ಹಾಸನ ಡಿವೈಎಸ್‌ಪಿ ಖಾತೆಗಳಿಂದ 16 ಲಕ್ಷ ರೂ. ದೋಚಿದ ಕಳ್ಳರು; ಮತ್ತೊಂದು ಪ್ರಕರಣದಲ್ಲಿ ಶಿಕ್ಷಕಿಯ ಜಿಪಿಎಫ್ ಲೋನ್‌ಗೆ ಕನ್ನ
Hassan Crime News: ಹಾಸನದಲ್ಲಿ ನಡೆದ 3 ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ಕಳೆದುಕೊಂಡಿದ್ದಾರೆ. ಹಾಸನ ಡಿವೈಎಸ್‌ಪಿ ಮುರಳೀಧರ್ ಎಂಬುವರ ಎರಡು ಖಾತೆಗಳಿಂದ ಕಳ್ಳರು 16 ಲಕ್ಷ ರೂ ಹಣವನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷಕಿಯ ಜಿಪಿಎಫ್ ಲೋನ್ ಹಣವನ್ನು ಕೂಡಾ ಕದಿಯಲಾಗಿದೆ.

ಹಾಸನ: ಕಳ್ಳರನ್ನು ಹಿಡಿಯುವ ಪೊಲೀಸ್ ಅಧಿಕಾರಿ ಬ್ಯಾಂಕ್ ಖಾತೆಯಿಂದಲೇ 16 ಲಕ್ಷ ರೂ. ಹಣ ದೋಚಿರುವ ಘಟನೆ ಹಾಸನದಲ್ಲಿ ನಡೆದಿದೆ. ಘಟನೆ ಸಂಬಂಧ ಹಣ ಕಳೆದುಕೊಂಡ ಡಿವೈಎಸ್‌ಪಿ ಮುರಳೀಧರ್, ಹಾಸನದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಡಿವೈಎಸ್‌ಪಿ ಖಾತೆಯಿಂದ 15 ಲಕ್ಷ ಹಣ ಕಳ್ಳತನ
ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮುರಳೀಧರ್, ಭಾಗಮಂಡಲ ಹಾಗೂ ಮಡಿಕೇರಿಯ ಕೆನರಾ ಬ್ಯಾಂಕ್ ಶಾಖೆಗಳಲ್ಲಿ 2 ಅಕೌಂಟ್ ಹೊಂದಿದ್ದಾರೆ. ಆದರೆ ಮೇ 20 ರಂದು ಅವರ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಶಾಕ್ ಆಗಿದ್ದಾರೆ. ಮಡಿಕೇರಿ ಅಕೌಂಟ್‌ನಿಂದ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ 25 ಬಾರಿ ವರ್ಗಾವಣೆ ಮಾಡಿರುವ ಕಳ್ಳರು ಒಟ್ಟು 12,10,711 ರೂ. ಹಣವನ್ನು ದೋಚಿದ್ದಾರೆ. ಅದೇ ರೀತಿ ಭಾಗಮಂಡಲ ಶಾಖೆಯಿಂದ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ 10 ಬಾರಿ ಟ್ರಾನ್ಸಾಕ್ಷನ್ ಮಾಡಿರುವ ಖದೀಮರು 3,88,050 ರೂ. ಹಣ ಕದ್ದಿದ್ದಾರೆ. ಮುರಳೀಧರ್ ಅವರ ಎರಡೂ ಖಾತೆಗಳಿಂದ ಒಟ್ಟು 15,98,761 ರೂ. ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ತಮ್ಮ ಮೊಬೈಲ್‌ಗೆ ಒಂದೇ ಸಮಯ ಈ ರೀತಿ ಮೆಸೇಜ್ ಬರುತ್ತಿದ್ದನ್ನು ಗಮನಿಸಿದ ಡಿವೈಎಸ್‌ಪಿ ಮುರಳೀಧರ್ ಗಾಬರಿ ಆಗಿದ್ಧಾರೆ. ಕೂಡಲೇ ಅವರು ಹಾಸನದ ಸಿಇಎನ್ ಠಾಣೆಗೆ ದೂರು ನೀಡಿ ಕಳ್ಳರನ್ನು ಆದಷ್ಟು ಬೇಗ ಪತ್ತೆ ಮಾಡಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಹುಡುಕಲು ಆರಂಭಿಸಿದ್ದಾರೆ.
