Haveri News: 34 ವರ್ಷದ ನಂತರ ಹಾವೇರಿ ಜಿಲ್ಲೆಯ ಈ ಊರಲ್ಲಿ ಬಸವಣ್ಣ ದೇವರ ರಥೋತ್ಸವ, ದೇಗುಲ ಜೀರ್ಣೋದ್ದಾರ ನಂತರ ಜಾತ್ರೆ ಸಡಗರ
Haveri News: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ತುಮ್ಮನಕಟ್ಟಿ ಗ್ರಾಮದ ಬಸವೇಶ್ವರ ರಥೋತ್ಸವವು 34 ವರ್ಷಗಳ ನಂತರ ನಡೆಯುತ್ತಿರುವುದು ವಿಶೇಷ. ಜಾತ್ರೆಯ ಕುರಿತ ಮಾಹಿತಿ ಇಲ್ಲಿದೆ.

ಇದು ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಕೊಂಡಿಯಂತಿರುವ ಹಾವೇರಿ ಜಿಲ್ಲೆಯ ಹಾಗೂ ದಾವಣಗೆರೆ ಜಿಲ್ಲೆಯ ಗಡಿ ಊರು. ಸಮೀಪದಲ್ಲಿಯೇ ಹರಿಯುವ ತುಂಗಭದ್ರಾ ನದಿ. ಈ ನದಿಯೇ ಎರಡೂ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ನದಿ ಕಾರಣದಿಂದ ಸುತ್ತಲೂ ಹಸಿರು ವಾತಾವರಣ. ಈ ಊರಲ್ಲಿ ಬರೋಬ್ಬರಿ 34 ವರ್ಷದ ಹಿಂದೆ ಊರಿನ ಬಸವಣ್ಣ ದೇವರ ರಥೋತ್ಸವ ನಡೆದಿತ್ತು. ಕಾರಣಾಂತರದಿಂದ ಮುಂದೆ ರಥೋತ್ಸವ ನಡೆಯಲೇ ಇಲ್ಲ. ಊರವರು ಸೇರಿ ಬಸವಣ್ಣ ದೇವರ ಗುಡಿಯನ್ನು ಈಗ ಜೀರ್ಣೋದ್ದಾರ ಮಾಡಿದ್ದಾರೆ. ಊರಲ್ಲಿ ದೇವಸ್ಥಾನಕ್ಕೆ ಹೊಸತನ ಬಂದ ಖುಷಿಯಲ್ಲಿ ಜಾತ್ರೆಯನ್ನೂ ಆಚರಿಸುವ ಸಂತಸ. ಇದಕ್ಕಾಗಿ 2025ರ ಫೆಬ್ರವರಿ 7ರ ಶುಕ್ರವಾರ ಗ್ರಾಮದಲ್ಲಿ ರಥ ಊರ ಮುಖ್ಯ ಬೀದಿಗಳಲ್ಲಿ ಹರಿಯಲಿದೆ. ಈ ಖುಷಿ ಕ್ಷಣ ಎದುರುಗೊಳ್ಳಲು ಜನರೂ ಅಣಿಯಾಗಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟೆ ಗ್ರಾಮ ನೇಕಾರಿಕೆ ಮತ್ತು ಹೆಸರು ವಡೆಗೆ ಹೆಸರಾಗಿದೆ. ಹಲವು ವರ್ಷಗಳಿಂದ ಎಲ್ಲಾ ಸಮುದಾಯ ಸಮಾಜದವರು, ಧರ್ಮದವರು, ನೇಕಾರಿಕೆ ವೃತ್ತಿಯನ್ನ ಕುಲಕಸುಬು ಎನ್ನುವಂತೆ ಎಲ್ಲರೂ ಮಾಡುತ್ತಿದ್ದಾರೆ. ಹತ್ತಿ ಜೋಳಗಳನ್ನು ಬೆಳೆಯುವುದು ಇಲ್ಲಿನ ಕೃಷಿಕರ ಪ್ರಮುಖ ಬೆಳೆಯಾಗಿದೆ. ಇಲ್ಲಿಗೆ ಮೂವತ್ತನಾಲ್ಕು ವರ್ಷಗಳ ಹಿಂದೆ ಬೆಲ್ಲದ ಪೇಟೆಯಲ್ಲಿರುವ ಬಸವಣ್ಣ ದೇವಸ್ಥಾನ ( ಬಸಂದೆರ ಗುಡಿ ) ದ ಬಸವಣ್ಣನ ರಥೋತ್ಸವ ನಡೆದಿತ್ತು. ಕಾರಣಾಂತರಗಳಿಂದ ಅದು ನಿಂತು ಹೋಗಿತ್ತು. ಐದಾರು ವರ್ಷಗಳ ಹಿಂದೆ ದೇವಸ್ಥಾನ ಜೀರ್ಣೋದ್ದಾರವಾಗಿದೆ, ಈ ವರ್ಷ ಫೆಬ್ರವರಿ 7ರ ಶುಕ್ರವಾರದಂದು ಮಹಾರಥೋತ್ಸವ ನಡೆಯುತ್ತಿದೆ ಎಂದು ಗ್ರಾಮದವರೇ ಆದ ಲೇಖಕ ಶಿವಪ್ರಸಾದ ಕರ್ಜಗಿ ಹೇಳುತ್ತಾರೆ.
