ಕನ್ನಡ ಸುದ್ದಿ  /  Karnataka  /  Haveri News Byadgi Chilli Market Back To Normal And Protest Has Caused A Loss Of Around <Span Class='webrupee'>₹</span>4 Cr Uks

ಬ್ಯಾಡಗಿ ಎಪಿಎಂಸಿ ಹಿಂಸಾಚಾರ; 4 ಕೇಸ್ ದಾಖಲು, 80ಕ್ಕೂ ಹೆಚ್ಚು ಬಂಧನ, 4 ಕೋಟಿ ರೂಪಾಯಿ ನಾಶನಷ್ಟ

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಮೆಣಸಿನಕಾಯಿ ದರ ಕುಸಿತದ ಬೆನ್ನಲ್ಲೇ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ 4 ಕೇಸ್‌ಗಳು ದಾಖಲಾಗಿವೆ. 80ಕ್ಕೂ ಹೆಚ್ಚು ಜನರ ಬಂಧನವಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಇನ್ನಷ್ಟು ವಿವರ ಇಲ್ಲಿದೆ.

ಹಾವೇರಿಯ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆದ ಹಿಂಸಾಚಾರದ ಸಂದರ್ಭ (ಕಡತ ಚಿತ್ರ)
ಹಾವೇರಿಯ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆದ ಹಿಂಸಾಚಾರದ ಸಂದರ್ಭ (ಕಡತ ಚಿತ್ರ)

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ ದಿಢೀರ್ ಶೇಕಡ 10 ರಷ್ಟು ಕುಸಿತವಾದ ಕಾರಣ ಸಾವಿರಾರು ರೈತರು ದಿಢೀ‌ರ್ ಪ್ರತಿಭಟನೆ ನಡೆಸಿ ಹಿಂಸಾಚಾರಕ್ಕೆ ಇಳಿದ ಕಾರಣ ಪ್ರಕ್ಷುಬ್ಧಗೊಂಡಿದ್ದ ಬ್ಯಾಡಗಿ ಪಟ್ಟಣ ಈಗ ಸಹಜ ಸ್ಥಿತಿಗೆ ಮರಳಿದೆ.

ಒಣ ಮೆಣಸಿನಕಾಯಿ ದರ ಕುಸಿತವಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನಡೆದಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಕಾರಣ ಎಪಿಎಂಸಿ ಕಚೇರಿಗೆ ಹಾನಿಎಸಗಲಾಗಿತ್ತು. ಅದೇ ರೀತಿ 8 ವಾಹನಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು. ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿತ್ತು. ಈ ಘಟನೆಯಲ್ಲಿ ಎಸ್‌ಪಿ ಅಂಶುಕುಮಾರ ಸೇರಿ ಕೆಲ ಪೊಲೀಸರಿಗೂ ಪೆಟ್ಟುಬಿದ್ದಿದೆ. ಖಾಸಗಿ ವಾಹಿನಿ ಕ್ಯಾಮರಾಮನ್‌ಗೂ ಸಹ ತಲೆ, ಕೈಗೆ ಪೆಟ್ಟಾಗಿತ್ತು. ಎಲ್ಲರೂ ಚಿಕಿತ್ಸೆ ಪಡೆದುಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಣಸಿನಕಾಯಿ ದರ ಕುಸಿತ ಇದೇ ಮೊದಲ ಪ್ರಕರಣವಲ್ಲ. ಈ ಹಿಂದೆಯೂ ಇದೇ ರೀತಿ ಹಲವಾರು ಬಾರಿ ದರ ಕುಸಿತವಾಗಿದೆ. ಆದರೆ ರೈತರು ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ದರದಲ್ಲಿ ಹೆಚ್ಚು ಮಾಡಿಕೊಂಡು ಶಾಂತಿಯುತವಾಗಿ ತೆರಳಿದ ಉದಾಹರಣೆಗಳಿವೆ. ಆದರೆ ಸೋಮವಾರದ ಘಟನೆ ಅನೇಕ ಸಂದೇಹಗಳಿಗೆ ಕಾರಣವಾಗಿದೆ. ರೈತರು ಯಾವುದೇ ಮಾತುಕತೆ ನಡೆಸದೇ ಏಕಾಏಕಿ ಕಚೇರಿಗೆ ನುಗ್ಗಿ ಪ್ರತಿಭಟನೆ ವಿದ್ವಂಸಕ ಕೃತ್ಯ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬ್ಯಾಡಗಿ ಹಿಂಸಾಚಾರ; 4 ಪ್ರತ್ಯೇಕ ಪ್ರಕರಣ ದಾಖಲು, 80 ಜನರ ಬಂಧನ

ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲಾಗಿವೆ. ಎಪಿಎಂಸಿ ಕಾರ್ಯದರ್ಶಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಹಾಗೂ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮನ್‌ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಈವರೆಗೆ 80ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಐಜಿಪಿ ತ್ಯಾಗರಾಜನ್, ಹಾವೇರಿ, ದಾವಣಗೆರೆ, ಚಿತ್ರದುರ್ಗ ಎಸ್ಪಿ ನೇತೃತ್ವದಲ್ಲಿ 800 ಪೊಲೀಸ್‌ ಸಿಬ್ಬಂದಿಯೊಂದಿಗೆ ಭದ್ರತೆ ಹೆಚ್ಚಿಸಿದ್ದಾರೆ. ಸಿಐಎಸ್‌ ಎಫ್ ಪಡೆ ಸಹ ಮಾರುಕಟ್ಟೆಯಲ್ಲಿ ಪಥಸಂಚಲನ ಮಾಡಿ ಭದ್ರತೆ ಹೆಚ್ಚಿಸಿದ್ದಾರೆ.

ಬ್ಯಾಡಗಿ ಹಿಂಸಾಚಾರ; 4 ಕೋಟಿ ಆಸ್ತಿ ಹಾಳು

ಪ್ರತಿ ವಾರದಂತೆ ಸೋಮವಾರ ಕೂಡ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ನಿರೀಕ್ಷೆಗೂ ಮೀರಿ 3.ll ಲಕ್ಷ ಮೆಣಸಿನಕಾಯಿ ಚೀಲಗಳು ಅವಕವಾಗಿದ್ದವು. ಆದರೆ, ದರದಲ್ಲಿ ಶೇಕಡ 10 ಕುಸಿತ ಆಗಿದೆ ಎಂದು ಬಳ್ಳಾರಿ, ರಾಯಚೂರು ಭಾಗದಿಂದ ಬಂದಿದ್ದ 500ಕ್ಕೂ ಹೆಚ್ಚು ರೈತರು ದಾಂಧಲೆ ಶುರು ಮಾಡಿದರು. ಕೆಲ ಕಿಡಿಗೇಡಿಗಳು ಕಚೇರಿಗೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಇಂತಹ ಹಿಂಸಾತ್ಮಕ ಕೃತ್ಯ ನಡೆಸಿರುವ ಪರಿಣಾಮ ಸುಮಾರು 4 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಪಾಸ್ತಿ ಹಾಳಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ಅಂದಾಜಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)