ಹಾವೇರಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳಿಗೆ ಜಾಮೀನು: ಬಿಡುಗಡೆಯಾದ ಬಳಿಕ ರೋಡ್ ಶೋ
ಹಾವೇರಿ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಏಳು ಮಂದಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದ್ದಿದ್ದರಿಂದ ಅವರಿಗೆ ಜಾಮೀನು ಲಭಿಸಿದ್ದು, ಬಿಡುಗಡೆಯಾದ ಬಳಿಕ ಎಳು ಮಂದಿ ರೋಡ್ ಶೋ ನಡೆಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹಾವೇರಿ: ಹಾನಗಲ್‌ನಲ್ಲಿ ನಡೆದಿದ್ದ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳಿಗೆ ಜಾಮೀನು ಲಭಿಸಿದ್ದು, ಹೊರಗಡೆ ಬರುತ್ತಿದ್ದಂತೆ ರೋಡ್ ಶೋ ನಡೆಸಿದ ಏಳು ಮಂದಿ ವಿರುದ್ಧ ಪೊಲೀಸರು ಮತ್ತೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಶೋಧ ಮುಂದುವರಿದಿದೆ.
ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದ್ದಿದ್ದರಿಂದ ಏಳು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು. ಮತ್ತೆ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ವಿಚಾರಣೆಯ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ ಎಂದು ಆರೋಪಿಗಳು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. ಆದರೆ ಜಾಮೀನು ಪಡೆದು ಹೊರಗಡೆ ಬರುತ್ತಿದ್ದಂತೆ, ಗೆಳೆಯರ ಸಹಾಯದೊಂದಿಗೆ ವಾಹನಗಳಲ್ಲಿ ರೋಡ್ ಶೋ ನಡೆಸಿದ್ದಾರೆ.
ಅತ್ಯಾಚಾರ ಆರೋಪಿಗಳ ಈ ವರ್ತನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪಿಗಳ ವಿರುದ್ಧ
ಪೊಲೀಸರು ಕ್ರಮ ಕೈಗೊಂಡಿದ್ದು, ಹಾವೇರಿಯ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾದ ಇಬ್ಬರ ಪತ್ತೆಗೆ ಬಲೆ ಬೀಸಲಾಗಿದೆ. ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಆರೋಪಿಗಳು ಉಲ್ಲಂಘಿಸಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಿದ್ದಾರೆ.
ಜನವರಿ 8, 2024ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್‌ರೇಪ್ ನಡೆದಿತ್ತು. ಬಳಿಕ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಯನ್ನು ಬದಲಿಸಿದ್ದರಿಂದ, ಸಾಕ್ಷ್ಯಾಧಾರಗಳ ಕೊರತೆಯಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.