Prajwala Revenna: ಪ್ರಜ್ವಲ್ ವಿಡಿಯೋ ಬಿಡುಗಡೆ, ಮೇ 31ಕ್ಕೆ ಬಂದು ವಿಚಾರಣೆ ಎದುರಿಸುವೆ ಎಂದು ಹೇಳಿಕೆ
Hassan Scandal ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಒಂದು ತಿಂಗಳಿನಿಂದ ಕಾಣೆಯಾಗಿರುವ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ವಿಡಿಯೋ( Prajwal Video) ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿ ತಲೆ ಮರೆಸಿಕೊಂಡಿರುವ ಸಂಸದ ಹಾಗೂ ಜಾ.ದಳ ಯುವ ಮುಖಂಡ ಪ್ರಜ್ವಲ್ ರೇವಣ್ಣ ಒಂದು ತಿಂಗಳ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದು, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಭಾರೀ ಷಡ್ಯಂತ್ರಗಳೇ ನಡೆದಿವೆ. ಆದರೆ ನಾನು ಜನತೆಯನ್ನು ಕ್ಷಮೆ ಕೇಳುವೆ. ಮೇ 31ಕ್ಕೆ ಭಾರತಕ್ಕೆ ವಾಪಾಸಾಗುವೆ. ವಿಶೇಷ ತನಿಖಾತಂಡದ ಎದುರು ಅಂದು10 ಬೆಳಿಗ್ಗೆ ಹಾಜರಾಗುವೆ. ಎಲ್ಲಾ ವಿಚಾರಣೆಯನ್ನು ಎದುರಿಸಿವೆ ಎಂದು ಹೇಳಿಕೊಂಡಿದ್ದಾರೆ.ಸುಮಾರು ಮೂರು ನಿಮಿಷದ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಘಟನೆ ಕುರಿತು ವಿವರವಾಗಿಯೇ ಮಾತನಾಡಿದ್ದಾರೆ.
ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು, ತಮ್ಮ ತಂದೆ, ತಾಯಿ,ತಾತ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬದವರ ಬಳಿ ಕ್ಷಮೆ ಕೇಳುವೆ.ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುವೆ.ದೇವರ ಆಶೀರ್ವಾದ, ಕುಟುಂಬದ ಆಶೀರ್ವಾದ ಮತ್ತು ಜನರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಪ್ರಜ್ವಲ್ ಕೇಳಿಕೊಂಡಿದ್ದಾರೆ.
ರಾಜಕೀಯ ಪಿತೂರಿ ಆರೋಪ
ಲೋಕಸಭೆ ಚುನಾವಣೆ ಮತದಾನ ಮಾಡಿ ಮರು ದಿನ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧರಿತವಾಗಿತ್ತು. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ವಿಡಿಯೋ ಬಿಡುಗಡೆ, ಪ್ರಕರಣ ದಾಖಲಾದ ಮಾಹಿತಿ ನನಗೆ ಗೊತ್ತಾಯಿತು. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ನೀಡಿತು. ಎಸ್‌ಐಟಿ ನೋಟಿಸ್‌ಗೆ ಎಕ್ಸ್ ಖಾತೆ ಮತ್ತು ನಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆಎಂದು ಪ್ರಜ್ವಲ್ ಹೇಳಿಕೊಂಡಿದ್ದಾರೆ.
ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ಟಿವಿಗಳಲ್ಲಿಯೇ ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆ. ಹಾಸನದಲ್ಲಿ ಎಲ್ಲ ನನ್ನ ವಿರುದ್ಧದ ಶಕ್ತಿಗಳು ಒಟ್ಟಾಗಿ ಭಾರೀ ಪಿತೂರಿಯನ್ನೇ ಮಾಡಿದ್ದಾರೆ. ರಾಜಕೀಯವಾಗಿ ನಾನೇನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎನ್ನುವ ಕಾರಣದಿಂದಲೇ ಬೇರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಳ್ಳು ಪ್ರಕರಣ ಹಾಕಿದ್ದಾರೆ
ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿದ್ದಾರೆ. ನನ್ನ ಮೇಲೆ ದಾಖಲಾಗಿರುವಂತಹ ಈ ಎಲ್ಲಾ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸನ ನನಗಿದೆ. ನನಗೆ ನ್ಯಾಯಾಲಯದ ಮೇಲೆ ಅಪಾರ ಗೌರವ, ನಂಬಿಕೆಯಿದೆ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಎಲ್ಲಾ ವಿಚಾರಗಳ ಕುರಿತು ತನಿಖೆ ಎದುರಿಸಲು ನಾನೇ ಸ್ವತಃ ಶುಕ್ರವಾರ ಮೇ 31ರ ಬೆಳಿಗ್ಗೆ 10ಕ್ಕೆ ಎಸ್‌ಐಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆ ವಿಚಾರಣೆಯನ್ನು ಎದುರಿಸುತ್ತೇನೆ. ಅಲ್ಲದೇ ಈ ಎಲ್ಲ ಪ್ರಹಸನಗಳಿಗೆ ತೆರೆ ಎಳೆಯುವ ಕೆಲಸವನ್ನು ಅಂದು ಮಾಡುವೆ. ಈ ಪ್ರಕರಣದಿಂದ ನನ್ನ ಮೇಲೇ ಯಾರೂ ಕೂಡ ಅನ್ಯಥಾ ಭಾವಿಸಬೇಡಿ.ನನ್ನ ಮೇಲೆ ದೇವರ ಆಶಿರ್ವಾದ ಮಾತ್ರವಲ್ಲದೇ, ಕುಟುಂಬ ಹಾಗೂ ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ ಎಂದು ಪ್ರಜ್ವಲ್ ಬೇಡಿಕೊಂಡಿದ್ದಾರೆ.
( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)