Hassan News: ಹಾಸನ ಮರಕಡಿತ ಪ್ರಕರಣ, ಎಸಿಎಫ್‌ ಸಹಿತ ನಾಲ್ವರು ಅಧಿಕಾರಿಗಳ ಅಮಾನತು: ಡಿಸಿಎಫ್‌ ಮೇಲೂ ಕ್ರಮಕ್ಕೆ ಶಿಫಾರಸ್ಸು
ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಹಾಸನ ಮರಕಡಿತ ಪ್ರಕರಣ, ಎಸಿಎಫ್‌ ಸಹಿತ ನಾಲ್ವರು ಅಧಿಕಾರಿಗಳ ಅಮಾನತು: ಡಿಸಿಎಫ್‌ ಮೇಲೂ ಕ್ರಮಕ್ಕೆ ಶಿಫಾರಸ್ಸು

Hassan News: ಹಾಸನ ಮರಕಡಿತ ಪ್ರಕರಣ, ಎಸಿಎಫ್‌ ಸಹಿತ ನಾಲ್ವರು ಅಧಿಕಾರಿಗಳ ಅಮಾನತು: ಡಿಸಿಎಫ್‌ ಮೇಲೂ ಕ್ರಮಕ್ಕೆ ಶಿಫಾರಸ್ಸು

Hassan forest News ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಮರ ಕಡಿತ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಎಸಿಎಫ್‌ , ಆರ್‌ಎಫ್‌ಒ ಸಹಿತ ನಾಲ್ವರನ್ನು ಅಮಾನತು ಮಾಡಲಾಗಿದೆ. ಡಿಸಿಎಫ್‌ ವಿರುದ್ದವೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮರ ಕಡಿತಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮರ ಕಡಿತಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಹಾಸನ: ಮೈಸೂರು- ಕೊಡಗು ಸಂಸದ ಪ್ರತಾಪಸಿಂಹ ಸಹೋದರ ಭಾಗಿಯಾಗಿದ್ದಾರೆ ಎನ್ನಲಾದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿ ಮರಗಳ ಕಡಿತಲೆ ಪ್ರಕರಣದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಹಿತ ನಾಲ್ವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಹಾಸನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ ಬಿರಾದಾರ, ಬೇಲೂರು ವಲಯ ಅರಣ್ಯಾಧಿಕಾರಿ ವಿನಯ್‌, ಅರೇಹಳ್ಳಿ ಭಾಗದ ಉಪ ವಲಯ ಅರಣ್ಯಾಧಿಕಾರಿ ಡಿ.ಗುರುರಾಜ್‌ ಹಾಗೂ ಅರಣ್ಯ ರಕ್ಷಕ ಎಚ್‌.ಬಿ.ರಘುಕುಮಾರ್‌ ಅಮಾನತುಗೊಂಡವರು.

ಇವರಲ್ಲದೇ ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್‌ ಅವರ ವಿರುದ್ದವೂ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ದೀಕ್ಷಿತ್‌ ಅವರು ಪತ್ರ ಬರೆದಿದ್ದಾರೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಉಪ ಕಾರ್ಯದರ್ಶಿ ಬಿ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ಮುಖ್ಯರಸ್ತೆಗೆ ಹೊಂದಿಕೊಂಡ ಜಾಗದಲ್ಲಿಯೇ 126 ಮರಗಳನ್ನು ಕತ್ತರಿಸಲಾಗಿದೆ. ಇದಕ್ಕೆ ಟ್ರಾಕ್ಟರ್‌, ಗರಗಸ ಸಹಿತ ಹಲವು ವಸ್ತುಗಳನ್ನು ಬಳಸಿದ್ದಾರೆ. ಹೀಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೇ ಘಟನೆ ನಡೆದ 12 ದಿನಗಳ ನಂತರವೂ ಪ್ರಕರಣ ದಾಖಲಿಸದೇ ವಿಳಂಬ ಮಾಡಿರುವುದು ಕಂಡು ಬಂದಿದೆ. ಇದು ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬ ವರದಿ ಹಿನ್ನೆಲೆಯಲ್ಲಿ ಐವರ ವಿರುದ್ದ ಕ್ರಮಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿಫಾರಸ್ಸು ಮಾಡಿದ್ದರು. ಇಲಾಖೆ ಹಂತದಲ್ಲಿಯೇ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಐಎಫ್‌ಎಸ್‌ ಅಧಿಕಾರಿಯಾಗಿರುವ ಡಿ.ಮೋಹನ್‌ಕುಮಾರ್‌ ಅವರ ವಿರುದ್ದವೂ ಕ್ರಮ ಆಗಲಿದೆ. ಅವರ ವಿರುದ್ದ ಕ್ರಮದ ಕಡತ ಮುಖ್ಯಮಂತ್ರಿ ಅವರ ಬಳಿಯಿದೆ ಎಂದು ಮೂಲಗಳು ತಿಳಿಸಿವೆ.

ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿ ಗ್ರಾಮ ಸಮೀಪದ ಗೋಮಾಳ ಜಾಗದಲ್ಲಿ ಕಳೆದ ವಾರ 126 ಮರಗಳನ್ನು ಕಡಿದು ಸಾಗಣೆ ಮಾಡಲಾಗಿತ್ತು. ಇದನ್ನು ಗಮನಿಸಿದ್ದ ಬೇಲೂರು ತಹಸಿಲ್ದಾರ್‌ ಮಮತಾ ಅವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ದೂರು ಬಂದ ನಂತರ ಕೆಲ ಮರಗಳನ್ನು ಜಪ್ತಿ ಮಾಡಲಾಗಿತ್ತು. ಮರ ಕಡಿದ ಪ್ರಕರಣದಲ್ಲಿ ಜಮೀನಿನ ಸ್ವಾಧೀನದಲ್ಲಿರುವ ಜಯಮ್ಮ ಹಾಗೂ ಮತ್ತಿತರರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.

ಇದೇ ಜಮೀನನ್ನು ಗುತ್ತಿಗೆ ಪಡೆಯಲು ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಅವರ ಸಹೋದರ ವಿಕ್ರಮ್‌ ಸಿಂಹ ಒಪ್ಪಂದ ಮಾಡಿಕೊಂಡಿದ್ದರು. ಬೇಗನೇ ಜಮೀನು ನೀಡುವಂತೆ ಒತ್ತಡ ಹೇರಿದ್ದರಿಂದ ಮರ ಕತ್ತರಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾಂಗ್ರೆಸ್‌ ಕೂಡ ಮರ ಕಡಿತದಲ್ಲಿ ವಿಕ್ರಮ್‌ ಸಿಂಹ ಪಾತ್ರವಿದೆ ಎಂದು ಆರೋಪಿಸಿತ್ತು.

ಈ ಕುರಿತು ಪ್ರಕರಣದ ತನಿಖಾಧಿಕಾರಿಯಾಗಿರುವ ಬೇಲೂರು ವಲಯ ಅರಣ್ಯಾಧಿಕಾರಿ ಎದುರು ಹಾಜರಾಗಿದ್ದ ವಿಕ್ರಮ್‌ ಸಿಂಹ, ಶುಂಠಿ ಬೆಳೆಯಲೆಂದು ಜಯಮ್ಮ ಅವರಿಂದ ಜಮೀನು ಒಪ್ಪಂದ ಮಾಡಿಕೊಂಡಿರುವುದು ನಿಜ. ಆದರೆ ಮರ ಕಡಿತಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಹೇಳಿಕೆ ನೀಡಿರುವುದಾಗಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

===========

Whats_app_banner