ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

ಭಾರತದ ಗಮನಸೆಳೆದ ಹಾಸನ ಲೈಂಗಿಕ ಹಗರಣ (Hassan Sex Scandal) ದಿನೇದಿನೆ ಹೊಸ ಹೊಸ ತಿರುವುಪಡೆಯುತ್ತಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ 10 ದಿನಗಳ ಮೇಲಾಯಿತು. ಹಾಗಾದರೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು ಹೀಗಿವೆ ಗಮನಿಸಿ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಚಿತ್ರದಲ್ಲಿರುವವರು) ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ನ ಮುಖ್ಯಾಂಶ. (ಕಡತ ಚಿತ್ರ)
ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಚಿತ್ರದಲ್ಲಿರುವವರು) ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ನ ಮುಖ್ಯಾಂಶ. (ಕಡತ ಚಿತ್ರ)

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal), ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಕರ್ನಾಟಕದ ವಿಶೇಷ ತನಿಖಾ ತಂಡದ ಮನವಿಯ ಮೇರೆಗೆ ಸಿಬಿಐ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಪತ್ತೆಗೆ ಎಸ್‌ಐಟಿ ತಂಡ ವಿಶೇಷ ಕಾರ್ಯಾಚರಣೆ ಶುರುಮಾಡಿದೆ. ರಾಜ್ಯದ ವಿಮಾನ ನಿಲ್ದಾಣ ಸೇರಿ ಎಲ್ಲ ಕಡೆಗಳಲ್ಲೂ ಪ್ರಜ್ವಲ್ ರೇವಣ್ಣ ಪತ್ತೆಗೆ ಶೋಧ ನಡೆಸಿದೆ.

ಟ್ರೆಂಡಿಂಗ್​ ಸುದ್ದಿ

ಏಪ್ರಿಲ್ 26ರಂದು ಮತದಾನಕ್ಕೆ ಕೆಲವು ದಿನಗಳ ಮುಂಚಿತವಾಗಿ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಬಹಿರಂಗವಾದ ನಂತರ ಪ್ರಜ್ವಲ್‌ ರೇವಣ್ಣ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದಾಗಿ, ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹೆಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಎರಡನೇ ಆರೋಪಿಯಾಗಿದ್ದರು.

ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಇತ್ತು. ಬಳಿಕ ಅಮೆರಿಕ ಎಂಬ ಮಾಹಿತಿ ಹರಿದಾಡಿತ್ತು. ಈಗ ದುಬೈನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಅವರು ಹಾಸನದಲ್ಲೇ ಇದ್ದಾರೆ ಎಂದೂ ವದಂತಿ ಹರಡಿದೆ. ಪ್ರಜ್ವಲ್ ರೇವಣ್ಣ ಬೆಂಗಳೂರಿಗಲ್ಲ, ಮಂಗಳೂರಿಗೆ ಬಂದು ನಂತರ ಶರಣಾಗುತ್ತಾರೆ ಎಂಬ ಊಹಾಪೋಹವೂ ಹರಡಿದೆ. ಒಟ್ಟಿನಲ್ಲಿ ಪ್ರಜ್ವಲ್ ಎಲ್ಲಿದ್ದಾರೆ ಎಂಬುದರ ನಿಖರ ಮಾಹಿತಿ ಬಹಿರಂಗವಾಗಿಲ್ಲ.

ಪ್ರಜ್ವಲ್ ರೇವಣ್ಣ ಕೇಸ್- ಇದುವರೆಗಿನ 10 ಅಂಶಗಳು

1) ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (ಏಪ್ರಿಲ್ 26) ದಿನದ ಆಸುಪಾಸಿನಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ 2019 ರಿಂದ 2022 ರ ನಡುವೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮನೆಗೆಲಸದ ಮಹಿಳೆ ದೂರು ನೀಡಿದ್ದರು. ಇದರಂತೆ, ಅಪ್ಪ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

2) ಇದೇ ಅವಧಿಯಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ 2950ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕು, ಫೋಟೋಗಳು ಬಹಿರಂಗವಾಗಿವೆ. ಪ್ರಜ್ವಲ್ ಪೆನ್‌ ಡ್ರೈವ್ ರಾಜಕೀಯವಾಗಿ ಸಂಚಲನ ಮೂಡಿಸಿದ್ದು, ಚುನಾವಣಾ ಪ್ರಚಾರದಲ್ಲಿ ಗಮನಸೆಳೆದಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತು. ಈ ತನಿಖಾ ತಂಡ ಮೂರು ಚಿಕ್ಕ ತಂಡಗಳಾಗಿ ವಿಭಜನೆಯಾಗಿ ಈ ಹಾಸನ ಲೈಂಗಿಕ ಹಗರಣ ಕೇಸ್‌ನ ತನಿಖೆ ನಡೆಸುತ್ತಿದೆ.

3) ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿ ಎಸ್‌ಐಟಿ ತಂಡ ಅಪ್ಪ-ಮಗನಿಗೆ ಮೇ 1ಕ್ಕೆ ವಿಚಾರಣೆಗೆ ಸಮನ್ಸ್ ಜಾರಿಗೊಳಿಸಿತ್ತು. ಅದಾಗಿ ಮೇ 2ಕ್ಕೆ ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತ್ತು.

