Hassan Sex Scandal; ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನದ ಸುತ್ತಮುತ್ತ,10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal; ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನದ ಸುತ್ತಮುತ್ತ,10 ಮುಖ್ಯ ಅಂಶಗಳು

Hassan Sex Scandal; ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನದ ಸುತ್ತಮುತ್ತ,10 ಮುಖ್ಯ ಅಂಶಗಳು

ಹಾಸನ ಲೈಂಗಿಕ ಹಗರಣ (Hassan Sex Scandal)ದಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ ಶನಿವಾರ ಬಂಧಿಸಿದೆ. ನ್ಯಾಯಾಲಯವು ಅವರನ್ನು ಮೇ 8 ರ ತನಕ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿದೆ. ಹೆಚ್ ಡಿ ರೇವಣ್ಣ ವಿರುದ್ಧ ಮನೆಗೆಲಸದ ಮಹಿಳೆಗೆ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತೆಯ ಅಪಹರಣ ಕೇಸ್ ಕೂಡ ಇದೆ. ಈವರೆಗಿನ 10 ಮುಖ್ಯ ಅಂಶಗಳು ಹೀಗಿವೆ.

ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನ. (ಕಡತ ಚಿತ್ರ)
ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನ. (ಕಡತ ಚಿತ್ರ) (ANI)

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal) ಕೇಸ್‌ನಲ್ಲಿ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಅಪಹರಣ ಕೇಸ್‌ನಲ್ಲಿ ಅವರ ತಂದೆ ಶಾಸಕ ಎಚ್ ಡಿ ರೇವಣ್ಣ ಅವರ ಬಂಧನವಾಗಿದ್ದು, ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಬಹಿರಂಗವಾದ ಬೆನ್ನಿಗೆ, ಅಪ್ಪ-ಮಗನ ವಿರುದ್ಧ ಮನೆಗೆಲಸದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಈ ಕೇಸ್‌ನಲ್ಲಿ ಹೆಚ್ ಡಿ ರೇವಣ್ಣ ಅವರೇ ಮೊದಲ ಆರೋಪಿ. ಪ್ರಜ್ವಲ್ ರೇವಣ್ಣ ಎರಡನೇ ಆರೋಪಿ.

ಈ ಕೇಸ್ ದಾಖಲಾದ ಬಳಿಕ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡ, ಪ್ರಜ್ವಲ್ ರೇವಣ್ಣ ಮತ್ತು ಹೆಚ್‌ ಡಿ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಲ್ಲದೆ, ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಪ್ರಜ್ವಲ್ ರೇವಣ್ಣ ಬೆನ್ನಿಗೆ ನಿಂತಿದ್ದ ಹೆಚ್ ಡಿ ರೇವಣ್ಣ, ಪ್ರಜ್ವಲ್ ವಿಚಾರಣೆಗೆ ಹಾಜರಾಗುತ್ತಾನೆ ಎಂದು ಹೇಳಿದ್ದಲ್ಲದೆ, ಆತ ಕೆಲಸದ ನಿಮಿತ್ತ ಜರ್ಮನಿಗೆ ಹೋಗಿದ್ದಾನೆ ಎಂದಿದ್ದರು. ಈಗ ಬಂಧನಕ್ಕೆ ಒಳಗಾಗಿರುವ ಎಚ್ ಡಿ ರೇವಣ್ಣ ಅವರು ಈ ಕೇಸ್, ಬಂಧನ ಎಲ್ಲವೂ ರಾಜಕೀಯ ಪಿತೂರಿ ಎಂದು ಹೇಳತೊಡಗಿದ್ದಾರೆ.

ಹೆಚ್ ಡಿ ರೇವಣ್ಣ ಕೇಸ್ - ಇದುವರೆಗೆ ಏನೇನಾಯಿತು

1) ಹಾಸನ ಲೈಂಗಿಕ ಹಗರಣ ಕೇಸ್‌ನಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗದ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪದ್ಮನಾಭನಗರ ನಿವಾಸದಿಂದ ಬಂಧಿಸಲಾಗಿದೆ. ಭಾನುವಾರ (ಮೇ5) ಸಂಜೆ ನ್ಯಾಯಾಧೀಶ ಎದುರು ಹಾಜರುಪಡಿಸಲಾಗಿತ್ತು.

2) ಎಚ್ ಡಿ ರೇವಣ್ಣ ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿದ್ದ ಸಂತ್ರಸ್ತೆಯನ್ನೇ ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿ. ಸಂತ್ರಸ್ತೆ ರೇವಣ್ಣ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಾಕೆ. ಆಕೆಯ ಪುತ್ರ ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದು, ಇದರಲ್ಲಿ ರೇವಣ್ಣ ಮತ್ತು ಅವರ ಆಪ್ತ ಸತೀಶ್ ಬಾಬು ಮೊದಲ ಮತ್ತು ಎರಡನೇ ಆರೋಪಿ.

3) ಸತೀಶ್ ಬಾಬು ಅವರನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸತೀಶ್ ಬಾಬು ಸಂತ್ರಸ್ತೆ ಮಹಿಳೆಯನ್ನು ಆಕೆಯ ಮನೆಯಿಂದ ರೇವಣ್ಣ ಸಾಹೇಬ್ರು ಕರೆಯುತ್ತಿದ್ದಾರೆ ಎಂದು ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದ. ಈ ಕುರಿತು ಸಂತ್ರಸ್ತೆಯ ಪುತ್ರ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

4) ಈ ಪ್ರಕರಣ ದಾಖಲಾದ ನಂತರವೂ ರೇವಣ್ಣ ಅವರು ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶನಿವಾರ ಸಂಜೆ ಎಸ್‌ಐಟಿ ಅಧಿಕಾರಿಗಳ ತಂಡ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸದಿಂದ ಎಚ್‌ ಡಿ ರೇವಣ್ಣ ಅವರನ್ನು ಬಂಧಿಸಿದ್ದರು. ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ರೇವಣ್ಣ ಅವರನ್ನು ಮೇ 8 ರ ತನಕ ಎಸ್‌ಐಟಿ ಕಸ್ಟಡಿ ವಿಧಿಸಿದ್ದಾರೆ.