ಈ ಗ್ರಾಮದಲ್ಲಿ ಎಲ್ಲಾ ಜಾತಿ ಧರ್ಮಗಳ ಜನರು ಇದ್ದಾರೆ. ಭಾವೈಕ್ಯತೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ಊರಿನಲ್ಲಿ ಬಸವ ಜಯಂತಿಯಂದು ಈಶ್ವರ ದೇವರ ರಥೋತ್ಸವ, ಯುಗಾದಿಯ ಮರುದಿನ ಆಂಜನೇಯ ರಥೋತ್ಸವ, ಹೋಳಿ ಹುಣ್ಣಿಮೆ ಹಬ್ಬ, ಇತ್ತೀಚಿಗೆ ಆರು ವರ್ಷಗಳಿಂದ ಸಿದ್ದಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ನಡೆಯುತ್ತಿದೆ. ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಸಹ ಇದೆ. 2025 ರ ಫೆಬ್ರವರಿ 9ರ ಭಾನುವಾರದಂದು ಸಂತೆ ಪೇಟೆಯಲ್ಲಿ ಗದಗ ವಿರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ಮತ್ತು ಮತ್ತಿತರರ ಶ್ರೀಗಳ ಸಾನಿಧ್ಯದಲ್ಲಿ ಧರ್ಮ ಸಭೆ, ಉತ್ಸವ ನಡೆಯುತ್ತಿದೆ. ಹಾಗೂ ಗ್ರಾಮದಲ್ಲಿ ಇನ್ನು ಹಲವು ದೇವತೆಗಳ ಜಾತ್ರಾ ಮಹೋತ್ಸವಗಳು ನಡೆಯುತ್ತವೆ.
ಇನ್ನೊಂದು ಈ ಊರಲ್ಲಿ ವಿಶೇಷ ಎಂದರೆ ; ಹದಿನೈದು ಇಪ್ಪತ್ತು ವರ್ಷಗಳ ಇಂದೆ ; ಇಲ್ಲಿ ಒಂದು ಹೋರಿ ಇತ್ತು, ಅದು ನೋಡಲು ಆನೆಯಂತೆ ಇತ್ತು, ಸೊಂಡಿಲು ಒಂದು ಇರಲಿಲ್ಲ ಅಷ್ಟೇ.ಇದು ಎಲ್ಲರ ಮನೆ ಮನೆಗೂ ಹೋಗಿ ಅಕ್ಕಿ -ಬೆಲ್ಲವನ್ನು ಸ್ವೀಕರಿಸಿ ಮುಂದಕ್ಕೆ ಹೋಗುತ್ತಿತ್ತು. ಅದಕ್ಕೆ ಎಲ್ಲರೂ ಬೆಲ್ಲದ ಮರಿ ಎಂದೇ ಕರೆಯುತ್ತಿದ್ದರು. ಆ ಹೋರಿ ( ಬಸವಣ್ಣ ) ಯನ್ನು ಯಾರಾದರೂ ಹೊಸಬರು ನೋಡಿದರೆ ಹೆದರಬೇಕು ಆಗಿತ್ತು. ಆದರೆ ಅದು ಯಾರಿಗೂ ತೊಂದರೆ ಕೊಟ್ಟ ಉದಾಹರಣೆಗಳಿಲ್ಲ. ಅದು ನಡೆದು ಬರುತ್ತಿದ್ದರೆ ಆನೆಯೇ ಬಂದಿತೇನೋ ಎನ್ನುವಂತೆ ಇತ್ತು. ರಾತ್ರಿ ಬೆಲ್ಲದ ಪೇಟೆಯ ಬಸಂದೆರ ಗುಡಿಯ ಮುಂದೆಯೇ ಮಲಗುತ್ತಿತ್ತು. ನಂತರ ಬಸವನಲ್ಲಿ ಲೀನವಾಯಿತು.