4) ಪ್ರಜ್ವಲ್‌ ರೇವಣ್ಣ ಕುಟುಂಬ ಜೊತೆಗೆ ಸಂಪರ್ಕ ಇಟ್ಟುಕೊಳ್ಳದಂತೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಹಾಸನದ ಬಿಜೆಪಿ ನಾಯಕ ಜಿ.ದೇವರಾಜೇಗೌಡ ಅವರು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಬರೆದ ಪತ್ರ ವೈರಲ್ ಆಯಿತು. ಜಿ.ದೇವರಾಜೇ ಗೌಡ ಅವರು ಈ ಪೆನ್‌ಡ್ರೈವ್ ಅನ್ನು ರೇವಣ್ಣ ಮನೆಯ ಮಾಜಿ ಕಾರುಚಾಲಕ ಕಾರ್ತಿಕ್ ನೀಡಿದ್ದು, ಆತನೇ ಕಾಂಗ್ರೆಸ್ ನಾಯಕರಿಗೂ ತಲುಪಿಸಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಿದ್ದರು.

5) ಇದಕ್ಕೆ ಮಾರನೇ ದಿನ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಕಾರ್ತಿಕ್‌, ಬಿಜೆಪಿ ನಾಯಕ ಜಿ.ದೇವರಾಜೇ ಗೌಡ ರಾಜಕೀಯಕ್ಕೆ ಬಳಸಿಕೊಂಡರು ಎಂದು ಆರೋಪಿಸಿದ್ದಲ್ಲದೆ, ಕಾಂಗ್ರೆಸ್ ನಾಯಕರಿಗೆ ವಿಡಿಯೋ ಕೊಟ್ಟದ್ದು ತಾನಲ್ಲ ಎಂದು ಹೇಳಿದ್ದರು. ಎಸ್ಐಟಿ ವಿಚಾರಣೆಗೆ ಹಾಜರಾದ ಬಳಿಕ ಪೂರ್ಣ ವಿವರ ಮಾಧ್ಯಮಗಳಿಗೆ ಒದಗಿಸುವುದಾಗಿ ಕಾರ್ತಿಕ್ ಹೇಳಿದ್ದರು.

6) ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಈ ಘಟನೆ ನಡೆದ ಹಾಸನ ಸಂಸದರ ಸರ್ಕಾರಿ ನಿವಾಸವನ್ನು ಎಸ್‌ಐಟಿ ತಂಡ ವಶಕ್ಕೆ ತೆಗೆದುಕೊಂಡು, ಸಂತ್ರಸ್ತೆಯೊಂದಿಗೆ ಸ್ಥಳಮಹಜರು ಮಾಡಿದೆ. ನಿವಾಸಕ್ಕೆ ಬಿಗಿಬಂದೋಬಸ್ತ್ ಒದಗಿಸಲಾಗಿದೆ.

ಪ್ರಜ್ವಲ್ ರೇವಣ್ಣ ಕೇಸ್ - ಎಸ್‌ಐಟಿ ವಿಚಾರಣೆ ಎಲ್ಲಿವರೆಗೆ ಬಂತು

7) ಹಾಸನ ಲೈಂಗಿಕ ಹಗರಣ, ಅಶ್ಲೀಲ ವಿಡಿಯೋ ಕೇಸ್‌ನ ಸಂತ್ರಸ್ತೆಯರ ನೆರವಿಗೆ ಸಹಾಯವಾಣಿ ಪ್ರಕಟಿಸಿರುವ ಎಸ್ಐಟಿ, ಸಂತ್ರಸ್ತೆಯರು ಅಥವಾ ಅವರ ಸಂಬಂಧಿಕರು 6360938947ಕ್ಕೆ ಬೆಳಗ್ಗೆ 8ರಿಂದ ರಾತ್ರಿ 8ರ ನಡುವೆ ಕರೆ ಮಾಡಿ ದೂರು/ಅಹವಾಲು ಸಲ್ಲಿಸಬಹುದು. ಸಂತ್ರಸ್ತೆಯರ ಮತ್ತು ಅವರ ಸಂಬಂಧಿಕರ ಗೌಪ್ಯತೆ ಕಾಪಾಡುವುದಾಗಿ ಎಸ್‌ಐಟಿ ಭರವಸೆ ನೀಡಿದೆ.

8) ಹಾಸನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂಥದ್ದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದು ಸಂಬಂಧಿಸಿದ ಸಂತ್ರಸ್ತ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

9) ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಐಟಿ ತಂಡ ಸಾರ್ವಜನಿಕ ಎಚ್ಚರಿಕೆ ನೀಡಿದೆ. ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ್ದು, ಹಿಂಜರಿಯಬೇಕಾದ್ದು, ಅವಮಾನ ಎಂದು ಭಾವಿಸಬೇಕಾದ್ದು ಅಂತಹ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿಯೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು ಮತ್ತು ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ಎಸ್‌ಐಟಿ ವಿವರಿಸಿದೆ.

10) ಸೂಕ್ಷ್ಮಸಂವೇದನೆಯ ವಿಚಾರದಲ್ಲಿ ಎಸ್ ಐ ಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರುಗಳು, ವೈದ್ಯರುಗಳು, ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್ ಐ ಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ಮನವಿ ಮಾಡಿದೆ.

IPL_Entry_Point