CM Bommai in Shiggaon: ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ; ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಬೊಮ್ಮಾಯಿ
CM Bommai in Shiggaon: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಂದಾಪುರ ಗ್ರಾಮದಲ್ಲಿ ರೋಡ್ ಶೋ ನಡೆಸಿದರು.
ಹಾವೇರಿ (ಶಿಗ್ಗಾಂವಿ): ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿ (Shiggaon) ವಿಧಾನಸಭಾ ಕ್ಷೇತ್ರದ ಚಂದಾಪುರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆದೆ. ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿ ಇದೆ. ಹುದ್ದೆಯ ಗೌರವ ನಿಮಗೆ ಸಲುತ್ತದೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ಇದೆ ಎಂದರು.
ನಾನು ಸಿಎಂ ಆದ ಕೂಡಲೇ ವಿದ್ಯಾನಿಧಿ ಯೋಜನೆ ಮಾಡಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಲಾಭ ದೊರೆತಿದೆ. ಶಿಗ್ಗಾಂವಿಯಲ್ಲಿ ಸುಮಾರು 8 ಸಾವಿರ ಮಕ್ಕಳಿಗೆ ಇದರ ಲಾಭ ದೊರೆತಿದೆ. ರೈತರ ಮಕ್ಕಳೂ ಡಾಕ್ಟರ್, ಇಂಜಿನಿಯರ್ ಆಗಬೇಕು. ನಾವು ಮತ್ತೆ ಯಶಸ್ವಿನಿ ಯೋಜನೆ ಮರು ಜಾರಿ ಮಾಡಿದ್ದೇವೆ. ಎಸ್ಸಿ ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಿದ್ದೇವೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಶಿಗ್ಗಾಂವಿ- ಸವಣೂರು ತಾಲೂಕಿನ 32 ಸಾವಿರ ರೈತರಿಗೆ ಅನುಕೂಲ ದೊರೆತಿದೆ. ಕೊರೊನಾ ಸಮಯದಲ್ಲಿ ನಮ್ಮ ಪ್ರಧಾನಿ ವ್ಯಾಕ್ಸಿನ್ ಕೊಡಿಸಿದ್ದರಿಂದ ನಾವೆಲ್ಲರೂ ಮುಕ್ತವಾಗಿ ಅರಾಮ್ ಇದ್ದೇವೆ. ಮನೆ ಮನೆ ಗಂಗೆ ಯೋಜನೆಯಡಿ 136 ಗ್ರಾಮಗಳಿಗೆ 438 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದೇವೆ. ತುಂಗಭದ್ರಾ ನದಿಯಿಂದ ನೀರು ತರುತ್ತಿದ್ದೇವೆ ಎಂದರು.
ರಾಜ್ಯಾದ್ಯಂತ ಬಿಜೆಪಿ ಅಲೆ ಇದೆ. ಮೈಸೂರು ವರುಣಾದಲ್ಲಿ ಬಿಜೆಪಿ ಅಲೆ ಇದೆ. ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಿಮ್ಮ ಆಶೀರ್ವಾದ ನೀಡಿ ಬಹುಮತದಿಂದ ಆರಿಸಿ ಕಳುಹಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ನಿನ್ನೆ (ಮೇ 5, ಶುಕ್ರವಾರ) ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಟಿ.ನರಸೀಪುರ ಅಭ್ಯರ್ಥಿ ಡಾ. ರೇವಣ್ಣ ವರುಣಾದಲ್ಲಿ ಪರ ಮುಖ್ಯಮಂತ್ರಿ ಬೊಮ್ಮಾಯಿ ರೋಡ್ ಶೋ ನಡೆಸಿದರು. ಬಳಿಕ ಮಾತನಾಡಿದ ಅವರು, ವರುಣಾದಲ್ಲಿ ರೈತರು, ಯುವಕರು, ಮಹಿಳೆಯರು ಸೇರಿ ಸೋಮಣ್ಣ ಅವರನ್ನು ಪ್ರತಿನಿಧಿಸಲು ನಿರ್ಧರಿಸಿರುವುದರಿಂದ ಈ ಕ್ಷೇತ್ರದಲ್ಲಿ ರಂಗು ರಂಗಿನ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಅವರನ್ನು ‘ವಿಕ್ಟರಿ ಸೋಮಣ್ಣ’ ಎಂದು ಕರೆದ ಬೊಮ್ಮಾಯಿ, ಆಡಳಿತ ನಡೆಸಲು ಬಾರದವರಿಗೆ ಈ ಕ್ಷೇತ್ರದಲ್ಲಿ ಅಧಿಕಾರ ನೀಡಲಾಗಿದೆ. ಸ್ಥಬ್ದ ಆಡಳಿತ ನೀಡುತ್ತಿದ್ದಾರೆ. ಸೋಮಣ್ಣ ಅವರನ್ನು ಆಯ್ಕೆ ಮಾಡಿದರೆ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನ ತಂದುಕೊಡುತ್ತೇವೆ ಎಂದರು.
ಟಿ. ನರಸೀಪುರ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಅವರು ವೃತ್ತಿಯಲ್ಲಿ ವೈದ್ಯರು. ಜನಸೇವೆ ಮಾಡುವ ವೈದ್ಯರು ಜನಕ್ಕೆ ಬೇಕೋ ಅಥವಾ ಮನೆಯಲ್ಲಿ ಕುಳಿತು ಆದೇಶ ಹೊರಡಿಸುವ ನಾಯಕರು ಬೇಕೋ? ಬಿಜೆಪಿ ಅಭ್ಯರ್ಥಿ ಯಾವಾಗ ಬೇಕಾದರೂ ನಿಮ್ಮ ಸೇವೆಗೆ ಸಿದ್ಧ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಲಾ 10 ಮತಗಳನ್ನು ಪಡೆದರೆ ರೇವಣ್ಣ ಅವರು 10,000 ಮತಗಳು ಅಂತರದಿಂದ ಆಯ್ಕೆಯಾಗುತ್ತಾರೆ ಎಂದು ಹೇಳಿದರು.