ಕನ್ನಡ ಸುದ್ದಿ  /  Karnataka  /  Hassan News Hassan Jds Candidate Prajwal Revanna Borrowed Loan From Family Members Land Gifts Kub

Hassan News: ಅತ್ತೆ ಅನಸೂಯ ಮಂಜುನಾಥ್‌ ರಿಂದ ಸಾಲ ಪಡೆದ ಪ್ರಜ್ವಲ್‌ ರೇವಣ್ಣ ಆಸ್ತಿ ಪ್ರಮಾಣ ಎಷ್ಟಿದೆ

ಹಾಸನ ಜೆಡಿಎಸ್‌ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಆಸ್ತಿ ಪ್ರಮಾಣ ಎಷ್ಟಿದೆ. ಸಾಲ ಯಾರಿಂದ ಪಡೆದಿದ್ದಾರೆ ಇಲ್ಲಿದೆ ವಿವರ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಕೋಟ್ಯಾಧಿಪತಿ.
ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಕೋಟ್ಯಾಧಿಪತಿ.

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಕೋಟ್ಯಾಧೀಶ. ಅದೂ ಅತ್ತೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಸಿ.ಎನ್‌.ಮಂಜುನಾಥ್‌ ಅವರ ಪತ್ನಿ ಅನುಸೂಯ ಮಂಜುನಾಥ್‌ ಅವರಿಂದ 22 ಲಕ್ಷ ರೂ. ಸಾಲವನ್ನೂ ಪಡೆದುಕೊಂಡಿದ್ದಾರೆ. ಸಹೋದರ ಸೂರಜ್‌ಗೆ ಕೋಟಿಗಟ್ಟಲೇ, ಅಜ್ಜಿ ಚನ್ನಮ್ಮದೇವೇಗೌಡ ಅವರಿಗೂ ಸಾಲವನ್ನು ಕೊಟ್ಟಿದ್ದಾರೆ. ತಾವೊಬ್ಬ ಕೃಷಿಕ ಹಾಗೂ ವ್ಯಾಪಾರಸ್ಥ ಎಂದು ಹೇಳಿಕೊಂಡು ಆಸ್ತಿಯ ಬಹುಪಾಲನ್ನು ಕೃಷಿಯಿಂದಲೇ ಹೊಂದಿರುವುದಾಗಿ ತಮ್ಮ ಅಫಿಡವಿಟ್‌ನಲ್ಲಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಬೆಂಗಳೂರು, ಮೈಸೂರು, ಹಾಸನ, ನೆಲಮಂಗಲದಲ್ಲೂ ಆಸ್ತಿ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ.

ಟ್ರಾಕ್ಟರ್‌ ಮಾಲೀಕರಾಗಿರುವ ಪ್ರಜ್ವಲ್‌ ಬಳಿ ಒಂದು ಪಿಸ್ತೂಲ್‌ ಹಾಗೂ ಮತ್ತೊಂದು ರೈಫಲ್‌ ಇರುವುದಾಗಿಯೂ ತಿಳಿಸಿದ್ದಾರೆ. ಇವುಗಳ ಬೆಲೆಯೇ ನಾಲ್ಕು ಲಕ್ಷ ರೂ. ಪ್ರಜ್ವಲ್‌ ಹಸು ಹಾಗೂ ಎತ್ತುಗಳ ಮಾಲೀಕರೂ ಹೌದು. ಸುಮಾರು 85 ಲಕ್ಷ ರೂ. ಚಿನ್ನಾಭರಣಗಳನ್ನು ಪ್ರಜ್ವಲ್‌ ಇರಿಸಿಕೊಂಡಿದ್ದಾರೆ. ಇವೆಲ್ಲಾ ಸೇರಿ ಒಟ್ಟು ಚರಾಸ್ಥಿ ಪ್ರಮಾಣವೇ 5.44 ಕೋಟಿ ರೂ.ಗಳಿದೆ.

ಸ್ಥಿರಾಸ್ಥಿಯಲ್ಲಿ ನೆಲಮಂಗಲ ತಾಲ್ಲೂಕು ಭಾವಿಕೆರೆಯಲ್ಲಿ ಎಂಟು ನಿವೇಶನ, ಹೊಳೆನರಸೀಪುರದ ಮಾರಗೌಡನಹಳ್ಳಿಯಲ್ಲಿ ಭೂಮಿ. ಹಾಸನದ ಗೌರಿಪುರದಲ್ಲಿ ಭೂಮಿ, ಹೊಳೆ ನರಸೀಪುರ ತಾಲ್ಲೂಕು ಪಡುವಲಹಿಪ್ಪೆಯಲ್ಲಿ ಜಮೀನು, ಇದರಲ್ಲಿ ಕೆಲವು ಜಮೀನು ತಂದೆ ರೇವಣ್ಣ ಅವರಿಂದ ಉಡುಗೊರೆಯಾಗಿ ಬಂದಿರುವುದನ್ನು ಪ್ರಜ್ವಲ್‌ ತೋರಿಸಿದ್ದಾರೆ. ಮೈಸೂರಿನ ಶ್ರೀರಾಂಪುರದಲ್ಲಿ ನಿವೇಶನ, ಕುವೆಂಪು ನಗರದಲ್ಲಿ ವಾಣಿಜ್ಯ ಕಟ್ಟಡ ಕೂಡ ಪ್ರಜ್ವಲ್‌ ಹೆಸರಲ್ಲಿದೆ. ಇದರ ಮೌಲ್ಯವೇ 35.40 ಕೋಟಿ ರೂ,ಗಳಷ್ಟಾಗಲಿದೆ.

ಇನ್ನು ಸುಮಾರು 5 ಕೋಟಿ ರೂ.ಸಾಲವನ್ನು ಪ್ರಜ್ವಲ್‌ ಹೊಂದಿದ್ದಾರೆ. ಅನಸೂಯ ಮಂಜುನಾಥ್‌, ಸಿ.ಎನ್‌.ಪುಟ್ಟಸ್ವಾಮಿಗೌಡ, ಡಿ.ಕುಪೇಂದ್ರ ರೆಡ್ಡಿ, ಎಚ್‌.ಡಿ.ರೇವಣ್ಣಮ ಶೈಲ ಚಂದ್ರಶೇಖರ್‌, ಫಿಜಾ ಡೆವಲರ್ಸ್‌ಗ ಸಾಲ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಕೆಲ ವರ್ಷದಿಂದ ಆದಾಯ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿದ್ದು. ಈ ಕುರಿತು ವಿಚಾರಣೆ ನಡೆದಿರುವುದರಿಂದ ಪಾವತಿ ಅಂತಿಮಗೊಂಡಿಲ್ಲ. ಸರ್ಕಾರಿ ಬಾಕಿಯೇ 3 ಕೋಟಿ ರೂ.ಗಳಷ್ಟು ಪಾವತಿಸಬೇಕಾಗಿದೆ ಎಂದು ಹೇಳಿದ್ದಾರೆ.