ಎಚ್ ಡಿ ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿದ ನ್ಯಾಯಾಧೀಶರು

5) ಅಪಹರಣಕ್ಕೆ ಒಳಗಾಗಿ ಅಕ್ರಮ ಬಂಧನದಲ್ಲಿದ್ದ ಪ್ರಮುಖ ಸಂತ್ರಸ್ತೆಯನ್ನು ರಕ್ಷಿಸಿರುವ ಪೊಲೀಸರು, ಸಂಚು ರೂಪಿಸಿದ ಎಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು ಎಂದು 15 ಅಂಶಗಳ ಪಟ್ಟಿಯನ್ನು ಸಲ್ಲಿಸಿದ ಎಸ್‌ಐಟಿ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

6) ಎಸ್‌ಐಟಿ ಅಧಿಕಾರಿಗಳು ವಿನಾಕಾರಣ ನಮ್ಮ ಕಕ್ಷಿದಾರ ಹೆಚ್ ಡಿ ರೇವಣ್ಣ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಪುರಾವೆಗಳು ಇಲ್ಲದಿದ್ದರೂ, ಕೃತ್ಯ ಒಪ್ಪಿಕೊಳ್ಳಬೇಕು ಎಂದು ಪೀಡಿಸುತ್ತಿದ್ದಾರೆ. ಇದಲ್ಲದೆ, ಕಕ್ಷಿದಾರರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಸೂಕ್ತ ಚಿಕಿತ್ಸೆ ಅಗತ್ಯ ಇದ್ದು, ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ನೀಡಬಾರದು ಎಂದು ರೇವಣ್ಣ ಪರ ವಕೀಲರು ವಾದಿಸಿದ್ದರು.

7) ಬೌರಿಂಗ್ ಆಸ್ಪತ್ರೆ ಪುರಾವೆಯೇ ಇಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದು, ರಾಜಕೀಯ ಷಡ್ಯಂತ್ರ. 4 ದಶಕಗಳ ರಾಜಕಾರಣದಲ್ಲಿ ಯಾವುದೇ ಆಪಾದನೆಗಳು ಎದುರಾಗಿರಲಿಲ್ಲ. ಈಗ ದುರುದ್ದೇಶದೊಂದಿಗೆ ಏಪ್ರಿಲ್ 28ಕ್ಕೆ ದೂರು ದಾಖಲಿಸಿದರು. ಪುರಾವೆ ಇಲ್ಲದೇ ಇದ್ದರೂ ಮೇ 2ಕ್ಕೆ ಅಪಹರಣ ಕೇಸ್ ದಾಖಲಿಸಲಾಗಿದೆ ಎಂದು ಎಚ್ ಡಿ ರೇವಣ್ಣ ಆರೋಪಿಸಿದ್ದಾರೆ.

8) ಅಪಹರಣ ಕೇಸ್ ದಾಖಲಾದ ಬೆನ್ನಿಗೆ ಎಚ್ ಡಿ ರೇವಣ್ಣ ಅವರು ಮನೆಯಲ್ಲಿ ಪೂಜೆ ನಡೆಸಿದ್ದರು, ಬಳಿಕ ವಾಡಿಕೆಯಂತೆ ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡೇ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಈಗ ಎಸ್‌ಐಟಿ ವಶದಲ್ಲಿದ್ದರೂ ನಿಂಬೆ ಹಣ್ಣು ಹಿಡಿದುಕೊಂಡಿರುವುದು ಗಮನಸೆಳೆದಿದೆ.

9) ಪ್ರಕರಣದ ಹಿನ್ನೆಲೆ ಗಮನಿಸುವುದಾದರೆ, ಏಪ್ರಿಲ್ ಕೊನೆಯ ವಾರದಲ್ಲಿ ಜೆಡಿಎಸ್ ಶಾಸಕ ಹೆಚ್‌ ಡಿ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲು. ಮನೆಗೆಲಸದ ಮಹಿಳೆಯೊಬ್ಬರು 2019ರಿಂದ 2022ರ ನಡುವೆ ಅಪ್ಪ-ಮಗ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರು ನೀಡಿದರು. ಇದರಂತೆ, ಪೊಲೀಸರು ಎಫ್‌ಐಆರ್ ದಾಖಲಿಸಿದರು.

10) ಇದಕ್ಕೂ ಮೊದಲು ಏಪ್ರಿಲ್ 26ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲ ದಿನಗಳ ಮೊದಲು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಬಹಿರಂಗವಾಗಿದೆ. ಇದಾಗಿ ಕೇಸ್ ದಾಖಲಾಗುತ್ತಲೇ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡರು. ಈ ಪೆನ್‌ಡ್ರೈವ್ ಹಗರಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಸದ್ದುಮಾಡಿತ್ತು. ಬಳಿಕ ಪ್ರಜ್ವಲ್ ರೇವಣ್ಣ ತಮ್ಮ ಚಾಲಕ ಕಾರ್ತಿಕ್ ಆ ವಿಡಿಯೋ ಬಿಡುಗಡೆ ಮಾಡದಂತೆ ತಡೆಯಾಜ್ಞೆ ಪಡೆದಿದ್ದರು.

Whats_app_banner