಯ್ಯ ಅವರ ಆಪ್ತ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಕೆ.ವೆಂಕಟೇಶ್‌ ಅವರು ಈ ಸಮಾವೇಶ ಸಂಘಟನೆ ಹೊಣೆ ಹೊತ್ತಿದ್ದಾರೆ.

ಈ ಸಮಾವೇಶದಲ್ಲಿ ಕಾಂಗ್ರೆಸ್‌ನ ನಾಯಕರು ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಕುತೂಹಲವಂತೂ ಇದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭಾಗವಹಿಸುವರೋ ಇಲ್ಲವೋ ಎನ್ನುವ ಗೊಂದಲ ಇತ್ತಾದರೂ ಮೂರು ದಿನದ ಹಿಂದೆ ಅವರೇ ಖುದ್ದು ಹೇಳಿದ್ದರು. ನಾನು ಸಮಾವೇಶಕ್ಕೆ ಹೋಗುತ್ತೇನೆ. ಇದು ಸ್ವಾಭಿಮಾನಿ ಸಮಾವೇಶವೂ ಹೌದು. ಜನಕಲ್ಯಾಣ ಸಮಾವೇಶವೂ ಹೌದು ಎನ್ನುವ ರೀತಿ ಹೇಳಿದ್ದರು. ಈಗ ಸಮಾವೇಶದ ಊರು ಹಾಸನ ನಗರ ಹಾಗೂ ಮಾರ್ಗದುದ್ದಕ್ಕೂ ಜನಕಲ್ಯಾಣ ಹಾಗೂ ಸ್ವಾಭಿಮಾನಿ ಸಮಾವೇಶ ಎನ್ನುವ ಹೆಸರಿನಲ್ಲಿಯೇ ಕಟೌಟ್‌ಗಳು ರಾರಾಜಿಸುತ್ತಿವೆ.

ಸಮಾವೇಶದಲ್ಲಿ ರಾಹುಲ್‌ಗಾಂಧಿ ಅವರು ಭಾಗವಹಿಸುವ ಸಾಧ್ಯತೆ ಕಡಿಮೆ. ಉಳಿದಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಅವರೊಂದಿಗೆ ಭಾಗಿಯಾಗಬಹುದು. ಬಹುತೇಕ ಸಚಿವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಳೆ ಮೈಸೂರು ಭಾಗದ ಕಾರ್ಯಕರ್ತರು, ಮುಖಂಡರು ಭಾಗಿಯಾಗುವರು. ಸುಮಾರು ಎರಡು ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

ಹೇಗಿರಲಿದೆ ಸಮಾವೇಶ

ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ. ಇದಕ್ಕಾಗಿ 480 ಅಡಿ ಅಗಲ ಮತ್ತು 600 ಅಡಿ ಉದ್ದದ ಬೃಹತ್‌ ವೇದಿಕೆ ಹಾಕಲಾಗಿದೆ. 70 ಸಾವಿರ ಜನರು ಕೂರಲು ಆಸನಗಳ ವ್ಯವಸ್ಥೆಯಿದೆ..

ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪೊಲೀಸ್ ಇಲಾಖೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐವರು ಎಸ್ಪಿಗಳು, ಆರು ಎಎಸ್ಪಿಗಳು, 12 ಡಿವೈಎಸ್ಪಿ, 50ಕ್ಕೂಹೆಚ್ಚು ಸಿಪಿಐ, 80ಕ್ಕೂ ಹೆಚ್ಚು ಪಿಎಸ್​​​​ಐಗಳು ಸೇರಿ ಎರಡು ಸಾವಿರ ಪೊಲೀಸರನ್ನು ನಿಯೋಜಿಲಾಗಿದೆ.

1500 ಬಸ್‌ಗಳ ಲೆಕ್ಕ

ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಮೊದಲ ಭಾಗವಾಗಿ ಕಾರ್ಯಕ್ರಮಕ್ಕೆ ಜಿಲ್ಲೆ ಸಹಿತ ನಾನಾ ಭಾಗಗಳಿಂದ ಜನರನ್ನು ಕರೆ ತರಲು ಹಾಸನ ವಿಭಾಗದ ಒಂದರಿಂದಲೇ 1,500 ಬಸ್‌ಗಳು ಬೇಕೆಂದು ಬೇಡಿಕೆ ಇಡಲಾಗಿದೆ. ಆದರೆ 800 ಬಸ್‌ ಕೊಡುವುದಾಗಿ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದು, ಇಷ್ಟು ಬಸ್‌ಗಳನ್ನು ಏಕಕಾಲದಲ್ಲಿಒದಗಿಸಬೇಕಿರುವ ಕಾರಣ ಹೊರ ಜಿಲ್ಲೆಯಿಂದ ಬಸ್‌ಗಳನ್ನು ತರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಹಲವು ಕಡೆಯಿಂದಲೂ ಜನ ಸಮಾವೇಶದ ಕಡೆ ಹೊರಟಿದ್ದಾರೆ.

Whats_app_banner