Hassan Scandal: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ, ಕೇಸ್‌ನ 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ, ಕೇಸ್‌ನ 5 ಮುಖ್ಯ ಅಂಶಗಳು

Hassan Scandal: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ, ಕೇಸ್‌ನ 5 ಮುಖ್ಯ ಅಂಶಗಳು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನವಾಗಿದೆ. ಹಾಸನ ಪೆನ್‌ಡ್ರೈವ್ ಕೇಸ್‌ ಜೊತೆಗೆ ದೇವರಾಜೇ ಗೌಡರ ವಿರುದ್ಧವೇ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಈ ಕೇಸ್‌ನ 5 ಮುಖ್ಯ ಅಂಶಗಳು ಇಲ್ಲಿವೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ) ಅಶ್ಲೀಲ ವಿಡಿಯೋ ಪ್ರಕರಣ ಕೇಸ್‌ನಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ (ಎಡ ಚಿತ್ರ) ಬಂಧನವಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ) ಅಶ್ಲೀಲ ವಿಡಿಯೋ ಪ್ರಕರಣ ಕೇಸ್‌ನಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ (ಎಡ ಚಿತ್ರ) ಬಂಧನವಾಗಿದೆ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋ ಲೀಕ್ ಮಾಡಿದ ಆರೋಪಕ್ಕಿಂತಲೂ ಹೆಚ್ಚಾಗಿ, ಅವರ ವಿರುದ್ಧವೇ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿರುವುದು ಬಂಧನಕ್ಕೆ ಹೆಚ್ಚು ಬಲವನ್ನು ಒದಗಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಗೂಳಿಹಾಳ ಟೋಲ್ ಗೇಟ್ ಬಳಿ ದೇವರಾಜೇಗೌಡರನ್ನು ಬಂಧಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವಿಚಾರ ಬಹಿರಂಗವಾಗಿತ್ತು. ಅವರು ಅದನ್ನು ಬಹಿರಂಗಪಡಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆಯನ್ನೂ ತಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿ.ದೇವರಾಜೇ ಗೌಡ ಸ್ಪರ್ಧಿಸಿದ್ದರು.

ಲೈಂಗಿಕ ದೌರ್ಜನ್ಯದ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ, ಕೇಸ್‌ನ 5 ಮುಖ್ಯ ಅಂಶಗಳು

1) ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ವಿರುದ್ಧ ಮಹಿಳೆಯೊಬ್ಬರು ಏಪ್ರಿಲ್ 1ರಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಇದರ ನಡುವೆ ಹಾಸನ ಪೆನ್‌ಡ್ರೈವ್ ಕೇಸ್‌ನಲ್ಲೂ ದೇವರಾಜೇಗೌಡ ಅವರು ಅದನ್ನು ಬಹಿರಂಗಪಡಿಸಿದ ಆರೋಪ ಎದುರಿಸುತ್ತಿದ್ದಾರೆ.

2) ನಿವೇಶನ ಒಂದರ ಮಾರಾಟಕ್ಕೆ ಸಂಬಂಧಿಸಿ ವಕೀಲ ದೇವರಾಜೇಗೌಡ ಅವರನ್ನು ಸಂಪರ್ಕ ಮಾಡಿದ್ದ ಮಹಿಳೆ ಈ ದೂರು ನೀಡಿದ್ದು, ತನ್ನನ್ನು ಹೆದರಿಸಿ ಬೆದರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ವಿಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

3) ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಕೇಸ್ ಇದಾಗಿದ್ದು, ಈ ಕೇಸ್‌ನಲ್ಲಿ ಬಂಧನದ ಭೀತಿ ಎದುರಾದ ಕಾರಣ ಜಿ. ದೇವರಾಜೇಗೌಡ ಅವರು ಹಾಸನ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಕೋರ್ಟ್‌ ಮೇ 15ಕ್ಕೆ ಮುಂದೂಡಿತ್ತು.

4) ಸಂತ್ರಸ್ತೆ ಮತ್ತು ಆಕೆಯ ಪತಿಯ ವಿರುದ್ಧ ಹನಿಟ್ರ್ಯಾಪ್ ಆರೋಪ ಹೊರಿಸಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ವಕೀಲ ಜಿ.ದೇವರಾಜೇಗೌಡ ದೂರು ದಾಖಲಿಸಿದ್ದಾರೆ ಎಂದು ವರದಿಗಳು ಹೇಳಿವೆ. ಪೊಲೀಸರು ಈ ವರೆಗೂ ಜಿ.ದೇವರಾಜೇಗೌಡ ಬಂಧನದ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

5) ಈ ನಡುವೆ, ಹಾಸನ ಪೆನ್‌ಡ್ರೈವ್ ಕೇಸ್‌ಗೆ ಸಂಬಂಧಿಸಿ ವಕೀಲ ದೇವರಾಜೇಗೌಡ ವಿರುದ್ಧ ಕರ್ನಾಟಕ ವಕೀಲ ಪರಿಷತ್ತಿನಲ್ಲಿ ದೂರು ದಾಖಲಾಗಿದೆ. ವಕೀಲ ಸೂರ್ಯ ಮುಕುಂದರಾಜ್‌ ಎಂಬುವವರು ಈ ದೂರು ನೀಡಿದ್ದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಚಾಲಕ ಕಾರ್ತಿಕ್ ರೆಡ್ಡಿ ಕಕ್ಷಿದಾರನಾಗಿ ಸಾಕ್ಷಿ ಎಂದು ಒದಗಿಸಿದ್ದ ಕೆಲ ಆಡಿಯೋ, ವಿಡಿಯೋ, ಫೋಟೋಗಳನ್ನು ದೇವರಾಜ್ ಬಹಿರಂಗ ಮಾಡಿದ್ದಾರೆ. ಒಂದೂವರೆ ವರ್ಷದಿಂದ ತಮ್ಮ ಬಳಿ ಇರಿಸಿಕೊಂಡು ಅಪರಾಧ ಎಸಗಿದ್ದಾರೆ. ಇದು ವಕೀಲರ ವೃತ್ತಿ ನಿಯಮಾನುಸಾರ ಭಾರತೀಯ ಅಧಿಸಾಕ್ಷಿ ಕಲಂ 126ರ ಉಲ್ಲಂಘನೆ‌‌ ಎಂದು ದೂರಿನಲ್ಲಿ ಪ್ರತಿಪಾದಿಸಿದ್ದಾರೆ.

Whats_app_banner