Hassan Crime: ಹಾಸನ ಸಮೀಪ ಪಾಲೀಶ್ ನೆಪದಲ್ಲಿ ಬಂದು ಚಿನ್ನ ಎಗರಿಸಲು ಪ್ರಯತ್ನ: ಕಳ್ಳನನ್ನು ಹಿಡಿದುಕೊಟ್ಟ ಸಾಕು ನಾಯಿ !
Dog Catched Theif ಹಾಸನ ತಾಲ್ಲೂಕಿನಲ್ಲಿ ಚಿನ್ನಾಭರಣವನ್ನು ಪಾಲೀಶ್ ಮಾಡಲು ಮುಂದಾಗಿ ಮೋಸದೊಂದಿಗೆ ಚಿನ್ನ ಹೊತ್ತುಕೊಂಡು ಹೋಗಲು ಯತ್ನಿಸಿದವರನ್ನು ಸಾಕು ನಾಯಿಯೇ ಹಿಡಿದುಕೊಟ್ಟಿದೆ. ಈ ಕುರಿತು ಹಾಸನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಾಸನ: ಚಿನ್ನದ ಆಭರಣಗಳನ್ನು ಪಾಲೀಶ್ ಮಾಡುವ ನೆಪದಲ್ಲಿ ಕದ್ದುಕೊಂಡು ಹೋಗಲು ಯತ್ನಿಸಿದ ಮೂವರು ಕಳ್ಳರಲ್ಲಿ ಒಬ್ಬನನ್ನು ಸಾಕು ನಾಯಿಯೇ ಹಿಡಿದುಕೊಟ್ಟು ಮಾಲಕಿ ಆದೇಶ ಪಾಲಿಸಿದ ಘಟನೆ ಹಾಸನ ತಾಲ್ಲೂಕಿನ ಮಾದಿಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಮಹಿಳೆಗೆ ಮಂಕುಬೂದಿ ಎರಚಿ ವಂಚನೆಗೂ ಯತ್ನಿಸಿದ್ದಲ್ಲದೇ ಹೆದರಿಸಿದ್ದು ಈ ವೇಳೆ ಮಹಿಳೆ ಕೂಗಿಕೊಂಡಿದ್ದಾರೆ. ಅಲ್ಲದೇ ಮನೆಯಲ್ಲಿ ಕಟ್ಟಿದ್ದ ನಾಯಿಯನ್ನು ಬಿಚ್ಚಿದ್ದು ಅದು ಕಳ್ಳರನ್ನು ಅಟ್ಟಿಸಿಕೊಂಡು ಹೋಗಿ ಒಬ್ಬನನ್ನು ಹಿಡಿದಿದೆ. ಆರೋಪಿಯನ್ನು ಗ್ರಾಮಾಂತರ ಠಾಣೆಗೆ ಒಪ್ಪಿಸಲಾಗಿದೆ.
ಹಾಸನ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದಲ್ಲಿ ಹೊರ ರಾಜ್ಯದಿಂದ ಬಂದಿದ್ದ ಮೂವರು ಯುವಕರ ಗುಂಪು ಮೊದಲು ಪೂಜೆ ಸಾಮಾನು ಪಾಲೀಶ್ ಮಾಡಿಕೊಡೋ ನೆಪದಲ್ಲಿ ಊರು ಪ್ರವೇಶಿಸಿತ್ತು. ಆನಂತರ ವಂಚಕರು ಚಿನ್ನ ಪಾಲೀಶ್ ಮಾಡಿಕೊಡುವುದರಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಗ್ರಾಮದ ಲಕ್ಷ್ಮಮ್ಮ ಎಂಬುವವರ ಮನೆಗೆ ಈ ತಂಡ ತೆರಳಿತ್ತು. ಮನೆಯಲ್ಲಿ ಯಾರೂ ಇಲ್ಲದೇ ಲಕ್ಷ್ಮಮ್ಮ ಮಾತ್ರ ಇದ್ದರು. ಆಗ ಪೂಜೆ ಸಾಮಾನು ಪಾಲೀಶ್ ಮಾಡಿಕೊಡೊದಾಗಿ ಹೇಳಿ ಕೆಲಸ ಮುಗಿಸಿ ಕೊಟ್ಟಿದ್ದರು.