ಹಬ್ಬ ಹರಿದಿನ ಜಾತ್ರೆ ರಥೋತ್ಸವಗಳು ಸಂಸ್ಕೃತಿಯನ್ನು ಅನಾವರಣಗೊಳಿಸಿ, ಅರಿವನ್ನು ವಿಕಾಸ ಮಾಡಿಕೊಳ್ಳಲು ಕಾರಣವಾಗಿವೆ. ಹಾಗಾಗಿ ಯಾವುದೇ ನಗರ ಗ್ರಾಮಗಳಾಗಿರಲಿ, ಅಲ್ಲಿಯ ಧರ್ಮ ಸಮುದಾಯಕ್ಕೆ ತಕ್ಕಂತೆ ಮನೆ ಮನೆಗಳಲ್ಲಿ ಹಬ್ಬಗಳು ನಡೆಯುತ್ತಿರುತ್ತವೆ. ಮತ್ತು ಸಾರ್ವಜನಿಕವಾಗಿ ದೇವಸ್ಥಾನ ಮಠ ಮಂದಿರಗಳಲ್ಲಿ ಸಾರ್ವಜನಿಕವಾಗಿ ಉತ್ಸವಗಳು ನಡೆಯುತ್ತವೆ.
ಈ ರೀತಿಯಾಗಿ ಭಕ್ತಿ ಸಂಪ್ರದಾಯಗಳ ಸಂಭ್ರಮದಲ್ಲಿ ಜನರು ಮಿಂದೇಳುತ್ತಾರೆ. ಎಲ್ಲಾ ಹಬ್ಬ ಉತ್ಸವಗಳಿಗಿಂತ ; ರಥೋತ್ಸವದ ಕಾರ್ಯಕ್ರಮ ಎಂದರೆ ಸಣ್ಣವರಿಂದ ದೊಡ್ಡವರಿಗೂ ಎಲ್ಲಿಲ್ಲದ ಸಡಗರ. ಮಕ್ಕಳು ಹೊಸ ಬಟ್ಟೆ ತೊಡುವ ಸಂಭ್ರಮವಿರುತ್ತದೆ. ವಿಧ ವಿಧವಾದ ಸಿಹಿ ಊಟ, ತಿಂಡಿ ತಿನಿಸುಗಳನ್ನು ತಿನ್ನುವುದರೊಂದಿಗೆ ; ಎಲ್ಲರ ಮನೆ ಮನೆಗಳಲ್ಲಿ ಆನಂದ ಆವರಿಸಿರುತ್ತದೆ. ಊರಿಂದ ಬೇರೆ ಊರಿಗೆ ಕೆಲಸದ ನಿಮಿತ್ಯ ಹೋದಂತಹ ಸಂಬಧಿಕರು, ಸ್ನೇಹಿತರು ಸಹ ಈ ಸಮಯಕ್ಕೆ ಬಂದು, ತಮ್ಮ ಹಳೆಯ ಆಟ ಪಾಠಗಳ, ತುಂಟಾಟಗಳ ನೆನಪು ಮಾಡಿಕೊಂಡು ಸಂಭ್ರಮದಲ್ಲಿ ಭಾಗಿಯಾಗುವುದು ನಮ್ಮ ಆನಂದಕ್ಕೆ ಪಾರವೇ ಇಲ್ಲದಂತೆ ಆಗಿರುತ್ತದೆ. ಅಂತಹ ಸಂಭ್ರಮ ತುಮ್ಮಿನಕಟ್ಟಿಯಲ್ಲಿ ಈ ಬಾರಿ ಮನೆ ಮಾಡಿದೆ.
