ಹಾವೇರಿ: ಮೃತ ವ್ಯಕ್ತಿ ಎದ್ದು ಕುಳಿತ ಸುದ್ದಿ ವೈರಲ್; ನಿಜ ಸ್ಥಿತಿ ವಿವರಿಸಿದ್ರು ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ
“ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂದು ಪತ್ನಿ ಕೇಳಿದ ಕೂಡಲೇ ಎದ್ದು ಕುಳಿತ ಮೃತ ವ್ಯಕ್ತಿಯ ಸುದ್ದಿ ವೈರಲ್ ಆಗಿತ್ತು. ಆದರೆ, ನಿಜ ಸ್ಥಿತಿಯನ್ನು ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ವಿವರಿಸಿದ್ದಾರೆ.

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ಕುಟುಂಬ ಸದಸ್ಯರಿಗೆ ಆಂಬುಲೆನ್ಸ್‌ನಲ್ಲಿ ಆತ ಊಟಕ್ಕೆ ಎದ್ದು ಕುಳಿತಾಗ ಆಘಾತವಾಗಿತ್ತು. ಊರಿನಲ್ಲಿ ಮೃತಪಟ್ಟಿದ್ದಾನೆಂದು ಹೇಳಲಾದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಊರು ತುಂಬಾ ಶ್ರದ್ಧಾಂಜಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಮೃತಪಟ್ಟ ವ್ಯಕ್ತಿ ಬದುಕಿ ಬಂದ ಎಂಬ ಸುದ್ದಿ ವೈರಲ್ ಆಯಿತು. ಆದರೆ, ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ಅವರು ಈ ಕಹಾನಿಯ ನಿಜಸ್ಥಿತಿ ಏನು ಎಂಬುದನ್ನು ವಿವರಿಸಿದ್ದಾರೆ.
“ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂಬ ಪತ್ನಿ ಕರೆಗೆ ಓಗೊಟ್ಟು ಎದ್ದು ಕುಳಿತ ಮೃತ ವ್ಯಕ್ತಿ- ಸುದ್ದಿ ವೈರಲ್
ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆಗೆ ಊರಲ್ಲಿ ಸಿದ್ಧತೆ ನಡೆಸಿದ್ದರು. ಆಂಬುಲೆನ್ಸ್ ಮೂಲಕ ಮೃತ ವ್ಯಕ್ತಿಯನ್ನು ಕೊಂಡೊಯ್ಯುವಾಗ ದಾರಿ ಮಧ್ಯೆ, ಆತನ ಪತ್ನಿ ಶೀಲಾ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂದು ಕೇಳಿದ ಕೂಡಲೆ, ಮೃತ ವ್ಯಕ್ತಿ ಎದ್ದು ಕುಳಿತಿದ್ದ. ಈ ವಿಚಾರ ಊರು ತುಂಬಾ ಹರಡಿತ್ತು. ಸುದ್ದಿ ವೈರಲ್ ಆಯಿತು. ಇದೇ ವೇಳೆ, ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಆತನಿಗೆ ಅಲ್ಲಿ ಈಗ ಚಿಕಿತ್ಸೆ ಮುಂದುವರಿದಿದೆ.
ಮೃತಪಟ್ಟು ಬದುಕಿ ಬಂದ ವ್ಯಕ್ತಿ ಎಂದು ಹೇಳಲಾಗುತ್ತಿರುವ ವ್ಯಕ್ತಿಯನ್ನು ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ (45) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬಂಕಾಪುರದ ಮಂಜುನಾಥ ನಗರದ ನಿವಾಸಿ.
ಕುಟುಂಬ ಸದಸ್ಯರು ಹೇಳಿದ್ದಿಷ್ಟು
ಬಿಷ್ಣಪ್ಪ ಅಶೋಕ ಗುಡಿಮನಿ ಮೂರ್ನಾಲ್ಕು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಷ್ಣಪ್ಪ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ ಕಾರಣ ಅವರ ಪತ್ನಿ ಮತ್ತು ಸಂಬಂಧಿಕರು ಬಂಕಾಪುರಕ್ಕೆ ಹೊರಟಿದ್ದರು. ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ "ಡಾಬಾ ಬಂತು ನೋಡು ಊಟ ಮಾಡುತ್ತೀಯಾ?' ಎಂದು ಶೀಲಾ ಕೇಳಿ ಗೋಳಾಡಿ ಕಣ್ಣೀರಿಟ್ಟಾಗ, ಮೃತ ವ್ಯಕ್ತಿ ಸ್ಪಂದಿಸಿದ್ದಾನೆ. ಗಾಬರಿಯಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ, ವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರೋದು ದೃಢಪಡಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಅದೇ ವಾಹನದಲ್ಲಿ ಕರೆತಂದು ಕಿಮ್ಸ್‌ಗೆ ದಾಖಲಿಸಲಾಗಿದೆ. ಅಲ್ಲಿ ಈಗ ಚಿಕಿತ್ಸೆ ಮುಂದುವರಿದಿದೆ.
ನಿಜ ಸ್ಥಿತಿ ವಿವರಿಸಿದ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ
“ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂಬ ಪತ್ನಿ ಕರೆಗೆ ಓಗೊಟ್ಟು ಎದ್ದು ಕುಳಿತ ಮೃತ ವ್ಯಕ್ತಿ ಎಂಬ ಸುದ್ದಿ ವೈರಲ್ ಆಗಿರುವ ಘಟನೆ ಬಗ್ಗೆ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ಸ್ಪಷ್ಟನೆ ನೀಡಿದ್ದಾರೆ.
ಬಿಷ್ಣಪ್ಪ ಅವರನ್ನು ನಿನ್ನೆ ಸಂಜೆ 4.20ಕ್ಕೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಚಿಂತಾಜನಕವಾಗಿತ್ತು. ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ ಸಚಿನ್ ಹೊಸಕಟ್ಟಿ ನೇತೃತ್ವದ ತಂಡ ಕೆಲಸ ಮಾಡುತ್ತಿದೆ. ಈ ವ್ಯಕ್ತಿ ಇದಕ್ಕೂ ಮೊದಲು ಧಾರವಾಡ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ನೀಡಿರುವ ಮೆಡಿಕಲ್ ವರದಿ ಗಮನಿಸಿದ್ದೇವೆ. ಅದರಲ್ಲಿ, ರೋಗಿಯ ಸಂಬಂಧಿಗಳು "ಡಿಸ್‌ಚಾರ್ಜ್ ಅಗೇನಿಸ್ಟ್ ಮೆಡಿಕಲ್ ಅಡ್ವೈಸ್' ಎಂಬ ಷರಾ ಇದೆ. ಅದು ಬಿಟ್ಟು, ವ್ಯಕ್ತಿ ಮೃತಪಟ್ಟ ಬಗ್ಗೆ ಅಧಿಕೃತ ಉಲ್ಲೇಖ ಇಲ್ಲ. ಅದೇನೇ ವಿಷಯ ಇದ್ದರೂ, ಬಿಷ್ಟಪ್ಪ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ವಿವರಿಸಿದ್ದಾರೆ.