ನಿಮ್ಮ ಚಿನ್ನದ ಆಭರಣ ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿತ್ತು. 28 ಗ್ರಾಂ ಚಿನ್ನದ ಸರವನ್ನು ಲಕ್ಷ್ಮಮ್ಮ ತಂದುಕೊಟ್ಟಿದ್ದರು. ಅದನ್ನು ಕೆಲ ನಿಮಿಷ ಚೊಂಬಿನಲ್ಲಿ ಹಾಕಿ ಪಾಲೀಶ್ ಮಾಡಿಕೊಡುವುದಾಗಿ ಹೇಳಿದ್ದರು.
ವಾಪಾಸ್ ಕೊಟ್ಟಾಗ 6ಗ್ರಾಮ್ ಕಡಿಮೆಯಾಗಿತ್ತು. ಇದನ್ನು ಪ್ರಶ್ನಿಸಿದಾಗ ಮೂವರು ಅಲ್ಲಿಂದ ಓಡಿ ಹೋಗಲು ಪ್ರಯ್ನಿಸಿದರು. ಲಕ್ಷ್ಮಮ್ಮ ಕೂಗಿಕೊಳ್ಳಲು ಮುಂದಾದರು. ಆಗ ಮನೆಯ ಬಳಿ ಕಟ್ಟಿದ್ದ ನಾಯಿಯನ್ನು ಬಿಚ್ಚಿ ಹಿಡಿಯುವಂತೆ ಲಕ್ಷ್ಮಮ್ಮ ಹೇಳಿದ್ದರು.
ಆಗ ನಾಯಿ ಬೆನ್ನಟ್ಟಿಕೊಂಡು ಹೋಗಿ ಒಬ್ಬನನ್ನು ಹಿಡಿದರೆ ಇನ್ನಿಬ್ಬರು ತಪ್ಪಿಸಿಕೊಂಡು ಹೋದರು. ಆನಂತರ ಗ್ರಾಮಸ್ಥರು ಒಬ್ಬನನ್ನು ಹಿಡಿದು ಧರ್ಮದೇಟು ನೀಡಿದ್ದೂ ಅಲ್ಲದೇ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಈಗ ಆತನ ವಿಚಾರಣೆಯನ್ನು ಹಾಸನ ಗ್ರಾಮಾಂತರ ಪೊಲೀಸರು ನಡೆಸಿದ್ದಾರೆ.
ಚಿನ್ನದ ಪಾಲೀಶ್ ನೆಪದಲ್ಲಿ ಕಳ್ಳತನ ಮಾಡಲು ಬಂದಿರುವ ಮಾಹಿತಿಯಿದೆ. ಈ ಕುರಿತು ಲಕ್ಷ್ಮಮ್ಮ ನೀಡಿರುವ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ. ಕೃತ್ಯ ಎಸಗಿದ ಮಾಹಿತಿ ಕಲೆ ಹಾಕುತ್ತಿದ್ದು. ಹಲವೆಡೆ ಇದೇ ರೀತಿ ಮೋಸ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆ ಮಾಲಕಿ ನೀಡಿದ ಆಜ್ಞೆಯನ್ನು ಪಾಲಿಸಿ ಕಳ್ಳನನ್ನು ಹಿಡಿದ ನಾಯಿಯ ಪ್ರಯತ್ನಕ್ಕೆ ಹಾಗೂ ಸ್ವಾಮಿ ನಿಷ್ಠೆಗೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.
ಹಾಸನ ಭಾಗದಲ್ಲಿ ಈ ರೀತಿ ಚಿನ್ನಾಭರಣ ಪಾಲೀಶ್ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಉತ್ತರ ಭಾರತ ಕಡೆಯಿಂದ ಉದ್ಯೋಗ ಅರಸಿ ಬರುವ ಕೆಲವರು ಈ ರೀತಿ ಮೋಸ ಮಾಡುವುದು ಕಂಡು ಬಂದಿದೆ. ಈಗಾಗಲೇ ಇಂತ ಜಾಲವಿದ್ದರೆ ಜನ ಎಚ್ಚರ ವಹಿಸಬೇಕು. ಚಿನ್ನಾಭರಣವನ್ನು ನೀಡಬಾರದು. ಮನೆಯವರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ವಿಭಾಗ