ಕನ್ನಡ ಸುದ್ದಿ  /  ಕರ್ನಾಟಕ  /  Bhavani Revanna: ಎಸ್‌ಐಟಿ ವಿಚಾರಣೆಗೆ ಹಾಜರಾಗದೇ ಭವಾನಿ ರೇವಣ್ಣ ನಾಪತ್ತೆ, ಕಾಯುತ್ತಿರುವ ಪೊಲೀಸರು

Bhavani Revanna: ಎಸ್‌ಐಟಿ ವಿಚಾರಣೆಗೆ ಹಾಜರಾಗದೇ ಭವಾನಿ ರೇವಣ್ಣ ನಾಪತ್ತೆ, ಕಾಯುತ್ತಿರುವ ಪೊಲೀಸರು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ ಐಟಿ ವಿಚಾರಣೆಗೆ ಹಾಜರಾಗಬೇಕಾಗಿದ್ದ ಭವಾನಿ ರೇವಣ್ಣ ನಾಪತ್ತೆಯಾಗಿರುವ ಆರೋಪಗಳು ಕೇಳಿ ಬಂದಿವೆ.

ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ.,
ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ.,

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಈಗಾಗಲೇ ನೊಟೀಸ್‌ ಅನ್ನು ವಿಶೇಷ ತನಿಖಾ ತಂಡ ನೀಡಿದೆ. ಅವರು ವಿಚಾರಣೆಗೂ ಹಾಜರಾಗಿಲ್ಲ. ಈಗಾಗಲೇ ವಿಶೇಷ ತನಿಖಾ ತಂಡ ಹೊಳೆ ನರಸೀಪುರದಲ್ಲಿರುವ ಎಚ್‌.ಡಿ.ರೇವಣ್ಣ ಅವರ ಮನೆ ಬಳಿ ಬೀಡು ಬಿಟ್ಟಿದೆ. ನಾಲ್ಕೈದು ಗಂಟೆಯಿಂದಲೇ ಕಾಯುತ್ತಿದ್ದರೂ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಅವರು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಎನ್ನುವ ಮಾತುಗಳಿ ಕೇಳಿ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಭವಾನಿ ರೇವಣ್ಣ ಅವರು ಬಂಧನ ಭೀತಿಯಿಂದಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದಲ್ಲಿ ಅವರ ಹೆಸರು ಇಲ್ಲ ಎಂದ ಮೇಲೆ ಜಾಮೀನಿನ ಅಗತ್ಯವಿಲ್ಲ ಎನ್ನುವ ಕಾರಣ ನೀಡಿ ಅರ್ಜಿ ವಜಾಗೊಳಿಸಿತ್ತು. ಅವರ ಜಾಮೀನು ಅರ್ಜಿ ಶುಕ್ರವಾರ ವಜಾಗೊಂಡ ನಂತರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಸಂತ್ರಸ್ತ ಮಹಿಳೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಈಗಾಗಲೇ ಭವಾನಿ ರೇವಣ್ಣ ಅವರಿಗೆ ನೊಟೀಸ್‌ ಅನ್ನು ಜಾರಿಗೊಳಿಸಿತ್ತು. ಅವರು ವಿಚಾರಣೆಗೆ ಹಾಜರಾಗೇ ಇದ್ದುದರಿಂದ ಮನೆಗೆ ಆಗಮಿಸಿ ಹೇಳಿಕೆ ದಾಖಲಿಸುವುದಾಗಿ ಎಸ್‌ಐಟಿ ತಂಡ ಅವರಿಗೆ ಮಾಹಿತಿ ನೀಡಿತ್ತು.

ಅದರಂತೆಯೇ ಜೂನ್‌ 1ರ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಲಾಗಿತ್ತು. ಈಗಾಗಲೇ ಎಸ್‌ಐಟಿ ತಂಡ ಹೊಳೆನರಸೀಪುರದಲ್ಲಿರುವ ಎಚ್‌.ಡಿ.ರೇವಣ್ಣ ಅವರ ನಿವಾಸ ಚೆನ್ನಾಂಬಿಕಾಗೆ ಆಗಮಿಸಿದೆ.

ಬೆಳಿಗ್ಗೆಯಿಂದಲೇ ಮನೆಗೆ ಆಗಮಿಸಿದರೂ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಅವರು ಮನೆಯಲ್ಲಿ ಕೂಡ ಇಲ್ಲ ಎನ್ನುವ ಮಾಹಿತಿ ಎಸ್‌ಐಟಿ ತಂಡಕ್ಕೆ ದೊರೆತಿದೆ. ಆದರೂ ಈಗಾಗಲೇ ನೊಟೀಸ್‌ ಜಾರಿಗೊಳಿಸಿರುವುದರಿಂದ ಸಂಜೆ 5ರವರೆಗೆ ಅವರ ಮನೆ ಬಳಿ ಕಾಯ್ದು ತೆರಳುವ ನಿರ್ಧಾರಕ್ಕೆ ಎಸ್‌ಐಟಿ ತಂಡ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ 29ರಂದು ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಸಂತ್ರಸ್ತ ಮಹಿಳೆಯನ್ನು ಕೆಆರ್‌ ನಗರದಿಂದ ಅಪಹರಿಸಲು ಮಾರ್ಗದರ್ಶನ ನೀಡಿದ ಆರೋಪದ ಮೇಲೆ ಎಚ್‌.ಡಿ.ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಅವರು ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಮಹಿಳೆ ಕರೆತರಲು ಭವಾನಿ ರೇವಣ್ಣ ಕೂಡ ಒತ್ತಡ ಹಾಕಿದ್ದರು ಎನ್ನುವ ಅಂಶವನ್ನು ಸಂತ್ರಸ್ತ ಮಹಿಳೆ ಹಾಗೂ ಇತರರು ಉಲ್ಲೇಖ ಮಾಡಿರುವುದರಿಂದ ಅವರನ್ನೂ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಪ್ರಯತ್ನಿಸುತ್ತಿದೆ.

ಅವರ ವಿರುದ್ದ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾರೂ ದೂರು ಕೂಡ ನೀಡಿಲ್ಲ. ಆದರೆ ಈ ಪ್ರಕರಣದಲ್ಲ ಉಲ್ಲೇಖಿತವಾಗಿರುವವರ ಹೇಳಿಕೆ ದಾಖಲಿಸಲಾಗುತ್ತಿದೆ. ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾದಾಗ ತಮ್ಮನ್ನು ಬಂಧಿಸಬಹುದು ಎನ್ನುವ ಭಯ ಕಾಡುತ್ತಿದೆ. ಈ ಕಾರಣದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಕೊನೆಗೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅವರ ವಕೀಲರು ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದು, ಈ ಕಾರಣದಿಂದಲೇ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024