ಕನ್ನಡ ಸುದ್ದಿ  /  ಕರ್ನಾಟಕ  /  Hassan Shoot Out: ಹಾಸನದಲ್ಲಿ ಗುಂಡೇಟಿನ ಸದ್ದು, ಬೆಂಗಳೂರು ವ್ಯಾಪಾರಿ ಸೇರಿ ಜೋಡಿ ಸಾವು, ತನಿಖೆ ಚುರುಕು

Hassan Shoot out: ಹಾಸನದಲ್ಲಿ ಗುಂಡೇಟಿನ ಸದ್ದು, ಬೆಂಗಳೂರು ವ್ಯಾಪಾರಿ ಸೇರಿ ಜೋಡಿ ಸಾವು, ತನಿಖೆ ಚುರುಕು

Crime News ಕಾರಿನಲ್ಲಿ ಬಂದವರು ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಒಬ್ಬಾತ ಗುಂಡೇಟು ಹಾರಿಸಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಹಾಸನದಲ್ಲಿ ಗುಂಡೇಟಿನಿಂದ ಇಬ್ಬರು ಮೃತಪಟ್ಟಿದ್ದಾರೆ.
ಹಾಸನದಲ್ಲಿ ಗುಂಡೇಟಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಹಾಸನ: ಹಾಸನ ನಗರವನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ವಹಿವಾಟಿನಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಲೇ ಜೋಡಿ ಸಾವು ಸಂಭವಿಸಿರಬಹುದು ಎಂದು ಶಂಕಿಸಿರುವ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ಕೈಗೊಂಡಿದ್ದಾರೆ. ಹಾಸನದ ಹೊಯ್ಸಳ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದ ಗುಂಡಿನ ದಾಳಿ ವೇಳೆ ಹಾಸನದ ಆಡುವಳ್ಳಿಯ ಶರಾಫತ್‌ ಅಲಿ (52) ಹಾಗೂ ಬೆಂಗಳೂರಿನ ಆಸೀಫ್‌ (46) ಎಂಬವರು ಮೃತಪಟ್ಟಿದ್ದರು. ಇದರಲ್ಲಿ ಒಬ್ಬರದ್ದು ಕೊಲೆ ಮತ್ತೊಬ್ಬರದ್ದು ಆತ್ಮಹತ್ಯೆ ಎನ್ನುವ ಅನುಮಾನಗಳನ್ನು ವ್ಯಕ್ತಪಡಿಸಲಾಗಿತ್ತು.

ಮೂಲತಃ ದೆಹಲಿಯವರಾಗಿದ್ದ ಶರಾಫತ್ ಅಲಿ ಹಾಸನದ ಆಡುವಳ್ಳಿಯಲ್ಲಿ ನೆಲೆಸಿದ್ದರು. ಅದೇ ರೀತಿ ಬೆಂಗಳೂರಿನ ಆಸೀಫ್ ಇಬ್ಬರೂ ಸ್ನೇಹಿತರು. ಹಲವು ವರ್ಷಗಳಿಂದ ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರತರಾಗಿದ್ದರು. ಇಬ್ಬರ ಶವಗಳು ಹಾಸನದಲ್ಲಿ ಪತ್ತೆಯಾಗಿದ್ದವು.

ಟ್ರೆಂಡಿಂಗ್​ ಸುದ್ದಿ

ಹಾಸನದ ಹೊಯ್ಸಳ ನಗರಕ್ಕೆ ಕಾರಿನಲ್ಲಿ ಬಂದಿದ್ದರು. ಕೆಲವೇ ಕ್ಷಣದಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಎರಡು ಬಾರಿ ಗುಂಡಿನ ಸದ್ದು ಕೇಳಿಸಿದ್ದರಿಂದ ಜನ ಭಯಭೀತರಾಗಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಮನಿಸಿದಾಗ ಇಬ್ಬರೂ ಗುಂಡೇಟಿನಿಂದಲೇ ಮೃತಪಟ್ಟಿರುವುದು ಕಂಡು ಬಂದಿತ್ತು.

