ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ; ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ, ಎಸ್‌ಐಟಿ ಮೂಲ ಹೇಳಿಕೆ

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ; ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ, ಎಸ್‌ಐಟಿ ಮೂಲ ಹೇಳಿಕೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ ಎಂದು ಎಸ್‌ಐಟಿ ಮೂಲ ಹೇಳಿದ್ದು ಗಮನಸೆಳೆದಿದೆ. ಅವರ ವಿರುದ್ಧದ ಕೇಸ್ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ. ಈ ಕುರಿತ ವಿವರ ಇಲ್ಲಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಕಡತ ಚಿತ್ರ)
ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಕಡತ ಚಿತ್ರ) (PTI)

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆ ಮುಗಿಯುವ ಮೊದಲು ಭಾರತಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ದ ಮೂಲಗಳು ಬುಧವಾರ ತಡರಾತ್ರಿ ಹೇಳಿವೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ, ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಕೇಸ್‌ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ನಿನ್ನೆ ತಡರಾತ್ರಿ ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಆಗಮನವನ್ನು ನಿರೀಕ್ಷಿಸುತ್ತಿತ್ತು.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ತಡರಾತ್ರಿ 12.30ರ ಹೊತ್ತಿಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಇದಕ್ಕೆ ಪೂರಕವಾಗಿ ಅವರು ಲುಫ್ತಾನ್ಸಾ ವಿಮಾನದಲ್ಲಿ ಬುಕ್‌ ಮಾಡಿದ್ದರು ಎನ್ನಲಾದ ಟಿಕೆಟ್‌ನ ಪ್ರತಿಯ ಇಮೇಜ್‌ ವೈರಲ್ ಆಗಿತ್ತು. ಹೀಗಾಗಿ ಎಸ್‌ಐಟಿ ಅಧಿಕಾರಿಗಳ ತಂಡ ಅವರ ಆಗಮನವನ್ನು ನಿರೀಕ್ಷಿಸಿತ್ತು.

ಮರುಪ್ರಯಾಣ ಮುಂದೂಡುತ್ತಿರುವ ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ ಅವರು ಬುಧವಾರ ಮಧ್ಯಾಹ್ನ 12:20 ಕ್ಕೆ (ಜರ್ಮನ್ ಕಾಲಮಾನ) ನಿಗದಿತ ವಿಮಾನವನ್ನು ಕಾಯ್ದಿರಿಸಿದ್ದರು. ಆದಾಗ್ಯೂ, ವಿಮಾನವು ಜರ್ಮನಿಯಿಂದ ಹೊರಟಾಗ, ಪ್ರಜ್ವಲ್ ಅವರ ಹೆಸರು ಪ್ರಯಾಣಿಕರ ಪಟ್ಟಿಯಲ್ಲಿ ಇರಲಿಲ್ಲ ಎಂಬುದನ್ನು ಈ ವಿಷಯದ ಬಗ್ಗೆ ತಿಳಿದಿರುವ ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಟಿಕೆಟ್ ಅನ್ನು ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಟಿಕೆಟ್ ಬುಕ್‌ ಮಾಡಿದ ದಿನವೇ ಬುಕ್ ಮಾಡಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗುವ ಒಂದು ದಿನ ಮೊದಲು ಅವರು ಜರ್ಮನಿಗೆ ತೆರಳಿದ್ದರು ಎಂದು ಹೇಳಲಾಗಿದೆ.

ನಮಗನಿಸಿದ ಪ್ರಕಾರ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಬೆಂಗಳೂರಿಗೆ ವಾಪಸ್ ಬರಬಹುದು. ಅದಕ್ಕಿಂತ ಮೊದಲು ಬರುವ ನಿರೀಕ್ಷೆ ಇಲ್ಲ. ಅಕಸ್ಮಾತ್ ಬಂದರೂ ವಿಮಾನ ನಿಲ್ದಾಣದಲ್ಲಿ ನಮ್ಮ ಅಧಿಕಾರಿಗಳು ಎಚ್ಚರದಿಂದ ಇದ್ದಾರೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿಮಾಡಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಕೇಸ್; ಏನಿದು ಪ್ರಕರಣ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಈ ಸಲ ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಲೋಕಸಭೆ ಚುನಾವಣೆಯ ಹಾಸನ ಕ್ಷೇತ್ರದ ಮತದಾನ ಏಪ್ರಿಲ್ 26 ರಂದು ನಡೆಯಿತು. ಇದಕ್ಕೂ ಮೊದಲೇ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ವಿಚಾರ ಸದ್ದು ಮಾಡಿತ್ತು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ಮುಖಂಡ ಜಿ ದೇವರಾಜೇ ಗೌಡ ಅವರು ಈ ಪೆನ್ ಡ್ರೈವ್ ವಿಚಾರ ಪ್ರಸ್ತಾಪಿಸಿದ್ದರು. ಈ ನಡುವೆ, ರೇವಣ್ಣ ಕುಟುಂಬದ ಚಾಲಕ ಕಾರ್ತಿಕ್ ಬಳಿ ಪೆನ್‌ಡ್ರೈವ್ ಇದೆ ಎಂಬುದನ್ನು ಅರಿತ ಪ್ರಜ್ವಲ್ ರೇವಣ್ಣ ಕೋರ್ಟ್‌ನಿಂದ ಅದನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು.

ಆದರೆ, ಲೋಕಸಭೆ ಚುನಾವಣೆಯ ಮತದಾನ ದಿನಕ್ಕೆ ಕೆಲವೇ ದಿನಗಳ ಮೊದಲು ಈ ಅಶ್ಲೀಲ ವಿಡಿಯೋ, ಫೋಟೋಗಳು ಬಹಿರಂಗವಾಗಿವೆ. ಇದರ ಬೆನ್ನಿಗೆ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಈ ದೂರು ದಾಖಲಾಗಿರುವುದ ಗೊತ್ತಾಗುತ್ತಿದ್ದಂತೆ ಏಪ್ರಿಲ್ 26 ರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ್ದ ಹೆಚ್ ಡಿ ರೇವಣ್ಣ, ಪುತ್ರ ಪ್ರಜ್ವಲ್‌ ರೇವಣ್ಣ ಕೆಲಸದ ನಿಮಿತ್ತ ಜರ್ಮನಿಗೆ ಹೋಗಿರುವುದಾಗಿ ಹೇಳಿದ್ದರು. ವಿಚಾರಣೆಗೆ ಆತ ಹಾಜರಾಗುತ್ತಾನೆ ಎಂದೂ ಹೇಳಿದ್ದರು. ಆದರೆ ಈಗ ಎರಡು ಬಾರಿ ಪ್ರಜ್ವಲ್ ರೇವಣ್ಣ ವಿಮಾನ ಟಿಕೆಟ್ ರದ್ದುಗೊಳಿಸಿ ಮರುಪ್ರಯಾಣ ಮುಂದೂಡಿದ್ದಾರೆ.

IPL_Entry_Point