Ambari Arjuna Death: ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣ: ಕಾಡಾನೆ ಸೆರೆ ವೇಳೆ ಸಂಘರ್ಷದಲ್ಲಿ ಸಾವು
ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಭಾರೀ ಗಾತ್ರದ ಆನೆ ಅರ್ಜುನ ಮತ್ತೊಂದು ಆನೆಯಿಂದ ತಿವಿತಕ್ಕೊಳಗಾಗಿ ಮೃತಪಟ್ಟಿದೆ.
ಹಾಸನ: ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣಕ್ಕೀಡಾಗಿದೆ.
ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಅರ್ಜುನ ಆನೆ ಮೃತಪಟ್ಟಿದೆ.
64 ವರ್ಷದ ಅರ್ಜುನ ಆನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ಇತ್ತು. ಅಂಬಾರಿ ಹೊರುವುದರಿಂಧ ನಾಲ್ಕು ವರ್ಷದ ಹಿಂದೆ ನಿವೃತ್ತಿ ನೀಡಲಾಗಿತ್ತು. ಅಂಬಾರಿ ಹೊರದೇ ಇದ್ದರೂ ದಸರೆಯಲ್ಲಿ ಭಾಗಿಯಾಗುತ್ತಿತ್ತು. ಈ ಬಾರಿಯೂ ನಿಶಾನೆ ಆನೆಯಾಗಿ ಕಾರ್ಯ ನಿರ್ವಹಿಸಿತ್ತು. ನಂತರ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆಯನ್ನು ತೊಡಗಿಸಿಕೊಳ್ಳಲಾಗುತ್ತಿತ್ತು. ಈಗ ಆನೆ ಸೆರೆ ಕಾರ್ಯಾಚರಣೆ ವೇಳೆಯೇ ಹಾಸನ ಜಿಲ್ಲೆ ಎಸಳೂರು ಬಳಿ ಸೋಮವಾರ ಮಧ್ಯಾಹ್ನ ಮೃತಪಟ್ಟಿದೆ.
ಹತ್ತು ದಿನದಿಂದ ಹಾಸನ ಜಿಲ್ಲೆಯಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಐದು ಆನೆಗಳನ್ನು ಸೆರೆ ಹಿಡಿದಿದ್ದೇವೆ. ಎಲ್ಲಾ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಇತ್ತು. ಸೋಮವಾರ ಬೆಳಗ್ಗೆ ಸಕಲೇಶಪುರ ತಾಲ್ಲೂಕು ಎಸಳೂರಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಶುರುವಾಗಿತ್ತು. ಈ ವೇಳೆ ದುರಂತ ನಡೆದಿದೆ. ಅರ್ಜುನ ಆನೆ ಮೃತಪಟ್ಟಿರುವುದು ನಿಜ ಎಂದು ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವಿಶಂಕರ್ ಖಚಿತಪಡಿಸಿದರು.
ಮದ ಗಜಗಳ ಕಾದಾಟ
ಆನೆಗಳ ಕಾದಾಟವನ್ನು ಮದಗಜಗಳಿಗೆ ಹೋಲಿಸಲಾಗುತ್ತದೆ. ಹಾಸನ ಜಿಲ್ಲೆಯಲ್ಲಂತೂ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಈ ಆನೆಗಳ ಸೆರೆಗೆ ಈಗಾಗಲೇ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಬೇಲೂರು, ಆಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆದಿದೆ. ಹತ್ತು ದಿನದಿಂದ ಅರ್ಜುನ ಆನೆಯನ್ನೂ ಕಾರ್ಯಾಚರಣೆಗೆ ಕರೆದುಕೊಂಡು ಹೋಗಲಾಗಿತ್ತು. ಎಸಳೂರು ಬಳಿ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದ್ದ ಒಂಟಿ ಸಲಗದ ಕಾರ್ಯಾಚರಣೆ ಶುರುವಾಗಿತ್ತು. ಈ ವೇಳೆ ಆನೆಯ ಹತ್ತಿರ ತೆರಳಿದ ಅರ್ಜುನ ಅದನ್ನು ನಿಯಂತ್ರಿಸಲು ಮುಂದಾಗಿದೆ. ಈ ವೇಳೆ ಆನೆ ಮಾವುತ ಮಹೇಶ ನೀಡಿದ ಸೂಚನೆಯಂತೆ ಒಂಟಿ ಸಲಗ ಹಿಮ್ಮೆಟ್ಟಿಸುವ ಕಾಳಗವೇ ನಡೆದಿದೆ. ಆಗ ಬಲಶಾಲಿಯಾಗಿದ್ದ ಒಂಟಿ ಸಲಗ ಹೊಟ್ಟೆ, ಪಕ್ಕೆಯ ಭಾಗಕ್ಕೆ ತಿವಿದಿದ್ದರಿಂದ ಕುಸಿದು ಬಿದ್ದಿದೆ. ರಕ್ತಸ್ರಾವವಾಗಿ ಅರ್ಜುನ ಮೃತಪಟ್ಟಿದೆ.
ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದಿದ್ದೆವು. ಮೊದಲು ಅರ್ಜುನ ಕಾಡಾನೆಯನ್ನು ಹಿಮ್ಮೆಟಿಸಿತು. ಆನಂತರ ಅದು ಏಕಾಏಕಿ ನುಗ್ಗಿದ್ದರಿಂದ ಏನು ಮಾಡಲು ಆಗದ ಸ್ಥಿತಿ ನಿರ್ಮಾಣವಾಯಿತು. ಬಲಶಾಲಿ ಅರ್ಜುನನ ಮೇಲೆ ದಾಳಿ ಮಾಡಿತು. ಆಗ ಅರ್ಜುನ ಕುಸಿದು ಬಿದ್ದು ಅಲ್ಲಿಯೇ ಜೀವ ಬಿಟ್ಟಿತು ಎಂದು ಆನೆಯೊಂದಿಗೆ ಇದ್ದ ಸಿಬ್ಬಂದಿ ಅಲ್ಲಿನ ಪರಿಸ್ಥಿತಿ ವಿವರಿಸಿದರು.
ಅರ್ಜುನ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೆಲ ವರ್ಷದ ಹಿಂದೆ ದ್ರೋಣ ಎಂಬ ಆನೆ ವಿದ್ಯುತ್ ತಂತಿ ತಗುಲಿ ಕಾಡಿನಲ್ಲಿ ಮೃತಪಟ್ಟಿತ್ತು. ಇದೂ ಅಂಬಾರಿ ಹೊತ್ತ ಆನೆ. ಆನಂತರ ಶ್ರೀರಾಮ ಎಂಬ ಆನೆ ಸಂಗಾತಿ ಗಜೇಂದ್ರ ಆನೆ ತಿವಿತದಿಂದ ಮೃತಪಟ್ಟಿತ್ತು. ಗೋಪಾಲಸ್ವಾಮಿ ಎಂಬ ಆನೆಯೂ ಇದೇ ರೀತಿ ದುರಂತವಾಗಿ ಆಂತ್ಯ ಕಂಡಿತ್ತು. ಅಂಬಾರಿ ಹೊತ್ತಿದ್ದ ಬಲರಾಮನಿಗೆ ಕಳೆದ ವರ್ಷ ಗುಂಡೇಟು ತಗುಲಿ ಆನಂತರ ಮೃತಪಟ್ಟಿತ್ತು. ಈಗ ಮತ್ತೊಂದು ಆನೆ ಅರ್ಜುನನ ದುರಂತ ಅಂತ್ತವಾಗಿದೆ.
ವಿಭಾಗ