Hassan Scandal: ಅಜ್ಜ ದೇವೇಗೌಡರು ಕರೆದರೂ ಬಾರದ ಮೊಮ್ಮಗ, ತಿಂಗಳಾದರೂ ತಿರುಗಿ ನೋಡದ ಪ್ರಜ್ವಲ್ ರೇವಣ್ಣ ಬರೋದು ಯಾವಾಗ?
Prajwal Revanna ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿದ ನಂತರ ದೇಶ ಬಿಟ್ಟು ಪರಾರಿಯಾಗಿ ತಿಂಗಳೆ ಕಳೆಯಿತು. ಅವರು ವಾಪಾಸಾಗುವುದು ಯಾವಾಗ?

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ ಬಂದು ತಿಂಗಳೇ ಆಯಿತು. ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿ ಒಂದು ತಿಂಗಳೇ ಆಗಿದೆ. ಈವರೆಗೂ ಪ್ರಜ್ವಲ್ ರೇವಣ್ಣ ವಾಪಾಸಾಗಿಲ್ಲ. ವಿಶೇಷ ತನಿಖಾ ತಂಡ( SIT) ನೀಡಿದ ನೊಟೀಸ್‌ಗೂ ಜಗ್ಗಿಲ್ಲ. ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ, ಸಹೋದರ ನಿಖಿಲ್ ಕುಮಾರಸ್ವಾಮಿ, ಕೊನೆಗೆ ತಾತ ಎಚ್.ಡಿ.ದೇವೇಗೌಡ ಕೂಡ ದೇಶಕ್ಕೆ ಮರಳುವಂತೆ ಎಚ್ಚರಿಕೆ ಕೊಟ್ಟರೂ ಬಗ್ಗಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೂ ಪ್ರಜ್ವಲ್ ಬರುವುದಿಲ್ಲ ಎನ್ನುವ ಮಾತುಗಳಿಗೆ ಪುಷ್ಠಿ ನೀಡುವಂತೆ ಆತ ಜೂನ್ ಎರಡನೇ ವಾರದಲ್ಲಿ ದೇಶಕ್ಕೆ ಮರಳುವುದು ಖಚಿತವಾಗುತ್ತಿದೆ. ಇದೇ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದರೆ, ಪೆನ್‌ಡ್ರೈವ್ ವಿಚಾರವಾಗಿ ಮಾತನಾಡುತ್ತಲೇ ಇದ್ದ ವಕೀಲ ದೇವರಾಜೇಗೌಡ ಕೂಡ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದರೆ, ಪೆನ್‌ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ಕಾರ್ತಿಕ್ ಗೌಡ ಹಾಗೂ ನವೀನ್‌ಗೌಡ ಕೂಡ ತಲೆ ಮರೆಸಿಕೊಂಡಿದ್ದಾರೆ.
ಆಗಿದ್ದೇನು
ಏಪ್ರಿಲ್ 21 ರಂದು ಲೋಕಸಭೆ ಚುನಾವಣೆಗೂ ಮುನ್ನವೇ ಪೆನ್‌ಡ್ರೈವ್ ವಿವಾದ ಬಯಲಿಗೆ ಬಂದಿತು. ಪ್ರಜ್ವಲ್ ಚುನಾವಣೆ ಏಜೆಂಟ್ ಆಗಿದ್ದ ಪೂರ್ಣ ಚಂದ್ರ ಎಂಬುವವರು ಹಾಸನದಲ್ಲಿ ದೂರು ನೀಡಿ, ಚುನಾವಣೆ ವೇಳೆ ಇದನ್ನು ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ದೂರು ನೀಡಿದ್ದರು. ಅದರಲ್ಲಿ ಕಾರ್ತಿಕ್, ನವೀನ್ ಸಹಿತ ಹಲವರ ಹೆಸರನ್ನು ಪ್ರಸ್ತಾಪಿಸಿದ್ದರು. ಆಗ ಅದು ಹೊರಗಡೆ ಬರಲಿಲ್ಲ.
ಏಪ್ರಿಲ್ 26 ಲೋಕಸಭೆ ಚುನಾವಣೆ ಮತದಾನ ನಡೆಯಿತು. ಮರು ದಿನವೇ ಅಂದರೆ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ಬೆಂಗಳೂರಿನಿಂದ ಜರ್ಮನಿಗೆ ತೆರಳಿದರು. ಇದಾದ ಮರು ದಿನವೇ ಏಪ್ರಿಲ್ 28 ರಂದು ಹೊಳೆ ನರಸೀಪುರದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಯಿತು. ಏಪ್ರಿಲ್ 29ರಂದು ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ವಿರುದ್ದ ಮನೆಕೆಲಸದ ಮಹಿಳೆ ನೀಡಿದ ದೂರು ದಾಖಲಾಯಿತು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅಪಹರಣ ಪ್ರಯತ್ನ ಆಯಿತು ಎಂದು ಎಚ್.ಡಿ.ರೇವಣ್ಣ ಅವರನ್ನು ಬಂಧಿಸಲಾಯಿತು. ಅವರು ಆರು ದಿನದ ನಂತರ ಜಾಮೀನು ಪಡೆದುಕೊಂಡರು. ಮತ್ತೊಂದು ಪ್ರಕರಣದಲ್ಲೂ ಜಾಮೀನು ದೊರೆಯಿತು. ಇದಾಗಿ ಪ್ರಜ್ವಲ್ ವಿರುದ್ದ ಅತ್ಯಾಚಾರದ ಪ್ರಕರಣಗಳೂ ದಾಖಲಾಗಿವೆ.