ಸ್ಥಳ ಮಹಜರು ನಡೆಸಿದಾಗ ಒಬ್ಬಾತ ಗುಂಡೇಟಿನಿಂದ ಹೊಡೆದು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದರಲ್ಲಿ ಆಸೀಫ್‌ ಎಂಬಾತನೇ ಶರಾಫತ್‌ಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿತ್ತು. ಕಾರಿನಲ್ಲಿಯೇ ಇದ್ದ ಪಿಸ್ತೂಲ್‌ ಅನ್ನು ವಶಪಡಿಸಿಕೊಂಡು ಮೃತರ ದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದರು. ಬೇರೆ ಯಾರದರೂ ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆಯೋ ಎನ್ನುವುದು ಸೇರಿದಂತೆ ಪೊಲೀಸರು ಕುಟುಂಬದವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನಿವೇಶನ ನೋಡಲು ಮಧ್ಯಾಹ್ನದ ವೇಳೆಗೆ ಕಾರಿನಲ್ಲಿ ಇಬ್ಬರು ಆಗಮಿಸಿದ್ದರು. ಈ ವೇಳೆ ಭಾರೀ ಗುಂಡಿನ ಶಬ್ದ ಕೇಳಿ ಬಂದಿದೆ. ಅಕ್ಕಪಕ್ಕದವರು ಹೊರಗೆ ಬಂದು ನೋಡಿದ್ದಾರೆ. ಆಗ ಒಂದು ಶವ ಹೊರಗಡೆ ಬಿದ್ದಿದ್ದರೆ ಇನ್ನೊಂದು ಶವ ಕಾರಿನಲ್ಲಿರುವುದು ಕಂಡು ಬಂದಿತ್ತು.ಇದು ಮೇಲ್ನೋಟಕ್ಕೆ ವ್ಯವಹಾರದಲ್ಲಿ ಆಗಿರುವ ಭಿನ್ನಾಭಿಪ್ರಾಯಗಳಿಂದ ನಡೆದ ಘಟನೆಯಂತೆ ಕಾಣುತ್ತಿದೆ. ಕಾರಿನೊಳಗೆ ಕೂತಿರುವ ವೇಳೆಯೇ ಗುಂಡು ಹಾರಿಸಿರುವುದು ದೇಹಗಳು ಬಿದ್ದಿರುವುದನ್ನು ಗಮನಿಸಿದಾಗ ಅನ್ನಿಸುತ್ತಿದೆ. ಆಸೀಫ್‌, ಶರಾಫತ್‌ ಅಲಿಗೆ ಗುಂಡು ಹೊಡೆದಿದ್ದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ತನಿಖೆಯಿಂದ ತಿಳಿದುಬಂದಿದ್ದು,. ವಿಚಾರಣೆ ಮುಂದುವರಿದಿದೆ ಎಂದು ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

ಗುಂಡೇಟು ಬಿದ್ದ ನಂತರ ಸಿಕ್ಕಿರುವ ಗನ್‌ ಆಸೀಫ್‌ ಅವರದ್ದಾಗಿದ್ದು, ಕಾರು ಶರಾಫತ್ ಅಲಿ ಅವರಿಗೆ ಸೇರಿದ್ದು ಎನ್ನುವುದು ಗೊತ್ತಾಗಿದೆ. ಕಾರು ಮೈಸೂರು ನೋಂದಣಿ ಹೊಂದಿದ್ದು, ಅದನ್ನು ಮಾರಾಟ ಮಾಡಲಾಗಿದೆಯೇ, ಯಾಕೆ ಇಲ್ಲಿಗೆ ಬಂದು ಕೃತ್ಯ ಎಸಗಿದರು ಎನ್ನುವ ಕುರಿತೂ ತನಿಖೆ ನಡೆದಿದೆ.