ಪ್ರಜ್ವಲ್ ರೇವಣ್ಣ ವಿರುದ್ಧದ 2ನೇ ಅತ್ಯಾಚಾರ ಪ್ರಕರಣ: ಮೇ 28ರಿಂದ ವಿಚಾರಣೆ; ಜೈಲಿನಲ್ಲಿ ಒಂದು ವರ್ಷ ಕಳೆದ ಜೆಡಿಎಸ್ ಮುಖಂಡ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ದಾಖಲಾಗಿರುವ ಎರಡನೇ ಅತ್ಯಾಚಾರ ಪ್ರಕರಣದ ವಿಚಾರಣೆ ಮೇ 28ರಿಂದ ಬೆಂಗಳೂರಿನ ನ್ಯಾಯಾಲಯದಲ್ಲಿ ಆರಂಭವಾಗಲಿದೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಹಾಸನ ಮಾಜಿ ಲೋಕಸಭಾ ಸದಸ್ಯ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಎದುರಿಸುತ್ತಿರುವ ಎರಡನೇ ಅತ್ಯಾಚಾರ ಪ್ರಕರಣದ ವಿಚಾರಣೆ ಮೇ 28 ರಿಂದ ಆರಂಭವಾಗಲಿದೆ. ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ತಮ್ಮ ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ತೆರಳಿದ್ದಾಗ ಪ್ರಜ್ವಲ್ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದೆ. 33 ವರ್ಷದ ಪ್ರಜ್ವಲ್ ವಿರುದ್ಧದ ಮೊದಲ ಅತ್ಯಾಚಾರ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಮೇ 2 ರಿಂದ ಆರಂಭವಾಗಿದೆ. ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್ 22 ರಂದು ಪ್ರಜ್ವಲ್ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಪ್ರಜ್ವಲ್ ಈ ಪ್ರಕರಣದಲ್ಲಿ ತಾನು ನಿರಪಾರಾಧಿ ಎಂದು ಮನವಿ ಮಾಡಿಕೊಂಡಿದ್ದರು. ಮೇ 5 ರಂದು ಹೊಸ ವಕೀಲರನ್ನು ನೇಮಿಸಿಕೊಂಡಿದ್ದರು. ವಿಚಾರಣೆಯನ್ನು ಆರಂಭಿಸಲು ಮೇ 28 ರಂದು ಮೇ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯನ್ನೂ ಸೇರಿದಂತೆ ಮೊದಲ ಕಂತಿನ ಸಾಕ್ಷ್ಯಗಳನ್ನು ಹಾಜಪರುಪಡಿಸಲು ಕಳೆದ ವಾರ ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು. ಈ ಮಧ್ಯೆ ನ್ಯಾಯಾಲಯವು ಮುಂದಿನ ವಿಚಾರಣೆ ವೇಳೆಗೆ ಅಂದರೆ ಮೇ 28 ರಂದು ಆರೋಪಿಯನ್ನು ಖುದ್ದು ಹಾಜರುಪಡಿಸಲು ಆದೇಶ ಹೊರಡಿಸಿದೆ.
ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರನ್ನು ಸತತ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ವಿಶೇಷ ತನಿಖಾ ದಳ ಪ್ರಜ್ವಲ್ ವಿರುದ್ಧ 2024 ರ ಸೆಪ್ಟಂಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಅತ್ಯಾಚಾರದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ತನ್ನೊಡನೆ ಸಹಕರಿಸುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆ ಮಹಿಳೆ ಆರೋಪಿಸಿದ್ದರು.
ಪ್ರಜ್ವಲ್ ವಿರುದ್ಧ ಐಪಿಸಿ ಸೆ. 372 (2)(n) (ನಿರಂತರ ಅತ್ಯಾಚಾರ), 506( ಕ್ರಿಮಿನಲ್ ಉದ್ದೇಶ), 354(A) 354(A) (ಲೈಂಗಿಕ ತೃಷೆ ಬೇಡಿಕೆ), 354(B)( ಮಹಿಳೆ ಮೇಲೆ ದೌರ್ಜನ್ಯ), 354 (C)( ಬೆತ್ತಲೆಯಾಗಿ ನೋಡುವುದು), 201(ಸಾಕ್ಷ್ಯನಾಶ) ಮತ್ತು ಐಟಿ ಕಾಯಿದೆ 66 (E) ( ವಿಡಿಯೋ ರೆಕಾರ್ಡಿಂಗ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾವು ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ವಿಚಾರಣಾನ್ಯಾಯಾಲಯ ನಿಷ್ಪಕ್ಷಪಾತಿಯಾಗಿ ವರ್ತಿಸುತ್ತಿಲ್ಲ ಎಂದು ಪ್ರಜ್ವಲ್ ಅವರ ತಾಯಿ ಭವಾನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೇ 2 ರಂದು ವಜಾಗೊಳಿಸಿತ್ತು. ವಕೀಲರನ್ನು ನೇಮಿಸಿಕೊಳ್ಳುವ ಎಲ್ಲ ಸಾಮರ್ಥ್ಯ ರೇವಣ್ಣ ಕುಟುಂಬಕ್ಕಿದ್ದು, ವಿಚಾರಣೆಯನ್ನು ನಿಧಾನಗೊಳಿಸಲು ಇಂತಹ ತಂತ್ರಗಳಿಗೆ ಮೊರೆ ಹೋಗಲಾಗುತ್ತಿದೆ ಎಂದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರು.
ರೇವಣ್ಣ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳು
ಪ್ರಜ್ವಲ್ ವಿರುದ್ಧ ದಾಖಲಾದ ಮೊದಲ ಪ್ರಕರಣದ ವಿಚಾರಣೆ ಮೇ 2ರಿಂದ ಆರಂಭವಾಗಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಾಖಲಾಗಿದೆ. ಜತೆಗೆ ಈಕೆಯ ಪುತ್ರಿಯ ಮೇಲೂ ಅತ್ಯಾಚಾರ ಎಸಗಿರುವ ಆರೋಪ ದಾಖಲಾಗಿದೆ.
2024ರ ಏಪ್ರಿಲ್ 26ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುವುದಿತ್ತು. ಇದಕ್ಕೂ ಕೆಲವೇ ದಿನಗಳ ಮುನ್ನ ಹಾಸನದಾದ್ಯಂತ ಅತ್ಯಾಚಾರದ ವಿಡಿಯೋ ತುಣುಕುಗಳುಳ್ಳ ಪೆನ್ ಡ್ರೈವ್ ಗಳು ಹಂಚಲ್ಪಟ್ಟಿದ್ದವು. ನಂತರ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಜರ್ಮನಿಗೆ ತೆರಳಿದ್ದ ಪ್ರಜ್ವಲ್ ಮೇ 31 ರಂದು ಹಿಂತಿರುಗಿದ್ದು ಅಂದೇ ಅವರನ್ನು ಬಂಧಿಸಲಾಗಿತ್ತು. ನಂತರ ರಾಜ್ಯ ಸರಕಾರ ಪ್ರಕಣದ ತನಿಖೆಗಾಗಿ ವಿಶೇಷ ತನಿಖಾ ದಳ( ಎಸ್ ಐಟಿ) ರಚಿಸಿತ್ತು. 2024ರ ಮೇ 31 ರಿಂದ ಪ್ರಜ್ವಲ್ ಕಾರಾಗೃಹದಲ್ಲಿದ್ದಾರೆ.
ವರದಿ: ಎಚ್.ಮಾರುತಿ. ಬೆಂಗಳೂರು