ವಿಚಾರಣೆಗೂ ಬರಲಿಲ್ಲ
ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಏಪ್ರಿಲ್ 30 ಕ್ಕೆ ಪ್ರಜ್ವಲ್‌ಗೆ ನೋಟಿಸ್ ನೀಡಿತು. ಮೇ 1ಕ್ಕೆ ಅವರು ವಿಚಾರಣೆಗೆ ಬರಬೇಕಾಗಿತ್ತು. ಒಂದು ವಾರದ ಸಮಯ ಕೇಳಿದರೂ ಬರಲೇ ಇಲ್ಲ. ಆನಂತರ ರೇವಣ್ಣ ಅವರು ಬಿಡುಗಡೆಯಾದ ಮೇಲೆ ಪ್ರಜ್ವಲ್ ಹಿಂದಿರುಗುವ ನಿರೀಕ್ಷೆಯಿತ್ತು. ಆಗಲೂ ಬರಲಿಲ್ಲ. ಇದಾದ ಬಳಿಕ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರೂ ಪ್ರಜ್ವಲ್ ವಿಚಾರಣೆಗೆ ಹಾಜರಾಗಲಿ ಎಂದು ಹೇಳಿಕೆ ಕೊಟ್ಟರು. ಕೊನೆಗೆ ನಾಲ್ಕು ದಿನದ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಮ್ಮ ಕುಟುಂಬದ ಮೇಲೆ ಗೌರವವಿದ್ದರೆ, ಗೌರವ ಉಳಿಸಬೇಕಿದ್ದರೆ ಭಾರತಕ್ಕೆ ವಾಪಾಸಾಗು. ಕಾನೂನು ಶಿಕ್ಷೆ ಎದುರಿಸಿ ಎಂದು ಕಠಿಣ ಹೇಳಿಕೆಯನ್ನು ನೀಡಿದರು. ಆಗಲೂ ಬರಬಹುದು ಎನ್ನುವ ನಿರೀಕ್ಷೆ ಇತ್ತಾದರೂ ಪ್ರಜ್ವಲ್ ಸುಳಿದಿಲ್ಲ.
ಈಗಿನ ಪರಿಸ್ಥಿತಿ ನೋಡಿದರೆ ಜೂನ್ 4ಕ್ಕೆ ಲೋಕಸಭೆ ಚುನಾವಣೆ ಮತ ಎಣಿಕೆ ಇದೆ. 8 ದಿನ ಮಾತ್ರ ಇದಕ್ಕೆ ಬಾಕಿಯಿದೆ. ಪೊಲೀಸರು, ಕುಟುಂಬದವರು ಹೇಳಿದ ನಂತರವೂ ಪ್ರಜ್ವಲ್ ದೇಶಕ್ಕೆ ಮರಳಿಲ್ಲ. ಮತ ಎಣಿಕೆ ಮುಗಿದ ಮೇಲೆಯೆ ಬರುವ ಎಲ್ಲಾ ಸೂಚನೆ ಕಂಡು ಬರುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಪ್ರಜ್ವಲ್ ಶರಣಾಗಬಹುದು. ಅದು ಜೂನ್10 ದಾಟಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಎಸ್‌ಐಟಿ ಸಿದ್ದತೆ
ಈಗಾಗಲೇ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ವಕೀಲ ದೇವರಾಜೇಗೌಡ ಜೈಲು ಸೇರಿದ್ದು ಜೂನ್ ಮೊದಲ ವಾರದವರೆಗೂ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಮತ್ತೊಬ್ಬ ಆರೋಪಿ ಪ್ರಜ್ವಲ್ ಚಾಲಕ ಕಾರ್ತಿಕ್ ಗೌಡ, ಪೆನ್‌ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್‌ಗೌಡ ಎಂಬುವವರು ಕೂಡ ಈವರೆಗೂ ಕಾಣೆಯಾಗಿದ್ದಾರೆ. ಕಾರ್ತಿಕ್‌ಗೌಡ ಕೂಡ ವಿದೇಶದಲ್ಲಿರುವ ಅನುಮಾನಗಳಿವೆ. ಆತನ ಬಂಧನಕ್ಕೂ ವಿಶೇಷ ತಂಡ ಕಾಯುತ್ತಿದೆ.
ಈಗಾಗಲೇ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ಸಾಕ್ಷಿಗಳನ್ನು ಸಂಗ್ರಹಿಸಿದೆ. ಸ್ಥಳ ಮಹಜರು ಕೂಡ ಮಾಡಿದೆ. ಯಾವುದೇ ಕಾರಣಕ್ಕೂ ಪ್ರಜ್ವಲ್ ತಪ್ಪಿಸಿಕೊಳ್ಳಲು ಬಿಡಬಾರದು ಎನ್ನುವ ಉದ್ದೇಶದೊಂದಿಗೆ ತನಿಖೆಯಲ್ಲಿ ತೊಡಗಿದೆ. ಪ್ರಜ್ವಲ್ ರೇವಣ್ಣ ಪೊಲೀಸರ ಮುಂದೆ ಹಾಜರಾಗಲೇಬೇಕು. ನ್ಯಾಯಾಲದಯ ವಿಚಾರಣೆ ಎದುರಿಸಬೇಕಾಗಿರುವುದರಿಂದ ಇದಕ್ಕಾಗಿಯೂ ತನಿಖಾ ತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