ಶಿಕ್ಷಕಿಯೊಬ್ಬರ ಜಿಪಿಎಫ್ ಲೋನ್‌ಗೆ ಕನ್ನ
ಮತ್ತೊಂದು ಪ್ರಕರಣದಲ್ಲಿ ಜಿಪಿಎಫ್ ಲೋನ್ ಮಾಡಿಸಿದ್ದ ಶಿಕ್ಷಕಿಯೊಬ್ಬರ ಅಕೌಂಟ್‌ಗೆ ಸಂಜೆ ವೇಳೆಗೆ 10 ಲಕ್ಷ ರೂ. ಹಣ ಜಮೆ ಆಗಿದೆ. ಆದರೆ ಮರುದಿನ ಎರಡು ಬಾರಿಯಂತೆ 5 ಲಕ್ಷ ಕಡಿತವಾಗಿದೆ. ನಿನ್ನೆ ಬಂದ ಹಣ ಇಂದು ಖಾಲಿಯಾಗಿದೆ. ಈ ವಿಚಾರವನ್ನು ಮಮತಾ ಅರಸೀಕೆರೆ ಎಂಬ ಫೇಸ್‌ಬುಕ್ ಯೂಸರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಮಧ್ಯಮ ವರ್ಗದ ಶಿಕ್ಷಕ ಸಮೂಹಕ್ಕೆ ಸಾವಿರ ರೂಪಾಯಿಯೂ ಬಹು ದೊಡ್ಡ ಮೊತ್ತ. ಪ್ರತಿ ದಿನ ಲಕ್ಷಾಂತರ ರೂ ಕಳವಾಗುತ್ತಿರುವ ಸುದ್ದಿ ಬರುತ್ತಲೇ ಇದೆ. ನಾವು ಲೊಚಗುಟ್ಟಿ ಸುಮ್ಮನಾಗುತ್ತೇವೆ. ನಿಮ್ಮ ಹಣಕ್ಕೆ , ನಿಮ್ಮ ಪ್ರಾಣಕ್ಕೆ , ನಿಮ್ಮ ಮಾನಘನತೆಗೆ ನೀವೇ ಜವಾಬ್ದಾರರು ಎಂದು ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಶಾಪಿಂಗ್ ವಂಚನೆ
3ನೇ ಪ್ರಕರಣದಲ್ಲಿ ಮಿಶೋ ಆನ್‌ಲೈನ್ ಶಾಪಿಂಗ್ ಆಪ್ ಹೆಸರಿನಲ್ಲಿ ಕಳ್ಳರು ವ್ಯಕ್ತಿಯೊಬ್ಬರಿಂದ 11 ಲಕ್ಷ ಕದ್ದಿದ್ದಾರೆ. ಚನ್ನರಾಯಪಟ್ಟಣದ ಪುಷ್ಪಲತಾ ಎಂಬುವರಿಗೆ ಬಂದಿರುವ ಪತ್ರದಲ್ಲಿ ಮಿಶೋ ಗ್ರಾಹಕರಿಗಾಗಿ ಆಯೋಜಿಸಲಾಗಿದ್ದ ಲಕ್ಕಿ ಡಿಪ್‌ನಲ್ಲಿ ಮೊದಲ ಬಹುಮಾನವಾಗಿ 15 ಲಕ್ಷ ರೂ. ಗೆದ್ದಿದ್ದು ವಿವರ ಕಳಿಸಿಕೊಡುವಂತೆ ಕೇಳಲಾಗಿದೆ. ಅದನ್ನು ನಂಬಿದ ಪುಷ್ಪಲತಾ, ಪತ್ರದಲ್ಲಿದ್ದ 6289845389 ನಂಬರಿಗೆ ಆಧಾರ್ ಕಾರ್ಡ್, ಎಸ್‌ಬಿಐ ಬ್ಯಾಂಕ್ ಡೀಟೆಲ್ಸ್ ಎಲ್ಲವನ್ನೂ ಕಳಿಸಿಕೊಟ್ಟಿದ್ದಾರೆ. ನಂತರ ರಾಘವೇಂದ್ರ ಹೆಸರಿನ ವ್ಯಕ್ತಿಯೊಬ್ಬ ಕರೆ ಮಾಡಿ, ಅಷ್ಟು ಹಣ ಪಡೆಯಲು ಮೊದಲು ನೀವು ತೆರಿಗೆ ಕಟ್ಟಬೇಕು ಎಂದು ನಂಬಿಸಿದ್ದಾನೆ. ಅದನ್ನು ನಂಬಿ ಪುಷ್ಪಲತಾ ಆತ ಹೇಳಿದ ಅಕೌಂಟ್‌ಗೆ 11 ಲಕ್ಷ ರೂ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಬಹಳ ದಿನಗಳಾದ ನಂತರವೂ ಹಣ ವಾಪಸ್ ಬಾರದಿದ್ದಾಗ ಅನುಮಾನಗೊಂಡು ಚನ್ನರಾಯ ಪಟ್ಟಣದ ನುಗ್ಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
